ಭಾರತೀಯ ಚಿತ್ರರಂಗ ಕಂಡ ಮಹಾನ್ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ (ಏ.13) ನಿಧನರಾಗಿದ್ದಾರೆ. ದೇಶಾದ್ಯಂತ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಆಶಾ ಭೋಸ್ಲೆ ಅವರದ್ದು ಸಂಗೀತ ಹಿನ್ನೆಲೆಯ ಕುಟುಂಬ. ಸಹೋದರಿಯರಾದ ಲತಾ ಮಂಗೇಶ್ಕರ್, ಉಷಾ ಮಂಗೇಶ್ಕರ್ ಕೂಡ ದೊಡ್ಡ ಗಾಯಕಿಯರು. ಇಂತಹ ಹಿನ್ನೆಲೆಯುಳ್ಳ ಆಶಾ ಭೋಸ್ಲೆ ಅವರ ದಾಂಪತ್ಯ ಬದುಕು ಮಾತ್ರ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಬಹಳ ಚಿಕ್ಕ ವಯಸ್ಸಿಗೆ ಆಶಾ ಮದುವೆ ಆಗಬೇಕಾಯಿತು.
ಓಡಿಹೋಗಿ ಮದುವೆಯಾಗಿದ್ದ ಆಶಾ
ಆಶಾ ಭೋಸ್ಲೆಗೆ ಅಗಿನ್ನೂ 16 ವರ್ಷ ವಯಸ್ಸು. ಚಿತ್ರರಂಗಕ್ಕೆ ಗಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ನಿಧನದ ನಂತರ ಕುಟುಂಬ ನಿರ್ವಹಣೆಯ ಹೊಣೆ ಲತಾ ಮತ್ತು ಆಶಾ ಅವರ ಮೇಲಿತ್ತು. ಇಂತಹ ಸಂದರ್ಭದಲ್ಲಿ ಗಣಪತ್ ರಾವ್ ಭೋಸ್ಲೆ ಜೊತೆಗೆ ಮದುವೆಯಾಗುವ ನಿರ್ಧಾರ ಮಾಡಿದ್ದರು ಆಶಾ. ಆಗಿನ್ನೂ ಅವರಿಗೆ 16 ವರ್ಷ ವಯಸ್ಸು. ಗಣಪತ್ ರಾವ್ ಭೋಸ್ಲೆ ಅವರು ಆಶಾಗಿಂತ ವಯಸ್ಸಿನಲ್ಲಿ ತುಂಬ ದೊಡ್ಡವರಾಗಿದ್ದರು.
Asha Bhosle Death: ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ: ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಂತಾಪ
ಇನ್ನು, ಈ ಮದುವೆಗೆ ಲತಾ ಮಂಗೇಶ್ಕರ್ ತೀವ್ರ ವಿರೋಧ ಮಾಡಿದ್ದರು. ಆಶಾ ತಮ್ಮ ಪ್ರೇಮಿಯೊಂದಿಗೆ ಓಡಿಹೋಗಿದ್ದನ್ನು ಬೇಜವಾಬ್ದಾರಿತನದ ಪರಮಾವಧಿ ಎಂದು ಲತಾ ಪರಿಗಣಿಸಿದ್ದರು. ಆಶಾ ಅವರ ಈ ನಿರ್ಧಾರದಿಂದಾಗಿ ಇಡೀ ಕುಟುಂಬದ ಜವಾಬ್ದಾರಿಯನ್ನು ಲತಾ ಅವರ ಮೇಲೆ ಹಾಕಿದಂತಾಗಿತ್ತು. ಹಾಗಾಗಿ, ಅನೇಕ ಸಮಯದವರೆಗೂ ಇಬ್ಬರ ನಡುವೆ ಮಾತುಕತೆ ಇರಲಿಲ್ಲ. "ಅದು ಪ್ರೇಮ ವಿವಾಹವಾಗಿತ್ತು ಮತ್ತು ಲತಾ ದೀದಿ ನನ್ನೊಂದಿಗೆ ದೀರ್ಘಕಾಲ ಮಾತನಾಡಲಿಲ್ಲ. ಅವರಿಗೆ ಈ ಸಂಬಂಧ ಇಷ್ಟವಿರಲಿಲ್ಲ" ಎಂದು ಆಶಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
"ಅವರ ಹಾಡುಗಳು ಜನರ ಮನಸಲ್ಲಿ ಶಾಶ್ವತ"; ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಅತ್ತ ಆಶಾ ಮತ್ತು ಗಣಪತ್ ನಡುವೆ ಹೊಂದಾಣಿಕೆ ಮೂಡಲಿಲ್ಲ. ಆಶಾಗೆ ಎರಡು ಮಕ್ಕಳಾಗಿದ್ದವು ಮತ್ತು ಮೂರನೇ ಮಗುವಿನ ಗರ್ಭಿಣಿಯಾಗಿದ್ದರು. ಅಂತಹ ಸಂದರ್ಭದಲ್ಲಿ ಗಣಪತ್ ರಾವ್ ಅವರ ಮನೆಯಿಂದ ಆಶಾ ಹೊರಬೀಳಬೇಕಾಯಿತು. ಹೀಗೆ ಮದುವೆಯಾದ 11 ವರ್ಷದಕ್ಕೆ ಅದು ಮುರಿದುಬಿತ್ತು. ಆಗ ಆಶಾ ಅವರಿಗೆ 27 ವರ್ಷ ವಯಸ್ಸು. ತನ್ನೆರಡು ಮಕ್ಕಳೊಂದಿಗೆ ಗರ್ಭಿಣಿಯಾಗಿದ್ದ ಆಶಾ ಅವರು ತವರು ಮನೆ ಸೇರಿದರು. ತಮ್ಮ ಮೊದಲ ವಿವಾಹದ ಬಗ್ಗೆ ಮಾತನಾಡುತ್ತಾ, "ಅದೊಂದು ನೋವಿನ ಅಧ್ಯಾಯ. ನಮ್ಮದು ಪ್ರೇಮ ವಿವಾಹವಾಗಿತ್ತು. ಆ ಕುಟುಂಬವು ಬಹಳ ಸಂಪ್ರದಾಯಬದ್ಧವಾಗಿತ್ತು ಮತ್ತು ಸೊಸೆಯಾಗಿ ಒಬ್ಬ ಗಾಯನ ತಾರೆಯನ್ನು ಸ್ವೀಕರಿಸುವ ಶಕ್ತಿ ಅವರಿಗಿರಲಿಲ್ಲ. ವೈವಾಹಿಕ ಜೀವನದಲ್ಲಿ ಮಾನಸಿಕ ಸಂಕಟ, ನಿಂದನೆ ಮತ್ತು ಕೆಟ್ಟ ನಡವಳಿಕೆಯನ್ನು ಅನುಭವಿಸಿದ್ದೇನೆ" ಎಂದು ಆಶಾ ಹೇಳಿಕೊಂಡಿದ್ದರು.
