ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸ ಬರೆದ ಬಾಲಿವುಡ್‌ನ ಶೋಲೆ ಸಿನಿಮಾ ತೆರೆಕಂಡು ಭರ್ತಿ 50 ವರ್ಷ ತುಂಬಿದೆ. ರಮೇಶ್ ಸಿಪ್ಪಿ ನಿರ್ದೇಶನದ ಈ ಚಿತ್ರ 1975ರ ಆಗಸ್ಟ್ 15ರಂದು ತೆರೆ ಕಂಡಿತ್ತು. ದರ್ಮೇದ್ರ, ಸಂಜೀವ್ ಕುಮಾರ್, ಅಮಿತಾಬ್ ಬಚ್ಚನ್, ಹೇಮ ಮಾಲಿನಿ, ಜಯಾ ಭಾದುರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಆಕ್ಷನ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ವಿಶೇಷ ಎಂದರೆ ಈ ಚಿತ್ರದ ಮುಖ್ಯ ಭಾಗವನ್ನು ರಾಮನಗರದ ಬಂಡೆಯಲ್ಲಿ ಚಿತ್ರೀಕರಿಸಲಾಗಿತ್ತು. ಹೀಗಾಗಿ ಇದು ರಾಜ್ಯದೊಂದಿಗೂ ಅವಿನಾಭಾವ ಸಂಬಂಧ ಹೊಂದಿದೆ. ಈ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಸಚಿನ್ ಪಿಲ್ಗಾಂವ್ಕರ್ (Sachin Pilgaonkar) ಸಿನಿಮಾದ ವಿಶೇಷತೆ ಬಗ್ಗೆ ವಿವರಿಸಿದ್ದಾರೆ.
ಸಚಿನ್ ಪಿಲ್ಗಾಂವ್ಕರ್ ಭಾರತೀಯ ಚಲನಚಿತ್ರೋದ್ಯಮಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಹಿಂದಿ ಮತ್ತು ಮರಾಠಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದ ಅವರು ಬಾಲ ಕಲಾವಿದನಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ʼಗೀತ್ ಗಾತಾ ಚಲ್ʼ, ʼಬಾಲಿಕಾ ಬಾಧುʼ, ʼಆಂಖಿಯೋಂ ಕೆ ಜರೋಖೋನ್ ಸೆʼ, ʼಶೋಲೆʼ ಸೇರಿದಂತೆ ಅನೇಕ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗಳು ಅವರಿಗೆ ದೊಡ್ಡ ಮಟ್ಟದ ಯಶಸ್ಸು ಕೂಡ ತಂದುಕೊಟ್ಟಿವೆ. ಅದರಲ್ಲಿಯೂ ʼಶೋಲೆʼಯಲ್ಲಿ ಅಹ್ಮದ್ ಪಾತ್ರವನ್ನೂ ಇಂದಿಗೂ ಸಿನಿಪ್ರಿಯರು ನೆನಪಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಮ್ಮ ಅನುಭವದ ಬಗ್ಗೆ ಇತ್ತೀಚಿನ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಈ ಮೂಲಕ ಈ ಸಿನಿಮಾದಿಂದ ನಿರ್ದೇಶನ ಕ್ಷೇತ್ರದ ಬಗ್ಗೆ ತನಗೆ ಆಸಕ್ತಿ ಬಂದಿತು ಎಂದು ಅವರು ತಿಳಿಸಿದ್ದಾರೆ.
ʼʼʼಶೋಲೆʼ ಸಿನಿಮಾ 50 ವರ್ಷ ಪೂರೈಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ಸಿನಿಮಾವನ್ನು ಈಗಲೂ ಜನ ನೆನಪಿಸಿಕೊಳ್ಳುತ್ತಿದ್ದಾರೆ. 50 ವರ್ಷಗಳ ನಂತರವೂ ಒಂದು ಚಿತ್ರಕ್ಕೆ ಅಭಿಮಾನಿ ಬಳಗ ಇದೆ ಎಂದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ʼಶೋಲೆʼ ಚಿತ್ರತಂಡಕ್ಕೆ ಮತ್ತು ನಿರ್ದೇಶಕ ರಮೇಶ್ ಸಿಪ್ಪಿಗೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆʼʼ ಎಂದಿದ್ದಾರೆ.
