90ರ ದಶಕದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಯಶಸ್ಸು ಕಂಡು, ಇಂದಿಗೂ ಪ್ರೇಕ್ಷಕರ ಮನದಲ್ಲಿ ಹಚ್ಚಹಸಿರಾಗಿರುವ ಕ್ಲಾಸಿಕ್ ಸಿನಿಮಾ 'ಅಮೆರಿಕಾ ಅಮೆರಿಕಾ'. ಇದೀಗ 29 ವರ್ಷಗಳ ನಂತರ ಅದೇ ಶೀರ್ಷಿಕೆಯಡಿ ಆ ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು 'ಅಮೆರಿಕಾ ಅಮೆರಿಕಾ 2' ಎಂಬ ಹೊಸ ಚಿತ್ರ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಭರ್ಜರಿ ಟೈಟಲ್ ಅನಾವರಣ ಮಾಡಲಾಗಿದೆ. ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ್ ಹಾಗೂ ಪೃಥ್ವಿ ಅಂಬರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದು ಮೊದಲ ಭಾಗದ ಮುಂದುವರಿಕೆಯಲ್ಲ
"ಹಳೇ ಕಥೆಗಳಿಂದಲೇ ಹೊಸ ಕಥೆಗಳು ಹುಟ್ಟುತ್ತವೆ. 'ಅಮೆರಿಕಾ ಅಮೆರಿಕಾ 2' ಕೇವಲ ಶೀರ್ಷಿಕೆಯಷ್ಟೇ ಹೊರತು ಇದು ಮೊದಲ ಭಾಗದ ಮುಂದುವರಿದ ಕಥೆಯಲ್ಲ. ಇಲ್ಲಿ ಹಳೆಯ ಸೂರ್ಯ, ಭೂಮಿ, ಶಶಾಂಕ್ ಪಾತ್ರಗಳ ಬದಲಾಗಿ ಸಂಪೂರ್ಣ ಭಿನ್ನವಾದ ಪಾತ್ರಗಳಿವೆ. ಇದೊಂದು ಸ್ತ್ರೀ ಪ್ರಧಾನ ಚಿತ್ರವಾಗಿದ್ದು, ಸಹನಾ ವಿಜಯಕುಮಾರ್ ಅವರ ಕಾದಂಬರಿ ಆಧಾರಿತವಾಗಿದೆ" ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು. 'ನಾಗತಿಹಳ್ಳಿ ಸಿನಿ ಕ್ರಯೇಷನ್ಸ್' ಬ್ಯಾನರ್ ಅಡಿಯಲ್ಲೇ ಈ ಸಿನಿಮಾ ನಿರ್ಮಾಣವಾಗಿದೆ.
ವಿಂಡೋಸೀಟ್‌ನಲ್ಲಿ ಪ್ರತ್ಯಕ್ಷವಾದ ನಿರೂಪ್
ಸಂಗೀತ ನೀಡಿದ ಮನೋಮೂರ್ತಿ
ಈ ಚಿತ್ರಕ್ಕೆ 'ಮುಂಗಾರು ಮಳೆ' ಖ್ಯಾತಿಯ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಸ್.ಕೆ. ರಾವ್ ಅವರ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನದಲ್ಲಿ ಅಮೆರಿಕಾದ ನಿಸರ್ಗ ಸೌಂದರ್ಯ ಮತ್ತು ಡ್ರೋನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಕಲಾವಿದರು ಏನಂದ್ರು?
"30 ವರ್ಷಗಳ ಹಿಂದೆ ಥಿಯೇಟರ್‌ನಲ್ಲಿ ಅಮೆರಿಕಾ ಅಮೆರಿಕಾ ಚಿತ್ರ ನೋಡಿದ ನೆನಪು ನನಗಿದೆ. ನಾಗತಿಹಳ್ಳಿ ಸರ್ ಆಫೀಸ್‌ಗೆ ಕರೆದು ಕಥೆ ಹೇಳಿದಾಗ, ಶೀರ್ಷಿಕೆ ಕೇಳಿಯೇ ನಟಿಸಲು ಒಪ್ಪಿಕೊಂಡೆ. ನನ್ನ ಪಾತ್ರ ಎಲ್ಲರ ನೆನಪಿನಲ್ಲಿ ಉಳಿಯುವಂತಿದೆ" ಎಂದು ನಿರೂಪ್ ಭಂಡಾರಿ ಹೇಳಿದ್ದಾರೆ.
"ನನ್ನ 13 ವರ್ಷಗಳ ಸಿನಿ ಪಯಣದಲ್ಲೇ ಇಂತಹ ಅದ್ಭುತ ಪಾತ್ರವನ್ನು ನಾನು ಮಾಡಿಲ್ಲ. ಬಹಳ ದಿನಗಳ ನಂತರ ಇಷ್ಟೊಂದು ಪ್ರಾಮಿಸಿಂಗ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಖುಷಿಯಿದೆ" ಎಂದು ಶಾನ್ವಿ ಶ್ರೀವಾಸ್ತವ್ ಹೇಳಿದರೆ, "ವಯಸ್ಸಿನಲ್ಲಿ ಹಿರಿಯರಾದರೂ ಉತ್ಸಾಹದಲ್ಲಿ ಯುವಕರಾಗಿರುವ ನಾಗತಿಹಳ್ಳಿ ಸರ್ ನಮಗೆಲ್ಲಾ ಸ್ಪೂರ್ತಿ. ಅಂತಹ ಲೆಜೆಂಡರಿ ಸಿನಿಮಾ ಹೆಸರಿನ ಚಿತ್ರದಲ್ಲಿ, ಅವರ ನಿರ್ದೇಶನದಲ್ಲೇ ನಟಿಸಿರುವುದು ನನ್ನ ಸೌಭಾಗ್ಯ" ಎಂದು ಪೃಥ್ವಿ ಅಂಬಾರ್ ತಿಳಿಸಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆಯಂತೆ.