‘ಶಂಕರ ನೀ ಭಯಂಕರ..’ ಎಂಬ ಗೀತೆಯೊಂದಿಗೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಂಚರಿಸಿ ಭರ್ಜರಿ ಪ್ರಚಾರ ನಡೆಸುತ್ತಿರುವ ‘ಶಂಕರಾಭರಣ’ ಬಸ್ ಈಗ ಪ್ರೇಕ್ಷಕರ ಮುಂದೆ ಕುತೂಹಲಕರ ಟ್ರೇಲರ್ ಹೊತ್ತು ತಂದಿದೆ. ‘ಬಿಗ್ ಬಾಸ್’ ಖ್ಯಾತಿಯ ನಟ ಶೈನ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆ್ಯಕ್ಷನ್-ಕಟ್ ಹೇಳಿರುವ ಬಹುನಿರೀಕ್ಷಿತ ‘ಶಂಕರಾಭರಣ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿದ್ದ ಟೀಸರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡಿದ್ದ ಚಿತ್ರತಂಡ, ಇದೀಗ ಟ್ರೇಲರ್ ಮೂಲಕ ಸಿನಿರಸಿಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಬಸ್ ಡ್ರೈವರ್ ಪಾತ್ರದಲ್ಲಿ
I ಚಿತ್ರದಲ್ಲಿ ಶೈನ್ ಶೆಟ್ಟಿ ‘ಶಂಕರಾಭರಣ’ ಹೆಸರಿನ ಖಾಸಗಿ ಬಸ್ನ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನೈಜ ಕಥಾಹಂದರದ ಚಿತ್ರಗಳಿಗೆ ಹೆಸರಾಗಿದ್ದ ನಿರ್ದೇಶಕ ಸುಮಂತ್ ಭಟ್, ಈ ಬಾರಿ ಮೊದಲ ಹೆಜ್ಜೆಯಾಗಿ ಔಟ್ ಅಂಡ್ ಔಟ್ ಕಮರ್ಷಿಯಲ್ ಜಾನರ್ನತ್ತ ಮುಖಮಾಡಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಕಥೆಯ ಪಾತ್ರಧಾರಿಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಪಾತ್ರವನ್ನು ಶಂಕರಾಭರಣ ಬಸ್ ಕೂಡ ವಹಿಸಿದೆಯಂತೆ.
ಟ್ರೇಲರ್ನಲ್ಲಿರುವ ದೃಶ್ಯಗಳನ್ನು ಗಮನಿಸಿದರೆ ಇದೊಂದು ರೋಚಕ ಹಾರರ್ ಥ್ರಿಲ್ಲರ್ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಇಂದಿಗೂ ಖಾಸಗಿ ಬಸ್ಗಳ ಪ್ರಾಬಲ್ಯ ಹೆಚ್ಚಾಗಿದ್ದು, ಚಿತ್ರದ ಕಥೆಯೂ ಕರಾವಳಿ ಪರಿಸರದಲ್ಲೇ ಸಾಗುತ್ತದೆ. ಸಾಲ ಮಾಡಿ ಬಸ್ ಖರೀದಿಸುವ ಖಾಸಗಿ ಬಸ್ ಮಾಲೀಕರ ಆರ್ಥಿಕ ಸಂಕಷ್ಟಗಳು ಹಾಗೂ ಓರ್ವ ಡ್ರೈವರ್ ಎದುರಿಸುವ ಸವಾಲುಗಳ ಜೊತೆಗೆ ರೋಮಾಂಚಕ ತಿರುವುಗಳನ್ನು ಚಿತ್ರಕಥೆಯಲ್ಲಿ ಇದೆ ಎಂಬುದು ಟ್ರೇಲರ್ನ ಪ್ರಮುಖ ಆಕರ್ಷಣೆಯಾಗಿದೆ.
ಕಥೆ ಬರೆದ ಶೈನ್ ಶೆಟ್ಟಿ
ವಿಶೇಷವೆಂದರೆ, ಈ ಚಿತ್ರಕ್ಕೆ ಶೈನ್ ಶೆಟ್ಟಿ ಕೇವಲ ನಾಯಕನಾಗಿ ಅಷ್ಟೇ ಅಲ್ಲದೆ ಕಥೆಗಾರನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಮ್ಮ ನೈಜ ಜೀವನದ ಅನುಭವಗಳು ಹಾಗೂ ಕರಾವಳಿಯ ಸುತ್ತಮುತ್ತ ಕಂಡ ನೈಜ ಘಟನೆಗಳನ್ನು ಆಧರಿಸಿ ಶೈನ್ ಈ ಚಿತ್ರಕಥೆ ಹೆಣೆದಿದ್ದು, ಅದಕ್ಕೆ ಸುಮಂತ್ ಭಟ್ ಅಷ್ಟೇ ಸೊಗಸಾಗಿ ದೃಶ್ಯರೂಪ ನೀಡಿದ್ದಾರೆ. ಸಂಪೂರ್ಣ ಸಿನಿಮಾವನ್ನು ಕರಾವಳಿ ಭಾಗದ ಹಸಿರಿನ ಪರಿಸರದಲ್ಲೇ ಸೆರೆಹಿಡಿಯಲಾಗಿದೆ. ಸಂಪತ್ ರಾಜ್ ಈ ಚಿತ್ರದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ.
ನಿರ್ಮಾಣಕ್ಕಿಳಿದ ಶೈನ್
ಇದರ ಜೊತೆಗೆ ಶೈನ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗದಲ್ಲಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ‘ರಂಗಸ್ಥಳ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗುಣಮಟ್ಟದ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾಗಿರುವ ರಂಗಸ್ಥಳ ಸ್ಟುಡಿಯೋಗೆ ಇದು ಚೊಚ್ಚಲ ಚಿತ್ರವಾಗಿದೆ.
Shine Shetty: ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್
ಚರಣ್ ರಾಜ್ ಸಂಗೀತ ಸಂಯೋಜನೆ
ಚಿತ್ರದಲ್ಲಿ ನಾಯಕಿಯಾಗಿ ತನ್ವಿ ರಾಮ್ ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ತನ್ವಿ ರಾಮ್, ಈ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿವೆ.