ಕನ್ನಡ ಚಿತ್ರರಂಗದ ವಿಶಿಷ್ಟ ಕಥಾವಸ್ತುಗಳ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ 'ಲಂಬೋದರ 2.0' ಸಿನಿಮಾದ ಟ್ರೇಲರ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ ಹೈ-ಕಾನ್ಸೆಪ್ಟ್ ಸೈಂಟಿಫಿಕ್ ಸೋಶಿಯಲ್ ಥ್ರಿಲ್ಲರ್ ಚಿತ್ರವು ಇದೇ ನವೆಂಬರ್ 13ರಂದು ಬೆಳ್ಳಿಪರದೆಯ ಮೇಲೆ ಅಪ್ಪಳಿಸಲು ಸಂಪೂರ್ಣ ಸಜ್ಜಾಗಿದೆ.
ಈ ಚಿತ್ರದ ಮೂಲಕ ಬಾಲಿವುಡ್ನ ಪ್ರತಿಭೆಗಳು ಸ್ಯಾಂಡಲ್ವುಡ್ಗೆ ಆಗಮಿಸುತ್ತಿರುವುದು ಮತ್ತು ಭಾರತೀಯ ಚಿತ್ರರಂಗದಲ್ಲೇ ಮೊಟ್ಟಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೋಬೋಟ್ ಅನ್ನು ನಟನೆಯಲ್ಲಿ ಬಳಸಿಕೊಂಡಿರುವುದು ಕುತೂಹಲ ಕೆರಳಿಸಿದೆ.
ಕುನಾಲ್ಗೆ ಮಹತ್ವದ ಪಾತ್ರ
ಈ ಚಿತ್ರದಲ್ಲಿ ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ 'ರಂಗ್ ದೇ ಬಸಂತಿ', 'ಡಾನ್ 2' ಖ್ಯಾತಿಯ ಹೆಸರಾಂತ ನಟ ಕುನಾಲ್ ಕಪೂರ್ ಕೂಡ ಈ ಸಿನಿಮಾದ ಮೂಲಕ ಚಂದನವನಕ್ಕೆ ಪ್ರವೇಶಿಸಿದ್ದಾರೆ. ಇವರೊಂದಿಗೆ ನಟಿ ಮೇಘನಾ ಗಾಂವ್ಕರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿನ ಕೃಷ್ಣನ ರಹಸ್ಯ ಪಾತ್ರದ ಸುತ್ತ ತೀವ್ರ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ.
Simple Suni: ಸಿಂಪಲ್ ಸುನಿಯ ಲಂಬೋದರ 2.0 ಚಿತ್ರಕ್ಕೆ ಈ ಬಾಲಿವುಡ್ ನಿರ್ಮಾಪಕ ಸಾಥ್!
ಹೀರೋ ಆದ ಅನಿಲ್ ಶೆಟ್ಟಿ
ಈ ಚಿತ್ರಕ್ಕೆ ಸ್ವತಃ ಕಥೆ-ಚಿತ್ರಕಥೆ ಬರೆದಿರುವ ಅನಿಲ್ ಶೆಟ್ಟಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈವರೆಗೆ ತಮ್ಮದೇ ಕಥೆಗಳಿಗೆ ನಿರ್ದೇಶನ ಮಾಡುತ್ತಿದ್ದ ʻಸಿಂಪಲ್ʼ ಸುನಿ, ಇದೇ ಮೊದಲ ಬಾರಿಗೆ ಮತ್ತೊಬ್ಬರ ಸ್ಕ್ರಿಪ್ಟ್ಗೆ ಆ್ಯಕ್ಷನ್-ಕಟ್ ಹೇಳುತ್ತಿರುವುದು ಮತ್ತೊಂದು ವಿಶೇಷ. ಬಾಲಿವುಡ್ನ ಖ್ಯಾತ 'ಮಹಾವೀರ್ ಜೈನ್ ಫಿಲಮ್ಸ್' ಈ ಚಿತ್ರದ ಬೆನ್ನಿಗೆ ನಿಂತಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು ಎನ್ನಬಹುದಾದ ಅಂಶವೆಂದರೆ, ರೆಗ್ಯುಲರ್ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನ, ಡಿಜಿಟಲ್ ಎಫೆಕ್ಟ್ಸ್ ಅಥವಾ ಪ್ರಾಸ್ಥೆಟಿಕ್ಸ್ ಮೇಕಪ್ನ ಹಂಗಿಲ್ಲದೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬೋಟ್ಗೆ ಪ್ರಮುಖ ಪಾತ್ರ ನೀಡಿರುವುದು. ಇದಕ್ಕಾಗಿ ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆ 'ಮಚಾನಿ ರೋಬೋಟಿಕ್ಸ್' ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹ್ಯೂಮನಾಯ್ಡ್ ರೋಬೋಟ್ 'ಜಿಯಾ'ಳನ್ನು ಬಳಸಿಕೊಳ್ಳಲಾಗಿದೆ.
ಜಿಯಾ ನೇರವಾಗಿ ಶೂಟಿಂಗ್ ಸೆಟ್ನಲ್ಲೇ ರಿಯಲ್ ಟೈಮ್ನಲ್ಲಿ ನಟಿಸಿದ್ದು, ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವು ಭವಿಷ್ಯದಲ್ಲಿ ಚಿತ್ರರಂಗದ ನಟನಾ ಕ್ಷೇತ್ರವನ್ನು ಹೇಗೆ ಮರುರೂಪಿಸಬಲ್ಲದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಬೆಂಗಳೂರಿನ ಹಿನ್ನೆಲೆಯಲ್ಲೇ ಸಾಗುವ 'ಲಂಬೋದರ 2.0' ಕಥೆಯು ಇಂದಿನ ಡಿಜಿಟಲ್ ಯುಗದ ಕಟು ವಾಸ್ತವಗಳ ಮೇಲೆ ಬೆಳಕು ಚೆಲ್ಲುತ್ತದೆ. ಸದಾ ಸ್ಕ್ರೀನ್ ಟೈಮ್ನಲ್ಲಿ ಮುಳುಗಿರುವ, ಇಂಟರ್ನೆಟ್ ಮೂಲಕ ಇಡೀ ಜಗತ್ತಿನೊಂದಿಗೆ ಸಂಪರ್ಕದಲ್ಲಿದ್ದರೂ ಒಂಟಿತನ ಅನುಭವಿಸುವ ಹಾಗೂ ಅದೃಶ್ಯ ಡಿಜಿಟಲ್ ಕಣ್ಗಾವಲಿನಲ್ಲಿ ಸಿಲುಕಿರುವ ಇಂದಿನ ಮನುಷ್ಯನ ಮಾನಸಿಕ ತುಮುಲಗಳನ್ನು ಮತ್ತು ನೈಜ ಸಂತೋಷದ ಮಹತ್ವವನ್ನು ಚಿತ್ರದಲ್ಲಿ ಆಳವಾಗಿ ಕಟ್ಟಿಕೊಡಲಾಗಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಟ್ರೇಲರ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದು, ನವೆಂಬರ್ 13ರಂದು ಚಿತ್ರಮಂದಿರಗಳಲ್ಲಿ ಈ ವೈಜ್ಞಾನಿಕ ಕೌತುಕವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಎದುರುನೋಡುತ್ತಿದ್ದಾರೆ.