ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬೀರ್‌ಬಲ್‌ʼ ಶ್ರೀನಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್;‌ ಕೆವಿಎನ್‌ ಪ್ರೊಡಕ್ಷನ್ಸ್‌ನಂದ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್!‌

Birbal Case 2: ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಚಿತ್ರ ಅಧಿಕೃತವಾಗಿ ಅನೌನ್ಸ್ ಆಗಿದೆ. ಎಂ.ಜಿ. ಶ್ರೀನಿ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಅಬ್ಬರಿಸಲಿದ್ದು, ಈ ಚಿತ್ರದ ಮೂಲಕ ಖುಷ್ಬೂ ಸುಂದರ್ ಹಾಗೂ ಡೈಸಿ ಬೋಪಣ್ಣ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಮುಂಚೂಣಿ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸಿನಿಪ್ರಿಯರಿಗೆ ದಸರಾ ಹಬ್ಬದ ಭರ್ಜರಿ ಕೊಡುಗೆಯನ್ನು ನೀಡಲು ಸಜ್ಜಾಗಿದೆ. ಗುಣಮಟ್ಟದ ಹಾಗೂ ಬೃಹತ್ ಕ್ಯಾನ್ವಾಸ್‌ನ ಸಿನಿಮಾಗಳ ಮೂಲಕ ಗಮನಸೆಳೆದಿರುವ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಸಾರಥ್ಯದಲ್ಲಿ, ಕನ್ನಡದ ಬಹುನಿರೀಕ್ಷಿತ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

‘ಬೀರ್‌ಬಲ್ ಟ್ರೈಲಜಿ ಕೇಸ್ 2’ನಲ್ಲಿ ಶ್ರೀನಿ

ಈ ಹಿಂದೆ ವಿಶಿಷ್ಟ ಚಿತ್ರಕಥೆ, ಚಾಣಾಕ್ಷ ತಿರುವುಗಳು ಹಾಗೂ ಕೌತುಕದ ಕೋರ್ಟ್‌ರೂಮ್ ಡ್ರಾಮಾದ ಮೂಲಕ ಸದ್ದು ಮಾಡಿದ್ದ ‘ಬೀರ್‌ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಪ್ರೇಕ್ಷಕರಿಂದ ಮುಕ್ತ ಕಂಠದ ಪ್ರಶಂಸೆ ಪಡೆದುಕೊಂಡಿತ್ತು. ಆ ಚಿತ್ರದಲ್ಲಿ ವಕೀಲ ‘ಮಹೇಶ್ ದಾಸ್’ ಪಾತ್ರದಲ್ಲಿ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಪ್ರದರ್ಶಿಸಿದ ಬುದ್ಧಿವಂತಿಕೆಯ ತನಿಖಾ ಶೈಲಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಯಶಸ್ಸಿನ ಮುಂದುವರಿದ ಭಾಗವಾಗಿ, ಇದೀಗ ಮತ್ತಷ್ಟು ಕಗ್ಗಂಟಾದ ನಿಗೂಢ ಪ್ರಕರಣವನ್ನು ಭೇದಿಸಲು ಮಹೇಶ್ ದಾಸ್ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಮೂಲಕ ಅಖಾಡಕ್ಕಿಳಿಯುತ್ತಿದ್ದಾರೆ.

‘ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್’ ಎಂದಿದ್ದ ಶಿವರಾಜ್‌ಕುಮಾರ್; ʻಸಾರಿʼ ಅಂತ್ಹೇಳಿ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ʻಕರುನಾಡ ಚಕ್ರವರ್ತಿʼ

ಇದು ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್

ಈ ಚಿತ್ರದ ಮೂಲಕ ‘ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್’ (SCU) ಅಧಿಕೃತವಾಗಿ ವಿಸ್ತಾರಗೊಳ್ಳುತ್ತಿರುವುದು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹಿಂದೆ ಶ್ರೀನಿ ನಿರ್ದೇಶನದಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ‘ಘೋಸ್ಟ್’ ಚಿತ್ರದ ಕಥೆಯ ಕೊಂಡಿಯನ್ನು ಬೆಸೆದು, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಈ ಸೀಕ್ವೆಲ್‌ನಲ್ಲಿ ಪವರ್‌ಫುಲ್ ಅತಿಥಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಹೈ-ವೋಲ್ಟೇಜ್ ಕ್ರಾಸ್‌ಓವರ್ ಕ್ಷಣಗಳು ಮತ್ತು ಪಾತ್ರಗಳ ಪರಸ್ಪರ ನಂಟು ಈ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಅಂತರರಾಷ್ಟ್ರೀಯ ಮಟ್ಟದ ಮೆರುಗು ನೀಡಲಿವೆ.

ಕನ್ನಡಕ್ಕೆ ಮರಳಿದ ಖುಷ್ಬೂ

ಚಿತ್ರದ ತಾರಾಗಣದಲ್ಲಿ ಹಲವು ದಿಗ್ಗಜ ಕಲಾವಿದರ ಪುನರಾಗಮನವು ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಬಹುಭಾಷಾ ತಾರೆ ಖುಷ್ಬೂ ಸುಂದರ್ ಶಕ್ತಿಶಾಲಿ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದರೆ, ಬಹುಕಾಲದ ನಂತರ ಪ್ರತಿಭಾವಂತ ನಟಿ ಡೈಸಿ ಬೋಪಣ್ಣ ಕೂಡ ಬೆಳ್ಳಿತೆರೆಗೆ ಅದ್ಧೂರಿ ರೀ-ಎಂಟ್ರಿ ಕೊಡುತ್ತಿದ್ದಾರೆ.

ತಮಿಳಿನ ಯುವ ಪ್ರತಿಭೆ ಯೋಗಲಕ್ಷ್ಮಿ ಈ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದು, ಖಳನಟ ಸಂಪತ್ ರಾಜ್ ಪ್ರಮುಖ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಹಾಗೂ ಮಹೇನ್ ಸಿಂಹ ಅವರ ಛಾಯಾಗ್ರಹಣವಿರುವ ಈ ಅದ್ಧೂರಿ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.