`ಗೋಲ್ಡನ್ ಸ್ಟಾರ್' ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಪಿನಾಕ’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಕುತೂಹಲ ಮೂಡಿಸಿದೆ. ಈ ಚಿತ್ರದ ಮೂಲಕ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ತಾಯಿ-ಮಗಳ ಜೋಡಿಯಾದ ಸಾರಿಕಾ ಮತ್ತು ಮೃದಿನಿ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.
ವಿಶೇಷವೆಂದರೆ, ಇವರಿಬ್ಬರು ನಿಜ ಜೀವನದಂತೆಯೇ ಸಿನಿಮಾದಲ್ಲೂ ಅಮ್ಮ-ಮಗಳಾಗಿಯೇ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಗಣೇಶ್ ಅವರಿಗೆ ಅಕ್ಕನಾಗಿ ಸಾರಿಕಾ ನಟಿಸಿದ್ದರೆ, ಅಕ್ಕನ ಮಗಳ ಪ್ರಮುಖ ಪಾತ್ರದಲ್ಲಿ ಬಾಲನಟಿ ಮೃದಿನಿ ಕಾಣಿಸಿಕೊಂಡಿದ್ದಾಳೆ. ವಿಶ್ವವಾಣಿ ಟಿವಿಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಈ ಅಮ್ಮ - ಮಗಳು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಗಳ ನಟನೆಯನ್ನ ಕೊಂಡಾಡಿದ ಸಾರಿಕಾ
"ಈ ಸಿನಿಮಾಗಾಗಿ ನಾವು ಯಾವುದೇ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ. ಚಿತ್ರದಲ್ಲಿ ಯಾವ ರೀತಿಯ ಸನ್ನಿವೇಶಗಳು ಇರುತ್ತವೆ ಎಂದು ಕಥೆ ಹೇಳಿದ್ದರಷ್ಟೇ. ಚಿತ್ರೀಕರಣದ ಸಮಯದಲ್ಲಿ ಮಗಳು ಮೃದಿನಿ ನಟಿಸಿದ ರೀತಿಯನ್ನು ನೋಡಿ ನಮಗೇ ಆಶ್ಚರ್ಯವಾಯಿತು. ಗಣೇಶ್ ಸರ್ ಅವರ ಅಕ್ಕನ ಮಗಳಾಗಿ ಆಕೆ ಅತ್ಯಂತ ನವಿರಾದ ಹಾಸ್ಯ ಪ್ರಧಾನ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾಳೆ. ಶೂಟಿಂಗ್ ಸೆಟ್‌ನಲ್ಲಿ ಎಲ್ಲರ ಜೊತೆ ಬೇಗನೆ ಬೆರೆತು ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ" ಎಂದು ಮಗಳ ನಟನೆಯನ್ನು ಸಾರಿಕಾ ಶ್ಲಾಘಿಸಿದ್ದಾರೆ.
15 ದಿವಸಗಳ ಅಂತರದಲ್ಲಿ ಗಣೇಶ್ ನಟನೆಯ 2 ಸಿನಿಮಾ ರಿಲೀಸ್; ʻಗೋಲ್ಡನ್ ಸ್ಟಾರ್ʼ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!
ಆಕಸ್ಮಿಕವಾಗಿ ನಟಿಯಾದ ಸಾರಿಕಾ
"ನನಗೆ ಯಾವುದೇ ಚಿತ್ರರಂಗದ ಹಿನ್ನೆಲೆ ಇಲ್ಲ. ‘ಪಿನಾಕ’ ನನ್ನ ವೃತ್ತಿಜೀವನದ ಮೊದಲ ಸಿನಿಮಾವಾಗಿದೆ. ಮಗಳ ಆಡಿಷನ್ ಮುಗಿದು ಆಕೆ ಆಯ್ಕೆಯಾದ ನಂತರ, ಚಿತ್ರತಂಡದವರು ನನ್ನನ್ನು ಗಣೇಶ್ ಸರ್ ಅಕ್ಕನ ಪಾತ್ರ ಮಾಡಲು ಕೇಳಿದರು. ಮಗಳನ್ನು ಹೇಗೂ ಚಿತ್ರೀಕರಣಕ್ಕೆ ಕರೆದುಕೊಂಡು ಬರುತ್ತೀರಾ, ಹಾಗಾಗಿ ನೀವೇ ಈ ಪಾತ್ರ ಮಾಡಿ ಎಂದು ಕೇಳಿಕೊಂಡರು. ಸಿನಿಮಾದಲ್ಲಿ ನಟನೆ ನನಗೆ ಹೊಸದಾಗಿದ್ದರೂ, ನಿರ್ದೇಶಕ ಧನು ಮಾಸ್ಟರ್ ಅವರು ಧೈರ್ಯ ತುಂಬಿದ ಕಾರಣ ಈ ಪಾತ್ರವನ್ನು ಒಪ್ಪಿಕೊಂಡು ಮಾಡಿದ್ದೇನೆ" ಎಂದು ಸಾರಿಕಾ ತಿಳಿಸಿದ್ದಾರೆ.
ಅಕ್ಟೋಬರ್ 2 ಕ್ಕೆ ಚಿತ್ರಮಂದಿರಕ್ಕೆ ಪಿನಾಕ
"ಇಡೀ ಚಿತ್ರತಂಡ ಅತ್ಯಂತ ಕಷ್ಟಪಟ್ಟು ಹಾಗೂ ಒಗ್ಗಟ್ಟಿನಿಂದ ಈ ಸಿನಿಮಾವನ್ನು ರೂಪಿಸಿದೆ. ಗಣೇಶ್ ಅವರು ಈ ಹಿಂದೆ ಎಂದೂ ಮಾಡಿರದ ವಿಭಿನ್ನ ಹಾಗೂ ವಿಶಿಷ್ಟ ಪಾತ್ರದಲ್ಲಿ ಈ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ. ಅಕ್ಟೋಬರ್ 2 ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು" ಎಂದು ಸಾರಿಕಾ ಕೇಳಿಕೊಂಡಿದ್ದಾರೆ.
ಗಣೇಶ್ "ಪಿನಾಕ" ಸಿನಿಮಾದಲ್ಲಿ ಮಿಂಚಲಿರುವ ಅಮ್ಮ- ಮಗಳ ಜೋಡಿ
ಮಗಳ ಕೈಯಲ್ಲಿ ಎರಡು ಸಿನಿಮಾಗಳು
ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿರುವ ಅಪಾರ ಪ್ರೀತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಾರಿಕಾ, "ನಾವು ಪ್ರಸಿದ್ಧಿ ಪಡೆಯಬೇಕು ಎಂದು ರೀಲ್ಸ್ ಮಾಡಲು ಶುರು ಮಾಡಿರಲಿಲ್ಲ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕಾಲ ಕಳೆಯಲು ಸುಮ್ಮನೆ ಆರಂಭಿಸಿದ ಜರ್ನಿ ಇದು. ಆ ಬಳಿಕ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾದೆವು. ಜನ ನಮಗೆ ಅದ್ಭುತ ಬೆಂಬಲ ನೀಡಿದರು. ಸದ್ಯ ಮೃದಿನಿ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿದ್ದು, ನಮ್ಮ ಈ ಪಯಣ ಇಷ್ಟರಮಟ್ಟಿಗೆ ಬೆಳೆಯುತ್ತದೆ ಎಂದು ನಾನು ಊಹಿಸಿರಲಿಲ್ಲ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.