ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ100 ಕೋಟಿ ಮೌಲ್ಯದ ಬಂಗಲೆ, ಐಷಾರಾಮಿ ಕಾರುಗಳು, ದುಬಾರಿ ಆಭರಣಗಳುʼ; ನಟಿ ಶಿಲ್ಪಾ ಶೆಟ್ಟಿ ಬಳಿ ಎಷ್ಟೆಲ್ಲಾ ಆಸ್ತಿ ಇದೆ ಗೊತ್ತಾ?

ಮಂಗಳೂರು ಮೂಲದ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಇಂದು (ಜೂನ್‌ 8) ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, 2026ರ ವೇಳೆಗೆ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 275 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಂಬೈನ ಜುಹುನಲ್ಲಿರುವ 100 ಕೋಟಿ ರೂ. ಮೌಲ್ಯದ 'ಕಿನಾರಾ' ಬಂಗಲೆ, ಬಾಸ್ಟಿಯನ್ ರೆಸ್ಟೋರೆಂಟ್ ಸರಣಿ ಹೀಗೆ ಉದ್ಯಮಿಯಾಗಿಯೂ ಸಾಮ್ರಾಜ್ಯ ಕಟ್ಟಿದ್ದಾರೆ.

ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಇಂದು (ಜೂನ್‌ 8) ಹುಟ್ಟುಹಬ್ಬದ ಸಂಭ್ರಮ. ಮಂಗಳೂರು ಮೂಲದ ಶಿಲ್ಪಾ ಶೆಟ್ಟಿಗೆ ಈಗ ಭರ್ತಿ 51 ವರ್ಷ ವಯಸ್ಸು. ಆದರೂ, ನೋಡಲು ಇನ್ನೂ ಹರೆಯದ ನಟಿಯಂತೆ ಮಿಂಚುತ್ತಾರೆ. ಅಂದಹಾಗೆ, ಶಿಲ್ಪಾ ಶೆಟ್ಟಿ ಬರೀ ಸೌಂದರ್ಯದ ಒಡತಿ ಮಾತ್ರವಲ್ಲ, ಐಷಾರಾಮಿ ಕಾರುಗಳು, ದುಬಾರಿ ಆಭರಣಗಳು, ಅಪಾರ ಆಸ್ತಿ ಪಾಸ್ತಿಗೂ ಒಡತಿ. ಅವರ ಪ್ರಾಪರ್ಟಿ ಕುರಿತಾದ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

1990ರ ದಶಕದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ, ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗದೆ ದೂರದರ್ಶನ ಕಾರ್ಯಕ್ರಮಗಳು, ಬ್ರ್ಯಾಂಡ್ ರಾಯಭಾರತ್ವ, ವ್ಯಾಪಾರ ಉದ್ಯಮಗಳು ಮತ್ತು ಹೂಡಿಕೆಗಳ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. 'ಹೆಲೋ ಸ್ವಾಂಕಿ' ವರದಿಯ ಪ್ರಕಾರ, 2026ರ ವೇಳೆಗೆ ಶಿಲ್ಪಾ ಶೆಟ್ಟಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 275 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಸಿನಿಮಾಗಳು, ಟಿವಿ ಶೋಗಳು, ಬ್ರ್ಯಾಂಡ್ ಜಾಹೀರಾತುಗಳು ಮತ್ತು ವ್ಯಾಪಾರ ಉದ್ಯಮಗಳಿಂದ ಅವರು ಗಳಿಸುವ ಆದಾಯವನ್ನು ಒಳಗೊಂಡಿದೆ.

Shilpa Shetty: ಮತ್ತೆ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್‌ ಆದ್ರು ಶಿಲ್ಪಾ ಶೆಟ್ಟಿ!

ರೆಸ್ಟೋರೆಂಟ್ ಓನರ್‌ ಆಗಿರುವ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ 'ಬಾಸ್ಟಿಯನ್' (Bastian) ರೆಸ್ಟೋರೆಂಟ್ ಸರಣಿಯ ಸಹ-ಮಾಲೀಕರಾಗಿದ್ದಾರೆ. ಇದರೊಂದಿಗೆ ಫಿಟ್‌ನೆಸ್ ಮತ್ತು ವೆಲ್‌ನೆಸ್ ಪ್ಲಾಟ್‌ಫಾರ್ಮ್ ಆದ 'ಸಿಂಪಲ್ ಸೋಲ್‌ಫುಲ್' (Simple Soulful), ನೈಟ್‌ವೇರ್ ಬ್ರ್ಯಾಂಡ್ ಆದ 'ಡ್ರೀಮ್ಸ್' (Dreamss), ಒಂದು ವಿಎಫ್‌ಎಕ್ಸ್ (VFX) ಪ್ರೊಡಕ್ಷನ್ ಹೌಸ್ ಸಹ ಹೊಂದಿದ್ದಾರೆ. ಅಲ್ಲದೆ 'ಮಾಮಾಅರ್ಥ್' (Mamaearth) ಸೇರಿದಂತೆ ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆಗಳನ್ನು ಮಾಡಿದ್ದಾರೆ.

