ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಿಂದಿಯಲ್ಲಿ ನಿರ್ಮಾಣವಾಗಲಿದೆ ಶಿವರಾಜ್‌ಕುಮಾರ್ ಹೊಸ ಸಿನಿಮಾ! ಯಾವಾಗ ಶುರು? ನಿರ್ದೇಶಕರು ಯಾರು?

ತಮಿಳು ಮತ್ತು ತೆಲುಗಿನಲ್ಲಿ ಸದ್ದು ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಈಗ ಆರ್. ಚಂದ್ರು ಆ್ಯಕ್ಷನ್ ಕಟ್‌ನಲ್ಲಿ ಹಿಂದಿ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಆನಂದ್ ಪಂಡಿತ್ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾದ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಆಗಸ್ಟ್ 28ರಂದು ಮುಂಬೈನಲ್ಲಿ ಅದ್ಧೂರಿಯಾಗಿ ಅನಾವರಣಗೊಳ್ಳಲಿದೆ.

'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರು ಸ್ಯಾಂಡಲ್‌ವುಡ್ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಸಕ್ರಿಯವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ದಕ್ಷಿಣ ಭಾರತದಲ್ಲೇ ಅವರಿಗೆ ಅಪಾರ ಬೇಡಿಕೆಯಿದೆ. ಇದರ ನಡುವೆ ಅವರು ಬಾಲಿವುಡ್‌ಗೂ ಕಾಲಿಡಲು ಸಜ್ಜಾಗಿದ್ದಾರೆ. ಇದಕ್ಕೆ ಸಾಥ್ ನೀಡುತ್ತಿರುವುದು ನಿರ್ದೇಶಕ ಆರ್. ಚಂದ್ರು. ಹೌದು, 'ಕಬ್ಜ' ಖ್ಯಾತಿಯ ನಿರ್ದೇಶಕ ಆರ್. ಚಂದ್ರು ನಿರ್ದೇಶನದ ಹೊಸ ಚಿತ್ರವೊಂದರ ಮೂಲಕ ಶಿವಣ್ಣ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಆಗಸ್ಟ್ 28 ರಂದು ಮುಂಬೈನಲ್ಲಿ ಲಾಂಚ್‌

'ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್' ಮತ್ತು 'ಆರ್.ಸಿ. ಸ್ಟುಡಿಯೋಸ್' ಬ್ಯಾನರ್‌ಗಳ ಅಡಿಯಲ್ಲಿ ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಿಸಲು ಯೋಜಿಸಲಾಗಿದೆ. ಏಕಕಾಲದಲ್ಲಿ ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರೀಕರಣಗೊಳ್ಳಲಿರುವ ಈ ಸಿನಿಮಾವನ್ನು ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಈ ಚಿತ್ರದ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಅನ್ನು ಆಗಸ್ಟ್ 28 ರಂದು ಮುಂಬೈನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಅನಾವರಣಗೊಳಿಸಲಾಗುತ್ತಿದೆ. 'ಕಬ್ಜ' ನಂತರ ಹಲವು ಕಥೆಗಳ ಮೇಲೆ ಕೆಲಸ ಮಾಡುತ್ತಿದ್ದ ಚಂದ್ರು, ಇದೀಗ ಪುನಃ ನಿರ್ದೇಶನಕ್ಕೆ ಮರಳುತ್ತಿದ್ದಾರೆ.

Kurmaavatar Title: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

ಬಹುಭಾಷಾ ಕಲಾವಿದರ ನಟನೆ

ಕಳೆದ ಒಂದೆರಡು ವರ್ಷಗಳಿಂದ ಚಂದ್ರು ಹಲವು ಸಬ್ಜೆಕ್ಟ್‌ಗಳ ಮೇಲೆ ಕೆಲಸ ಮಾಡುತ್ತಿದ್ದರು. ಈ ಬಾರಿ ತಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕಾಗಿ ಅತ್ಯಂತ ಕಾಳಜಿಯಿಂದ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಅವರೊಂದಿಗಿನ ಈ ಚಿತ್ರವು ವಿವಿಧ ಚಿತ್ರರಂಗಗಳ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವ ದೊಡ್ಡ ಕ್ಯಾನ್ವಾಸ್‌ನ ಪ್ರಾಜೆಕ್ಟ್ ಆಗಿರಲಿದೆ. ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದು, ವಿವಿಧ ಭಾಷೆಗಳ ಪ್ರಮುಖ ಕಲಾವಿದರನ್ನು ಆಯ್ಕೆ ಮಾಡಲು ನಿರ್ದೇಶಕರು ಯೋಜನೆ ರೂಪಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಶಿವರಾಜ್‌ಕುಮಾರ್ ಅವರ ವೃತ್ತಿಜೀವನದ ದೃಷ್ಟಿಯಿಂದಲೂ ಇದು ಮಹತ್ವದ ಹಂತವಾಗಿದೆ. ತಮಿಳು ಸೇರಿದಂತೆ ಇತರ ದಕ್ಷಿಣ ಭಾರತೀಯ ಚಿತ್ರರಂಗಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಆಚೆಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಶಿವಣ್ಣನಿಗೆ, ಈ ಹಿಂದಿ ಎಂಟ್ರಿಯು ಅವರ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ.

ಅವರ ಮುಂಬರುವ ಚಿತ್ರಗಳ ಸಾಲಿನಲ್ಲಿ ತಮಿಳಿನ 'ಜೈಲರ್ 2', ತೆಲುಗಿನ 'ಗುಮ್ಮಡಿ ನರಸಯ್ಯ', ಪವನ್ ಒಡೆಯರ್ ನಿರ್ದೇಶನದ 'ಬೇಲ್' ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರೊಂದಿಗೆ ಶ್ರೀನಿ ನಿರ್ದೇಶನದ 'ಎ ಫಾರ್ ಆನಂದ್', ಹೇಮಂತ್ ಎಂ. ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥಿಯೇಟರ್' ಹಾಗೂ 'ಡ್ಯಾಡ್' ಚಿತ್ರಗಳು ಸದ್ಯ ಅವರ ಕೈಯಲ್ಲಿವೆ.