ʼʼಶೋಲೆʼಯಂತಹ ಸಿನಿಮಾದಲ್ಲಿ ನಾನು ಅಭಿನಯಿಸಿದ್ದೇನೆ ಎಂದು ಹೇಳುವುದೇ ಬಹಳ ದೊಡ್ಡ ವಿಷಯ. ಇದು ನನ್ನ ವೃತ್ತಿ ಜೀವನದ ಬಹಳ ಅಮೂಲ್ಯವಾದ ಅವಕಾಶವಾಗಿತ್ತು. ʼಶೋಲೆʼ ನಿರ್ಮಾಣದ ಸಮಯದಲ್ಲಿ ರಮೇಶ್ ಸಿಪ್ಪಿ ನನ್ನ ನಿರ್ದೇಶನದ ಕನಸುಗಳನ್ನು ಪ್ರೋತ್ಸಾಹಿಸಿದರು. ಹೀಗಾಗಿ ರಮೇಶ್ ನನ್ನ ವೃತ್ತಿ ಗುರು ಕೂಡ ಹೌದುʼʼ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:Nodiddu Sullagabahudu Movie: ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್
ʼʼರಮೇಶ್ ʼಶೋಲೆʼ ಚಿತ್ರದ ಇತರ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ಮಾಡಲು ನನಗೆ ತಿಳಿಸಿದ್ದರು. ಆಗ ನನಗೆ 17 ವರ್ಷವಷ್ಟೇ. ಹೊಸಬರನ್ನು ನಿರ್ದೇಶನಕ್ಕೆ ಆಯ್ಕೆ ಮಾಡುವುದು ತುಂಬಾ ದೊಡ್ಡ ವಿಷಯವಾಗಿತ್ತು. ಆದರೆ ಅವರಿಗೆ ನನ್ನ ಮೇಲೆ ವಿಶ್ವಾಸವಿತ್ತು. ಹೀಗಾಗಿ ನಾನು ಅವರ ನಿರ್ದೇಶನ ವಿಭಾಗದ ಭಾಗವಾದೆʼʼ ಎಂದು ಅವರು ತಿಳಿಸಿದ್ದಾರೆ.
ಬಹುತಾರಾಗಣದ ʼಶೋಲೆʼ ಆ ಕಾಲದ ಅತಿ ದೊಡ್ಡ ಹಿಟ್ ಚಿತ್ರ ಎನಿಸಿಕೊಂಡಿತ್ತು. ಅಮಿತಾಬ್ ಮತ್ತು ಧರ್ಮೇಂದ್ರ ಜೈ ಮತ್ತು ವೀರು ಪಾತ್ರದಲ್ಲಿ ನಟಿಸಿದ್ದು, ಹೇಮಾ ಮಾಲಿನಿ ಬಸಂತಿಯಾಗಿ ಮಿಂಚು ಹರಿಸಿದ್ದರು. ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಚಿತ್ರಕಥೆ ಬರೆದ ಈ ಚಿತ್ರದಲ್ಲಿ ಸಂಜೀವ್ ಕುಮಾರ್, ಅಮ್ಜದ್ ಖಾನ್, ಇಫ್ತೆಕರ್, ಎಕೆ ಹಂಗಲ್, ಜಗದೀಪ್, ಅಸ್ರಾನಿ, ಮ್ಯಾಕ್ ಮೋಹನ್ ಮತ್ತು ವಿಜು ಖೋಟೆ ಮತ್ತಿತರರು ನಟಿಸಿದ್ದಾರೆ.