100 ಕೋಟಿ ರೂ. ಮೌಲ್ಯದ ಬಂಗಲೆ

ಶಿಲ್ಪಾ ಶೆಟ್ಟಿ ಅವರು ಮುಂಬೈನ ಐಷಾರಾಮಿ ಜುಹು ಪ್ರದೇಶದಲ್ಲಿರುವ 'ಕಿನಾರಾ' ಎಂಬ ಸಮುದ್ರಕ್ಕೆ ಮುಖ ಮಾಡಿರುವ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದರ ಮೌಲ್ಯ ಸರಿಸುಮಾರು 100 ಕೋಟಿ ರೂಪಾಯಿಗಳಾಗಿದೆ. ಎರಡು ಮಹಡಿಯ ಈ ಮನೆಯು ನೆಲದಿಂದ ಮೇಲ್ಛಾವಣಿಯವರೆಗೆ ಗಾಜಿನ ಕಿಟಕಿಗಳನ್ನು ಹೊಂದಿದ್ದು, ಸುಂದರವಾದ ಸಮುದ್ರದ ವೀಕ್ಷಣೆ ಮತ್ತು ಖಾಸಗಿ ಉದ್ಯಾನವನವನ್ನು ಒಳಗೊಂಡಿದೆ. ಈ ಕಿನಾರಾ ಬಂಗಲೆಯ ಹೊರತಾಗಿ, ರಾಜ್ ಕುಂದ್ರಾ ಅವರು ಜುಹು ಬಂಗಲೆಯಲ್ಲಿರುವ ಕೆಲವು ಫ್ಲ್ಯಾಟ್‌ಗಳು ಮತ್ತು ಪಾಲನ್ನು ಶಿಲ್ಪಾ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ವರದಿಯಾಗಿದೆ, ಈ ಆಸ್ತಿಗಳ ಮೌಲ್ಯ ಸುಮಾರು 38.5 ಕೋಟಿ ರೂಪಾಯಿಗಳಾಗಿದೆ.

Shilpa Shetty : ಶಿಲ್ಪಾ ಶೆಟ್ಟಿಗೆ ಗಂಭೀರ ಗಾಯ: ಕಾಲು ಮೂಳೆ ಮುರಿತ

ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ಪುಣೆಯ ಶ್ರೀಮಂತ ಪ್ರದೇಶವೊಂದರಲ್ಲಿ ದೊಡ್ಡ ಖಾಸಗಿ ಬಂಗಲೆಯನ್ನು ಹೊಂದಿದ್ದಾರೆ. ಸಾವಿರಾರು ಚದರ ಅಡಿಗಳಲ್ಲಿ ಹರಡಿರುವ ಈ ಆಸ್ತಿಯು ಪ್ರೈವೆಸಿ ಮತ್ತು ಹಸಿರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಎತ್ತರದ ಕಂಪೌಂಡ್ ಗೋಡೆಗಳು, ಸುಂದರವಾದ ಹುಲ್ಲುಹಾಸುಗಳು ಮತ್ತು ರೆಸಾರ್ಟ್ ಶೈಲಿಯ ವಿನ್ಯಾಸವನ್ನು ಹೊಂದಿದೆ.

