ಜೀ ಕನ್ನಡದ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋನಲ್ಲಿ ನಟ ಶಿವರಾಜ್‌ಕುಮಾರ್ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳವುದು ಗೊತ್ತೇ ಇದೆ. ಪ್ರತಿ ಸ್ಪರ್ಧಿಯನ್ನು ಕೂಡ ಬಹಳ ಪ್ರೀತಿಯಿಂದ ಉತ್ತೇಜಿಸುವ ಅವರು, ತುಂಬಾ ಚೆನ್ನಾಗಿ ಎಲ್ಲರಿಗೂ ಸಪೋರ್ಟ್ ಮಾಡುತ್ತಾರೆ. ಈ ಶೋ ಪುಟಾಣಿ ಸ್ಪರ್ಧಿ ಪ್ರೀತಮ್ ಜೊತೆ ಶಿವಣ್ಣ ದಂಪತಿ ಎಂಥ ಒಡನಾಟ ಹೊಂದಿದ್ದಾರೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಆಗಾಗ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋನ ವೇದಿಕೆ ಮೇಲೂ ಮಸ್ತ್ ಆಗಿ ಶಿವಣ್ಣ ಡ್ಯಾನ್ಸ್ ಮಾಡಿ, ತಮ್ಮ ಎನರ್ಜಿಯನ್ನು ತೋರ್ಪಡಿಸಿದ್ದಾರೆ. ಈ ಮಧ್ಯೆ ಅವರು ಮಾಡಿರುವ ಕೆಲಸವೊಂದು ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಸ್ಪರ್ಧಿಗಳಿಗೆ ಹಣ ಸಹಾಯ ಮಾಡಿದ ಶಿವಣ್ಣ
ಹೌದು, ಕ್ವಾಟರ್ ಫಿನಾಲೆ ಸಂಚಿಕೆಗಳಲ್ಲಿ ಸ್ಪರ್ಧಿಗಳ ಭರ್ಜರಿ ಪರ್ಫಾಮೆನ್ಸ್ ಕಂಡಿದ್ದ ಶಿವಣ್ಣ, ಒಂದು ಘೋಷಣೆ ಮಾಡಿದ್ದರು. ಎಲ್ಲಾ ಸ್ಪರ್ಧಿಗಳಿಗೂ ತಲಾ 50 ಸಾವಿರ ರೂ. ಹಣವನ್ನು ನೀಡುವುದಾಗಿ ಅವರು ತಿಳಿಸಿದ್ದರು. ಈಚೆಗಷ್ಟೇ ಕನಕಪುರದ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸ್ಪರ್ಧಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು, ಆನಂತರ ಡಾ. ರಾಜ್‌ಕುಮಾರ್ ಅವರ ಹುಟ್ಟೂರಾದ ದೊಡ್ಡ ಗಾಜನೂರಿಗೆ ಎಲ್ಲರನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿನ ತಮ್ಮ ಪೂರ್ವಜರ ಊರನ್ನು ಎಲ್ಲರಿಗೂ ತೋರಿಸಿ, ಆನಂದಿಸಿದ್ದರು. ಇದೀಗ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋ ಸ್ಪರ್ಧಿಗಳಿಗೆ ಹಣ ಸಹಾಯ ಮಾಡಿ, ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದ್ದಾರೆ ಶಿವರಾಜ್‌ಕುಮಾರ್ ದಂಪತಿ.
Dance Karnataka Dance: ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್! ಶಿವಣ್ಣ ಕೊಟ್ಟ ಭರವಸೆ ಏನು ಗೊತ್ತಾ?
ಈ ವಿಚಾರವನ್ನು ಹಂಚಿಕೊಂಡ ನಟ ಅಮೋಘ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಜೀ ಕನ್ನಡದ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ನಟ ಅಮೋಘ ಆದಿತ್ಯ ಸ್ಪರ್ಧಿಯಾಗಿದ್ದಾರೆ. ಕ್ವಾಟರ್ ಫಿನಾಲೆ ನಂತರ ಸೆಮಿ ಫಿನಾಲೆಗೆ ಹೋಗಿದ್ದ ಅವರು, ಅಲ್ಲಿಂದ ಹೊರಗೆ ಬಂದಿದ್ದಾರೆ. ಆದರೂ ಅವರಿಗೆ ತುಂಬಾ ಖುಷಿ ಇದೆ. ಕಾರಣ, ಸೆಮಿ ಫಿನಾಲೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ, ಕೋರಿಯೋಗ್ರಾಫರ್ ಮತ್ತು ಮೆಂಟರ್ಸ್‌ಗೆ ತಲಾ 50 ಸಾವಿರ ರೂ,ಗಳ ಚೆಕ್ ಅನ್ನು ಶಿವರಾಜ್‌ಕುಮಾರ್ ದಂಪತಿ ನೀಡಿದ್ದಾರೆ.
'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ನಟ ಅಮೋಘ ಆದಿತ್ಯ ಪೋಸ್ಟ್
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅಮೋಘ ಆದಿತ್ಯ, ಶಿವಣ್ಣ ನೀಡಿದ ಚೆಕ್ ಅನ್ನು ತೋರಿಸಿದ್ದಾರೆ. "ಇದು ಶಿವಣ್ಣ ನಮಗೆ ಕೊಟ್ಟ ಚೆಕ್. ಕಳೆದ ವಾರ ಹೇಳಿದಂತೆಯೇ, ಪ್ರತಿಯೊಬ್ಬ ಸ್ಪರ್ಧಿಗೂ 50 ಸಾವಿರ ರೂ.ಗಳ ಚೆಕ್ ಅನ್ನು ಶಿವಣ್ಣ ಕೊಟ್ಟಿದ್ದಾರೆ. ಇದು ಸಣ್ಣ ಮೊತ್ತ ಅಲ್ಲವೇ ಅಲ್ಲ. ಅಷ್ಟೊಂದು ಸ್ಪರ್ಧಿಗಳಗೆ 50 ಸಾವಿರ ರೂ. ಕೊಡೋದು ಆಟವೇ ಅಲ್ಲ. ಧನ್ಯವಾದಗಳು ಶಿವಣ್ಣ ಮತ್ತು ಗೀತಕ್ಕ.. ನಿಮ್ಮ ಮೇಲೆ ಯಾರ ಕಣ್ಣು ಬೀಳದಿರಲಿ, ನೂರು ಕಾಲ ಸುಖವಾಗಿರಿ" ಎಂದು ಅಮೋಘ ಆದಿತ್ಯ ಹೇಳಿದ್ದಾರೆ.