ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ; ಪೋಸ್ಟರ್, ಆಹ್ವಾನ ಪತ್ರಿಕೆ ಬಿಡುಗಡೆ!

Lata Mangeshkar tribute: ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ನಡೆಯಲಿರುವ 'ಚಿಟ್ಟೀ ಆಯೀ ಹೈ' ಕಾರ್ಯಕ್ರಮ ಇದೇ ಸೆಪ್ಟೆಂಬರ್ 19ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ. ಕಮಲ್ ರಾಜ್ ನೇತೃತ್ವದಲ್ಲಿ ನಡೆಯಲಿರುವ ಈ ಅಪರೂಪದ ಗಾನ ನಮನಕ್ಕೆ ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಕುಟುಂಬ ಸಮೇತರಾಗಿ ಸಾಕ್ಷಿಯಾಗಲಿದ್ದಾರೆ.

ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಗಾಯಕಿ, ‘ಭಾರತ ರತ್ನ’ ಲತಾ ಮಂಗೇಶ್ಕರ್ ಅವರ ಸವಿ ನೆನಪಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಎಂಬ ಹೆಸರಿನಲ್ಲಿ ಅದ್ಧೂರಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಕನ್ನಡ ಚಿತ್ರರಂಗದ ನಟ, ಗಾಯಕ, ನಿರ್ಮಾಪಕ ಹಾಗೂ ವಿತರಕ ಕಮಲ್ ರಾಜ್ (ಕಲೀಂ ಪಾಷಾ) ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮವು ಇದೇ ಸೆಪ್ಟೆಂಬರ್ 19ರ ಶನಿವಾರ ಸಂಜೆ 6 ಗಂಟೆಗೆ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನೆರವೇರಲಿದೆ. ಈ ವಿಶೇಷ ಸಮಾರಂಭಕ್ಕೆ ಸಂಬಂಧಿಸಿದ ಅಧಿಕೃತ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಯನ್ನು ಹಿರಿಯ ನಟಿ ಭವ್ಯಾ, ನಟ ಪ್ರಥಮ್ ಹಾಗೂ ಆಯೋಜಕ ಕಮಲ್ ರಾಜ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಟಿ ಭವ್ಯಾ, "ಭಾರತೀಯ ಸಂಗೀತ ಲೋಕದ ವಿಭಿನ್ನ ಪ್ರಾಕಾರದ ಗೀತೆಗಳನ್ನು ‘ಚಿಟ್ಟೀ ಆಯೀ ಹೈ’ ಮೂಲಕ ಒಂದೇ ವೇದಿಕೆಗೆ ತರುತ್ತಿರುವುದು ರಾಜ್ಯದ ಮಟ್ಟಿಗೆ ವಿಶಿಷ್ಟ ಪ್ರಯತ್ನವಾಗಿದೆ. ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಸಂಗೀತಾಸಕ್ತರಿಗೆ ಹೊಸ ಅನುಭವ ಮತ್ತು ಆನಂದವನ್ನು ನೀಡಲಿದೆ. ಸಂಗೀತ ಮತ್ತು ಕೇಳುಗರ ನಡುವೆ ಸುಂದರ ಕೊಂಡಿ ಬೆಸೆಯುತ್ತಿರುವ ಕಮಲ್ ರಾಜ್ ಅವರ ಈ ಮಹತ್ವದ ಕಾರ್ಯ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಟ ಪ್ರಥಮ್ ಸೇರಿದಂತೆ ಸಮಾರಂಭದಲ್ಲಿದ್ದ ಅತಿಥಿಗಳು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.

ಅಯೋಧ್ಯೆಯ ಚೌಕ್‌ಗೆ ಗಾಯಕಿ ʻಲತಾ ಮಂಗೇಶ್ಕರ್ʼ ಹೆಸರು ನಾಮಕರಣ

ಉಷಾ ಮಂಗೇಶ್ಕರ್ ಕುಟುಂಬದವರ ಆಗಮನ

ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ಹಂಚಿಕೊಂಡ ಆಯೋಜಕ ಕಮಲ್ ರಾಜ್ (ಕಲೀಂ ಪಾಷಾ), "ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನೆನಪಿನಲ್ಲಿ ಆಯೋಜಿಸಲಾಗಿರುವ ಈ ಸಂಜೆಯಲ್ಲಿ ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಹಾಗೂ ಅವರ ಕುಟುಂಬದವರು ವಿಶೇಷವಾಗಿ ಭಾಗವಹಿಸುತ್ತಿರುವುದು ಬೆಂಗಳೂರಿಗೆ ಐತಿಹಾಸಿಕ ಕ್ಷಣವಾಗಿದೆ. ದೇಶದ ವಿವಿಧ ಭಾಷೆಗಳ ಹೆಸರಾಂತ ಗಾಯಕರು ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಲಿದ್ದಾರೆ. ಕೇವಲ ವೇದಿಕೆ ಪ್ರದರ್ಶನಕ್ಕೆ ಸೀಮಿತವಾಗದೆ ಭಾಷೆ, ಗಡಿ, ಸಂಸ್ಕೃತಿಗಳನ್ನು ಮೀರಿ ಜನರ ಮನಸ್ಸುಗಳನ್ನು ಒಗ್ಗೂಡಿಸುವುದು ನಮ್ಮ ಆಶಯ. ಹಿಂದೂಸ್ಥಾನಿ, ಕರ್ನಾಟಿಕ್, ಘಜಲ್, ಸೂಫಿ ಸೇರಿದಂತೆ ಕಾಲಾತೀತ ಶಾಸ್ತ್ರೀಯ ಮತ್ತು ಜನಪದ ಗೀತೆಗಳ ಸಂಗಮ ಈ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ" ಎಂದು ತಿಳಿಸಿದರು.

ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ

ಇದೇ ವೇಳೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಕಮಲ್ ರಾಜ್, "ಇದು ಕೇವಲ ಸಂಗೀತ ಕಾರ್ಯಕ್ರಮವಲ್ಲ, ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ. ಉಷಾ ಮಂಗೇಶ್ಕರ್ ಅವರಂತಹ ದಿಗ್ಗಜರ ಸಮ್ಮುಖದಲ್ಲಿ ಇಂಥದ್ದೊಂದು ಕಾರ್ಯಕ್ರಮ ನಡೆಸುವುದು ಅವಿಸ್ಮರಣೀಯ ಸಂಗತಿ. ನನ್ನ ಕಲಾಯಾತ್ರೆಯನ್ನು ಪ್ರೋತ್ಸಾಹಿಸಿ ಬೆಂಬಲವಾಗಿ ನಿಂತ ಪ್ರತಿಯೊಬ್ಬ ಸಂಗೀತಪ್ರೇಮಿಗೂ ಈ ಸಂಗೀತ ಸಂಜೆಯನ್ನು ಅರ್ಪಿಸುತ್ತಿದ್ದೇನೆ" ಎಂದರು. ಸಿನಿಮಾ, ಸಂಗೀತ, ಉದ್ಯಮ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದ ಹಲವು ಗಣ್ಯರು ಸಾಕ್ಷಿಯಾಗಲಿರುವ ಈ ಸಂಗೀತ ರಸಮಂಜರಿಯನ್ನು ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಸಜ್ಜಾಗಿದೆ.