'ಪಡ್ಡೆಹುಲಿ' ಖ್ಯಾತಿಯ ನಟ, ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರಿಗೆ ಇಂದು (ಏ.5) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಅವರು ನಟಿಸಿರುವ 'ದಿಲ್‌ದಾರ್' ಸಿನಿಮಾದಿಂದ ಪವರ್‌ಫುಲ್ ಬರ್ತ್‌ಡೇ ಟೀಸರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆ ಮೂಲಕ ಶ್ರೇಯಸ್ ಮಂಜುಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ.
ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ಶ್ರೇಯಸ್
ಮೊದಲ ಸಿನಿಮಾದಿಂದಲೇ ಮಾಸ್ ಮತ್ತು ಆ್ಯಕ್ಷನ್ ಲುಕ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಶ್ರೇಯಸ್, ದಿಲ್‌ದಾರ್ ಸಿನಿಮಾದ ಹೊಸ ಟೀಸರ್‌ನಲ್ಲಿ ಹಿಂದೆಂದೂ ಕಾಣದಂತಹ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ಫೈಟ್ ಸೀಕ್ವೆನ್ಸ್ ಹಾಗೂ ಖಡಕ್ ಸಂಭಾಷಣೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಶ್ರೇಯಸ್ ಮಂಜು ರೆಡಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಟೀಸರ್ ವೈರಲ್ ಆಗಿದ್ದು, ಶ್ರೇಯಸ್ ವೃತ್ತಿಜೀವನಕ್ಕೆ ಈ ಸಿನಿಮಾ ದೊಡ್ಡ ಸಕ್ಸಸ್ ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
Marutha Movie: ಸದ್ದಿಲ್ಲದೆ ಮುಕ್ತಾಯವಾಯಿತು ದುನಿಯಾ ವಿಜಯ್, ಶ್ರೇಯಸ್ ಕೆ ಮಂಜು ಅಭಿನಯದ ʼಮಾರುತʼ ಚಿತ್ರದ ಶೂಟಿಂಗ್
ನಿರ್ದೇಶಕರು ಹೇಳೋದೇನು?
ಈ ಸಿನಿಮಾವನ್ನು ಮಧು ಗೌಡ ಗಂಗೂರ್ ನಿರ್ದೇಶನ ಮಾಡಿದ್ದು, "ದಿಲ್‌ದಾರ್ ಕೇವಲ ಆ್ಯಕ್ಷನ್ ಸಿನಿಮಾವಲ್ಲ. ಇದು ಇಂದಿನ ಯುವ ಪೀಳಿಗೆಯ ಆಲೋಚನೆಗಳು ಮತ್ತು ಜೀವನಶೈಲಿಗೆ ನೇರಾನೇರ ಕನ್ನಡಿ ಹಿಡಿಯುವಂತಹ ವಿಶಿಷ್ಟ ಕಥೆಯನ್ನು ಹೊಂದಿದೆ" ಎಂದು ಹೇಳಿದ್ದಾರೆ. ಈಗಾಗಲೇ ದಿಲ್‌ದಾರ್ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಮುಕ್ತಾಯದ ಹಂತಕ್ಕೆ ತಲುಪಿವೆ.
ʻದಿಲ್‌ದಾರ್ʼ ಸಿನಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ಏನ್ಸಿಯೆಂಟ್ ಮೂವೀಸ್ ಬ್ಯಾನರ್‌ನಡಿಯಲ್ಲಿ ಡಾ. ಆರ್. ಸಂತೋಷ್ ಕುಮಾರ್ (ಎಸ್‌ವಿಟಿ) ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಶರಣ್ ಅವರ ತಂಗಿಯ ಮಗಳಾದ ಕೀರ್ತಿ ಕೃಷ್ಣ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ಸಾಧು ಕೋಕಿಲ, ಚಂದ್ರಪ್ರಭ, ಕಾರ್ತಿಕ್ ಹಾಗೂ ಚಿಲ್ಲರ್ ಮಂಜು, ಭಜರಂಗಿ ಲೋಕಿ ಮತ್ತು ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್ ಮುಂತಾದವರು ನಟಿಸಿದ್ದಾರೆ. 'ದಿಲ್‌ದಾರ್' ತಂಡವು ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಘೋಷಿಸಲು ಸಜ್ಜಾಗಿದೆ.