ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಡ್ಯಾಡ್’ ಚಿತ್ರದ ಎಮೋಷನಲ್‌ ಸಾಂಗ್‌ ರಿಲೀಸ್‌: ಶಿವರಾಜ್‌ಕುಮಾರ್‌ಗೆ ಪುತ್ರಿಯಾದ ʻಇರುಮುಡಿʼ ಖ್ಯಾತಿಯ ಬೇಬಿ ನಕ್ಷತ್ರ

Dad Movie: ಶಿವರಾಜ್‌ಕುಮಾರ್‌ ನಟನೆಯ ʻಡ್ಯಾಡ್‌ʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಅಪ್ಪ ಮತ್ತು ಮಗಳ ನಡುವಿನ ಭಾವುಕತೆಯನ್ನು ಕಟ್ಟಿಕೊಟ್ಟಿದೆ. ಶಿವರಾಜ್‌ಕುಮಾರ್ ಹಲವು ವರ್ಷಗಳ ಬಳಿಕ ಈ ಚಿತ್ರದಲ್ಲಿ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಹಾಡಿಗೆ ಕೆ. ಕಲ್ಯಾಣ್‌ ಸಾಹಿತ್ಯ ಬರೆದಿದ್ದಾರೆ.

ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಡ್ಯಾಡ್’ ಚಿತ್ರದ ಎಮೋಷನಲ್‌ ಹಾಡು ‘ಮಗಳೆ ನಿನ್ನ ಜೊತೆ’ ಬಿಡುಗಡೆಯಾಗಿದೆ. ಅಪ್ಪ ಮತ್ತು ಮಗಳ ನಡುವಿನ ಪ್ರೀತಿ, ವಾತ್ಸಲ್ಯ ಹಾಗೂ ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಕಟ್ಟಿಕೊಡುವ ಈ ಹಾಡಿಗೆ ಖ್ಯಾತ ಕೆ. ಕಲ್ಯಾಣ್ ಹೃದಯಸ್ಪರ್ಶಿ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಮಧುರ ಸಂಗೀತ ಸಂಯೋಜಿಸಿದ್ದಾರೆ. ಗಾಯಕ ದರ್ಶನ್ ಮೆಳವಂಕಿ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅಪಾರ ವೀಕ್ಷಣೆ ಪಡೆದು, ಸಂಗೀತ ಪ್ರಿಯರಿಂದ ಭರ್ಜರಿ ಮೆಚ್ಚುಗೆ ಗಳಿಸುತ್ತಿದೆ.

ತೆಲುಗು ನಿರ್ಮಾಪಕರ ಕನ್ನಡ ಸಿನಿಮಾ

ಆರಂಭದಿಂದಲೂ ವಿಶಿಷ್ಟ ಕಥಾಹಂದರದ ಮೂಲಕ ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿಸಿರುವ ‘ಡ್ಯಾಡ್’ ಸಿನಿಮಾ ಇದೀಗ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍ʼ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ಮೈರಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಪೆದ್ದಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಬಿ.ಎಸ್. ಸುಧೀಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರಚಿಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕ ಹರೀಶ್ ಪೆದ್ದಿ ಹಾಗೂ ನಿರ್ದೇಶಕ ಅನಿಲ್ ಕನ್ನೆಗಂಟಿ ಇಬ್ಬರಿಗೂ ಇದು ಚಂದನವನದಲ್ಲಿ ಮೊದಲ ಹೆಜ್ಜೆಯಾಗಿದೆ.

ಶಿವಣ್ಣನ ಮಗಳಾಗಿ ಇರುಮುಡಿ ನಟಿ ನಕ್ಷತ್ರ

ಈ ಚಿತ್ರದ ಮೂಲಕ ನಟ ಶಿವರಾಜ್‌ಕುಮಾರ್ ಹಲವು ವರ್ಷಗಳ ಸುದೀರ್ಘ ಗ್ಯಾಪ್ ನಂತರ ತೆರೆಯ ಮೇಲೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆ ಹುಟ್ಟುಹಾಕಿದೆ. ‘ಇರುಮುಡಿ’ ಚಿತ್ರದಲ್ಲಿ ತನ್ನ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದ ಬಾಲನಟಿ ಬೇಬಿ ನಕ್ಷತ್ರ, ಇಲ್ಲಿ ಶಿವಣ್ಣನ ಮಗಳಾಗಿ ಬಣ್ಣ ಹಚ್ಚಿದ್ದಾರೆ.

ಉಳಿದಂತೆ ಶರ್ಮಿಳಾ ಮಾಂಡ್ರೆ, ಬಾಬು ಹಾಗೂ ಮಲಯಾಳಂನ ʻಜೈಲರ್‌ 2ʼ ಖ್ಯಾತಿಯ ನಟ ಸೂರಜ್ ವೆಂಜರಮೂಡು ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ‘ಡ್ಯಾಡ್’ ಚಿತ್ರಕ್ಕೆ ಬಿ. ರಾಜಶೇಖರ್ ಛಾಯಾಗ್ರಹಣ ನಿರ್ವಹಿಸಿದ್ದು, ಈ ಚಿತ್ರವು ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು.