ಶಿಕ್ಷಣ, ಕೌಶಲ್ಯಾಭಿವೃದ್ಧಿ, ವೈದ್ಯಕೀಯ ನೆರವು ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿಯಂತಹ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 'ಶ್ರೀ ಹಯವದನ ಫೌಂಡೇಶನ್', ಇದೀಗ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲೂ ಅರ್ಥಪೂರ್ಣ ಹೆಜ್ಜೆ ಇಟ್ಟಿದೆ. ಭಾವಸಮೀರ ಶ್ರೀ ವಾದಿರಾಜ ಸ್ವಾಮಿಗಳ ವಿರಚಿತ 9 ಭಕ್ತಿಗೀತೆಗಳನ್ನೊಳಗೊಂಡ "ರಾಜರ ಭಾಗ್ಯವಿದು" ಹಾಗೂ "ದಶಾವತಾರ ಸ್ತುತಿ" ಎಂಬ ಎರಡು ವಿಶೇಷ ವಿಡಿಯೋ ಆಲ್ಬಂ ಮತ್ತು ಅದರ ಮುದ್ರಿತ ಕೃತಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಬೆಂಗಳೂರಿನ ಜಯನಗರದಲ್ಲಿರುವ ಜಯರಾಮ ಸೇವಾ ಮಂಡಳಿಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಈ ಎರಡು ದೃಶ್ಯಸಹಿತ ಧ್ವನಿಸುರುಳಿಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.
ದಿವ್ಯಾ ಗಿರಿಧರ್ ಅವರು ‘ರಾಜರ ಭಾಗ್ಯವಿದು’ ಆಲ್ಬಂನ 9 ಅಪರೂಪದ ಭಕ್ತಿಗೀತೆಗಳಿಗೆ ರಾಗಸಂಯೋಜನೆ ಮಾಡಿದ್ದಾರೆ. ಹಾಗೆಯೇ, ವಾದಿರಾಜರು ತಮ್ಮ ಆರಾಧ್ಯದೈವ ಶ್ರೀ ಹಯಗ್ರೀವ ದೇವರನ್ನು ಆರಾಧಿಸುತ್ತಾ ರಚಿಸಿದ ಪ್ರಸಿದ್ಧ ಸ್ತೋತ್ರವನ್ನು ಒಳಗೊಂಡ ‘ದಶಾವತಾರ ಸ್ತುತಿ’ಯನ್ನು ಕುಮಾರಿ ಬೃಂದಾ ಕಟ್ಟಿ ಹಾಗೂ ಪ್ರಣತಿ ಕಟ್ಟಿ ಅವರು ಗಾಯನ ಮಾಡಿದ್ದಾರೆ.
Viral Video: ಈ ಬಾಲಕನ ಭಕ್ತಿಗೀತೆಗೆ ಕೇಳುಗರು ಫುಲ್ ಫಿದಾ! ಹೃದಯಸ್ಪರ್ಶಿ ವಿಡಿಯೊ ವೈರಲ್
ಶುದ್ಧ ಭಕ್ತಿಯಿಂದ ಮಾತ್ರ ಭಗವಂತನ ಅನುಗ್ರಹ
ಧ್ವನಿಸುರುಳಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು, "ಶುದ್ಧವಾದ ಭಕ್ತಿಯಿಂದ ಮಾತ್ರವೇ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ. ಲಕ್ಷಾಂತರ ಸಂಖ್ಯೆಯಲ್ಲಿರುವ ಹರಿದಾಸರ ಕೀರ್ತನೆಗಳು ವೇದ-ಪುರಾಣಗಳ ಸಾರವನ್ನು ಶ್ರೀಸಾಮಾನ್ಯರಿಗೂ ತಲುಪಿಸುವ ಕೆಲಸ ಮಾಡಿವೆ. ವಾದಿರಾಜರು ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದರು. ಭಕ್ತಿ ಸಮರ್ಪಣೆಗೆ ಭಾಷೆ ತಡೆಯಾಗಬಾರದು ಎಂಬುದು ಅವರ ಉನ್ನತ ಧ್ಯೇಯವಾಗಿತ್ತು" ಎಂದು ಸ್ಮರಿಸಿದರು.
ಮುಂದುವರಿದು ಮಾತನಾಡಿದ ಶ್ರೀಗಳು, "ಪ್ರವೀಣ್ ಕಟ್ಟಿ ಅವರು ತಮ್ಮ 'ಶ್ರೀ ಹಯವದನ ಫೌಂಡೇಶನ್' ಮೂಲಕ ಅತ್ಯಂತ ಅಪರೂಪದ 9 ಕೃತಿಗಳನ್ನು ಒಳಗೊಂಡ ಈ ಧ್ವನಿಸುರುಳಿಯನ್ನು ಹೊರತಂದು ದೊಡ್ಡ ಕಾರ್ಯಕ್ಕೆ ಕೈಹಾಕಿದ್ದಾರೆ. ಸಮಾಜಕ್ಕೆ ಉಪಯುಕ್ತವಾದ ಇಂತಹ ಮತ್ತಷ್ಟು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೃತಿಗಳನ್ನು ಹೊರತರಲು ಸಂಸ್ಥೆಗೆ ಮಠದ ಸಂಪೂರ್ಣ ಬೆಂಬಲ ಮತ್ತು ಆಶೀರ್ವಾದವಿದೆ" ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಪದಾಧಿಕಾರಿಗಳು, ಸಂಗೀತ ಪ್ರೇಮಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.