ನಾನು ಯಾರನ್ನೂ ದೂಷಿಸುವುದಿಲ್ಲ ಎಂದಿದ್ದ ಆಶಾ
ತಮ್ಮ ಮೊದಲ ಮದುವೆ ಬಗ್ಗೆ ಮಾತನಾಡುತ್ತ, "ನನ್ನ ಮೊದಲ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು, ಕೆಟ್ಟ ನಡವಳಿಕೆ ಇತ್ತು. ಅಂತಿಮವಾಗಿ ನನ್ನ ಕಿರಿಯ ಮಗ ಆನಂದ್ ಹುಟ್ಟುವ ಮುನ್ನ ನನ್ನನ್ನು ಮನೆಯಿಂದ ಹೊರಹೋಗಲು ಹೇಳಿದರು. ನಂತರ ನಾನು ನನ್ನ ತಾಯಿ, ಸಹೋದರಿಯರು ಮತ್ತು ಸಹೋದರನ ಬಳಿಗೆ ಮರಳಿದೆ. ನಾನು ಯಾರನ್ನೂ ದೂಷಿಸುವುದಿಲ್ಲ, ಯಾರ ಮೇಲೂ ಕೆಟ್ಟ ಭಾವನೆ ಹೊಂದಿಲ್ಲ. ನಾನು ಮಿಸ್ಟರ್ ಗಣಪತ್ ರಾವ್ ಭೋಸ್ಲೆ ಅವರನ್ನು ಭೇಟಿಯಾಗದಿದ್ದರೆ, ನನಗೆ ಈ ಮೂವರು ಅದ್ಭುತ ಮಕ್ಕಳು ಸಿಗುತ್ತಿರಲಿಲ್ಲ (ಹೇಮಂತ್, ವರ್ಷಾ, ಆನಂದ್) ಎಂದು ನನಗನ್ನಿಸುತ್ತದೆ, ಆನಂತರ ನನ್ನ ಜೀವನವು ಚೆನ್ನಾಗಿಯೇ ಸಾಗಿತು" ಎಂದು ಆಶಾ ಹೇಳಿದ್ದರು.
47ನೇ ವಯಸ್ಸಿನಲ್ಲಿ ಎರಡನೇ ಮದುವೆ
ಮೊದಲ ಪತಿಯಿಂದ ದೂರವಾದ ಬಳಿಕ 20 ವರ್ಷ ಒಂಟಿಯಾಗಿದ್ದ ಆಶಾ ಭೋಸ್ಲೆ ಅವರು ಖ್ಯಾತ ಸಂಗೀತ ಸಂಯೋಜಕ ರಾಹುಲ್ ದೇವ್ ಬರ್ಮನ್ ಅವರಲ್ಲಿ ಒಡನಾಟವನ್ನು ಕಂಡುಕೊಂಡರು. 1980ರಲ್ಲಿ ಆರ್ ಡಿ ಬರ್ಮನ್ ಜೊತೆ ದಾಂಪತ್ಯ ಬದುಕಿಗೆ ಕಾಲಿಡುವ ನಿರ್ಧಾರ ಮಾಡಿದರು. ಆಗ ಆಶಾ ಭೋಸ್ಲೆ ಅವರಿಗೆ 47 ವರ್ಷ ವಯಸ್ಸು. ಬರ್ಮನ್‌ಗೆ ಆಗ 41 ವರ್ಷ ವಯಸ್ಸು. ಈ ಮದುವೆಗೆ ಇಬ್ಬರ ಮನೆಯವರೂ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಬರ್ಮನ್ ಅವರ ತಾಯಿ ಈ ಸಂಬಂಧವನ್ನು ಒಪ್ಪಿರಲಿಲ್ಲ. ಆದರೂ ಎಲ್ಲಾ ಅಡೆತಡೆಗಳನ್ನು ಮೀರಿ ಅವರಿಬ್ಬರು ಒಂದಾದರು. ಅಂದಹಾಗೆ ಬರ್ಮನ್‌ಗೂ ಅದು ಎರಡನೇ ಮದುವೆ ಆಗಿತ್ತು. 1994ರಲ್ಲಿ ಆರ್. ಡಿ. ಬರ್ಮನ್ ಅವರು ನಿಧನರಾದರು.