ಸ್ಯಾಂಡಲ್ವುಡ್ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು, ಟಾಲಿವುಡ್ನಲ್ಲಿ ಮಿಂಚಿ ಇದೀಗ ಕಾಲಿವುಡ್ನಲ್ಲೂ ಸದ್ದು ಮಾಡುತ್ತಿರುವ ಬಹುಭಾಷಾ ನಟಿ ಶ್ರೀಲೀಲಾ ಅವರಿಗೆ ಒಂದು ಬಿಗ್ ಚಾನ್ಸ್ ಸಿಕ್ಕಿದೆ. ʻಸೂಪರ್ ಸ್ಟಾರ್ʼ ರಜನಿಕಾಂತ್ ನಟಿಸುತ್ತಿರುವ 'ಧರ್ಮನ್' ಚಿತ್ರಕ್ಕೆ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಹಾಸನ್ ಅವರ ಒಡೆತನದ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್' ಬುಧವಾರದಂದು (ನ.4) ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ರಜನಿಕಾಂತ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುವ ಅದೃಷ್ಟ ಶ್ರೀಲೀಲಾ ಪಾಲಾಗಿದೆ.
ಶ್ರೀಲೀಲಾಗೆ ಸ್ವಾಗತ ಕೋರಿದ ಚಿತ್ರತಂಡ
ಶ್ರೀಲೀಲಾ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಳ್ಳುತ್ತಾ ನಿರ್ಮಾಣ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ವೀಡಿಯೊವೊಂದನ್ನು ಹಂಚಿಕೊಂಡಿದೆ. "ಆಕೆಯಲ್ಲೊಂದು ಮಿಂಚಿದೆ, ಆಕೆಯಲ್ಲೊಂದು ಪಟಾಕಿಯಂಥ ಕಿಚ್ಚಿದೆ. ಆಕರ್ಷಕ ಶ್ರೀಲೀಲಾ ಅವರನ್ನು 'ಧರ್ಮನ್' ಚಿತ್ರತಂಡಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ.." ಎಂದು ನಿರ್ಮಾಣ ಸಂಸ್ಥೆ ಬರೆದುಕೊಂಡಿದೆ. 'ಓ ಮೈ ಕಡವುಳೆ' ಹಾಗೂ 'ಡ್ರ್ಯಾಗನ್' ಖ್ಯಾತಿಯ ಅಶ್ವತ್ ಮಾರಿಮುತ್ತು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಈ ಚಿತ್ರದಲ್ಲಿ ಸಿಮ್ರನ್, ನಯನತಾರಾ, ಯೋಗಿ ಬಾಬು ಹಾಗೂ ರಾಶಿ ಖನ್ನಾ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣಹಚ್ಚಿದೆ.
ನಯನತಾರಾ ಜೊತೆ ಶ್ರೀಲೀಲಾ ನಟನೆ
ರಜನಿಕಾಂತ್ ಈ ಸಿನಿಮಾದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಬಿಡುಗಡೆಯಾಗಿರುವ ಪೋಸ್ಟರ್ಗಳಲ್ಲಿ ರಜನಿಕಾಂತ್ ಕೈಗಳಲ್ಲಿ ರಕ್ತ ಅಂಟಿಕೊಂಡಿರುವುದು ಕಾಣಿಸಿದೆ. ಈ ಪಾತ್ರಕ್ಕೆ ನೆಗೆಟಿವ್ ಶೇಡ್ ಇರಬೋದಾ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇದೆ. ಇತ್ತೀಚೆಗಷ್ಟೇ ನಯನತಾರಾ ಈ ಸಿನಿಮಾವನ್ನು ಸೇರಿಕೊಂಡಿದ್ದಾರೆ. ಸದ್ಯ ನಯನತಾರಾ ಜೊತೆಗಿನ ಸೀನ್ಗಳ ಚಿತ್ರೀಕರಣದಲ್ಲಿ ಶ್ರೀಲೀಲಾ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಅಜಿತ್ ಕುಮಾರ್ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ
ತಮಿಳು ಚಿತ್ರರಂಗದಲ್ಲಿ ಶ್ರೀಲೀಲಾ ಅವರಿಗೆ ಇದು ಭರ್ಜರಿ ಆರಂಭವಾಗಿದೆ. ಈ ವರ್ಷದ ಆರಂಭದಲ್ಲಿ ಶಿವಾಕಾರ್ತಿಕೇಯನ್, ರವಿ ಮೋಹನ್ ಮತ್ತು ಅಥರ್ವ ಅವರೊಂದಿಗೆ ನಟಿಸಿದ್ದ 'ಪರಾಶಕ್ತಿ' ಚಿತ್ರದ ಮೂಲಕ ಕಾಲಿವುಡ್ಗೆ ಪಾದಾರ್ಪಣೆ ಮಾಡಿದ್ದ ಅವರು, ಸಾಲು ಸಾಲು ಬಿಗ್ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಧನುಷ್ ಮತ್ತು ಮಮ್ಮುಟ್ಟಿ ನಟನೆಯ 'ಓಂ' ಚಿತ್ರದಲ್ಲಿ ಧನುಷ್ ಪತ್ನಿ ರೋಜಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಅಜಿತ್ ಕುಮಾರ್ ಅವರ 'ಡೇರ್ಡೆವಿಲ್' ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ 'ಧರ್ಮನ್' ಮೂಲಕ ಮತ್ತೊಂದು ದೊಡ್ಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಧರ್ಮನ್ ಟೀಮ್ ಹಂಚಿಕೊಂಡ ಪೋಸ್ಟ್
ʻಧರ್ಮನ್ʼ ಯಾವಾಗ ರಿಲೀಸ್?
ರಜನಿಕಾಂತ್ ನಟನೆಯ ಈ ಸಿನಿಮಾವನ್ನು ಕಮಲ್ ಹಾಸನ್ ಅವರ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್' ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಜೊತೆಗೆ ಟರ್ಮರಿಕ್ ಮೀಡಿಯಾದ ಆರ್. ಮಹೇಂದ್ರನ್ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸಲಿದ್ದು, 2027ರ ಏಪ್ರಿಲ್ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.