ರಕ್ಷಾಬಂಧನ ಹಬ್ಬ ಮುಗಿದು ಎರಡು ವಾರಗಳು ಕಳೆಯುತ್ತಿದ್ದರೂ ಸ್ಯಾಂಡಲ್‌ವುಡ್‌ನ ದಿಗ್ಗಜ ಕಲಾವಿದರ ನಡುವಿನ ಭ್ರಾತೃತ್ವದ ಸಂಭ್ರಮ ಮುಂದುವರಿದಿದೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರ ನಿವಾಸಕ್ಕೆ ಇತ್ತೀಚೆಗೆ ಭೇಟಿ ನೀಡಿದ ನವರಸ ನಾಯಕ ಜಗ್ಗೇಶ್, ಶಿವಣ್ಣನಿಗೆ ಪ್ರೀತಿಯಿಂದ ರಾಖಿ ಕಟ್ಟಿ ಸಹೋದರತೆಯ ಬಾಂಧವ್ಯ ಮೆರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ದಂಪತಿ ಜಗ್ಗೇಶ್ ಅವರಿಗೆ ದುಬಾರಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ.
ದುಬಾರಿ ವಾಚ್ ನೀಡಿದ ಶಿವಣ್ಣ
ಶಿವಣ್ಣ ದಂಪತಿ ಜಗ್ಗೇಶ್ ಅವರಿಗೆ ಉಡುಗೊರೆಯಾಗಿ ನೀಡಿರುವುದು ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ‘ವರ್ಸಾಚೆ’ (Versace) ಕಂಪನಿಯ ‘ಗ್ರೆಕಾ ರಿಯಾಕ್ಷನ್’ ಮಾದರಿಯ ಕೈಗಡಿಯಾರ. ಇದರ ಮಾರುಕಟ್ಟೆ ಮೌಲ್ಯ ಸುಮಾರು ₹2.50 ಲಕ್ಷ ರೂ.ಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಅತ್ಯುನ್ನತ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸಕ್ಕೆ ಹೆಸರಾಗಿರುವ ಈ ವಾಚ್ ಅನ್ನು ಶಿವಣ್ಣ ದಂಪತಿ ತಮ್ಮ ಕೈಯಾರೆ ಜಗ್ಗೇಶ್ ಅವರಿಗೆ ತೊಡಿಸಿದ್ದು, ಈ ವಿಶೇಷ ಕ್ಷಣದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್! ತಾತನನ್ನು ನೆನದು ಭಾವುಕ
ಕಣ್ಣಾಲಿಗಳು ತೇವಗೊಂಡವು...
ಈ ಭೇಟಿಯ ಬಗ್ಗೆ ಭಾವುಕರಾಗಿ ಪೋಸ್ಟ್ ಹಂಚಿಕೊಂಡಿರುವ ಜಗ್ಗೇಶ್, "ಇಂದು ನನ್ನ ನಲ್ಮೆಯ ಸಹೋದರ ಶಿವರಾಜ್‌ಕುಮಾರ್ ಅವರ ಮನೆಗೆ ಮಿತ್ರ ಶ್ರೀನಿಧಿ ಜೊತೆ ತೆರಳಿ ಅರ್ಧ ಗಂಟೆ ಕಾಲ ಕಳೆದೆ. ಕಳೆದ 40 ವರ್ಷಗಳ ನಮ್ಮ ಆತ್ಮೀಯ ಬಾಂಧವ್ಯ ಕರಗದೆ ಕಲ್ಪವೃಕ್ಷದಂತೆ ಹಾಗೆಯೇ ಉಳಿದಿದೆ. ಮನೆಗೆ ಬಂದ ಅಣ್ಣನಂತೆ ಭಾವಿಸಿ ಗೀತಾ ಶಿವರಾಜ್‌ಕುಮಾರ್ ಅವರು ಪ್ರೀತಿಯಿಂದ ಈ ಕೈಗಡಿಯಾರ ತೊಡಿಸಿದ್ದು ಕಂಡು ಕಣ್ಣಾಲಿಗಳು ತೇವಗೊಂಡವು. ಡಾ. ರಾಜ್‌ಕುಮಾರ್ ಅವರು ತಮ್ಮ ಎಲ್ಲ ಸದ್ಗುಣಗಳನ್ನು ಮಗನಿಗೆ ಧಾರೆ ಎರೆದು ಹೋಗಿದ್ದಾರೆ; ರಾಜಣ್ಣನ ಜೊತೆ ಕೂತ ದಿನಗಳು ಮನಸ್ಸಿನಲ್ಲಿ ತರಂಗದಂತೆ ಮರುಕಳಿಸಿದವು. ಅವರ ಕುಟುಂಬಕ್ಕೆ ಸಂತೋಷ ಸಡಗರ ಚಿರಾಸ್ಥಿಯಂತೆ ನಿತ್ಯ ನಿರಂತರ ರಾಯರಕೃಪೆಯಿಂದ ಸಿಗಲಿ" ಎಂದು ಹೃತ್ಪೂರ್ವಕವಾಗಿ ಹಾರೈಸಿದ್ದಾರೆ.
Actor Jaggesh: ಕೆಟ್ಟ ಕಮೆಂಟ್, ಟ್ರೋಲ್ ಮಾಡೋರಿಗೆ ಜಗ್ಗೇಶ್ ಮಾತಿನ ಪೆಟ್ಟು
ಖುಷಿಯಾದ ಅಭಿಮಾನಿಗಳು
ಕನ್ನಡ ಚಿತ್ರರಂಗದಲ್ಲಿ 4 ದಶಕಗಳಿಗೂ ಹೆಚ್ಚು ಕಾಲದಿಂದ ಜಗ್ಗೇಶ್ ಮತ್ತು ಶಿವರಾಜ್‌ಕುಮಾರ್ ಪರಸ್ಪರ ಸ್ನೇಹ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದ ಮೇಲಿನ ತಮ್ಮ ಭಕ್ತಿ ಮತ್ತು ಒಡನಾಟವನ್ನು ಹಲವು ವೇದಿಕೆಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುವ ಜಗ್ಗೇಶ್, ಇದೀಗ ಶಿವಣ್ಣನ ಔದಾರ್ಯ ಹಾಗೂ ಪ್ರೀತಿಗೆ ಮತ್ತೊಮ್ಮೆ ಮಾರುಹೋಗಿದ್ದು, ಈ ಅಪರೂಪದ ಕ್ಷಣ ಸ್ಯಾಂಡಲ್‌ವುಡ್ ಹಾಗೂ ಅಭಿಮಾನಿ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.