ದುಬೈನಲ್ಲಿ ಅಪಾರ್ಟ್‌ಮೆಂಟ್‌

ಶಿಲ್ಪಾ ಅವರು ಈ ಹಿಂದೆ ದುಬೈನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಹೊಂದಿದ್ದರು, ಇದನ್ನು ರಾಜ್ ಕುಂದ್ರಾ ಅವರು ಉಡುಗೊರೆಯಾಗಿ ನೀಡಿದ್ದರು ಎಂದು ವರದಿಯಾಗಿತ್ತು. ನಂತರ ದಂಪತಿಗಳು ಆ ಆಸ್ತಿಯನ್ನು ಮಾರಿ, ವಿಶ್ವದ ಅತ್ಯಂತ ಪ್ರತಿಷ್ಠಿತ ವಸತಿ ಪ್ರದೇಶಗಳಲ್ಲಿ ಒಂದಾದ 'ಪಾಮ್ ಜುಮೇರಾ'ದಲ್ಲಿರುವ ವಿಲ್ಲಾಕ್ಕೆ ಅಪ್‌ಗ್ರೇಡ್ ಆಗಿದ್ದಾರೆ. ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿರುವ ಅವರ ಪಾಲು ಕೂಡ ಅವರಿಗೆ ಕಮರ್ಷಿಯಲ್ ರಿಯಲ್ ಎಸ್ಟೇಟ್‌ನಲ್ಲಿ ಉತ್ತಮ ಹಿಡಿತವನ್ನು ನೀಡಿದೆ.

ಐಷಾರಾಮಿ ಕಾರುಗಳು, ಆಭರಣಗಳು

ಶಿಲ್ಪಾ ಶೆಟ್ಟಿ ಅವರ ಬಳಿ ಐಷಾರಾಮಿ ಕಾರುಗಳ ಸಂಗ್ರಹ ಇದೆ. 'ಲೈಫ್‌ಸ್ಟೈಲ್ ಏಷ್ಯಾ' ಪ್ರಕಾರ, ಅವರ ಬಳಿ ಸುಮಾರು 7 ಕೋಟಿ ರೂ. ಮೌಲ್ಯದ ಲಂಬೋರ್ಗಿನಿ ಅವೆಂಟಡಾರ್ (Lamborghini Aventador), ಅಂದಾಜು 2.9 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು i8 (BMW i8) ಮತ್ತು ಎರಡು ಬೆಂಟ್ಲಿ ಕಾರುಗಳಿವೆ. ಅದರಲ್ಲಿ ಕಾಂಟಿನೆಂಟಲ್ ಜಿಟಿ (Continental GT) ಬೆಲೆ 8.45 ಕೋಟಿ ರೂ. ಮತ್ತು ಫ್ಲೈಯಿಂಗ್ ಸ್ಪರ್ (Flying Spur) ಬೆಲೆ 6.32 ಕೋಟಿ ರೂ. ಆಗಿದೆ. ಇವುಗಳ ಜೊತೆಗೆ ಸುಮಾರು 4.94 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ವೋಗ್ (Range Rover Vogue), ಬಿಎಂಡಬ್ಲ್ಯು ಎಕ್ಸ್5 (BMW X5), ಬಿಎಂಡಬ್ಲ್ಯು 7 ಸೀರೀಸ್ ಮತ್ತು ಮರ್ಸಿಡಿಸ್-ಬೆಂಜ್ ವಿ-ಕ್ಲಾಸ್‌ನಂತಹ ಕಾರುಗಳನ್ನು ಸಹ ಅವರು ಹೊಂದಿದ್ದಾರೆ.

ಶಿಲ್ಪಾ ಅವರ ಆಭರಣ ಸಂಗ್ರಹದ ವಿವರಗಳು ಹೆಚ್ಚಾಗಿ ಗೌಪ್ಯವಾಗಿದ್ದರೂ, ಅವರ ನಿಶ್ಚಿತಾರ್ಥದ ಉಂಗುರವು ಕ್ಲಾಸಿಕ್ ಓವಲ್-ಕಟ್ ಪಚ್ಚೆ (emerald) ಮತ್ತು ವಜ್ರಗಳನ್ನು ಒಳಗೊಂಡಿದೆ. 18 ಕ್ಯಾರೆಟ್ ಬಿಳಿ ಚಿನ್ನದಲ್ಲಿ (white gold) ಸಿದ್ಧಪಡಿಸಲಾದ ಈ ಉಂಗುರವು ಸರಳ ಹಾಗೂ ಅತ್ಯಂತ ದುಬಾರಿಯಾಗಿದೆ. ಆನ್‌ಲೈನ್ ಜ್ಯುವೆಲ್ಲರಿ ಮಾರಾಟಗಾರರಾದ 'ಬ್ಲೂಸ್ಟೋನ್' ಇದರ ಮೌಲ್ಯವನ್ನು ಸುಮಾರು 14.25 ಲಕ್ಷದಿಂದ 19 ಲಕ್ಷ ರೂಪಾಯಿ ಎಂದು ಅಂದಾಜಿಸಿದೆ.