ಬೆಂಗಳೂರು, ಡಿ. 17: ಚಾರ್ಮಿಂಗ್ ನಟಿ ಶ್ರೀಲೀಲಾ (Actress Sreeleela) ಇದೀಗ ಎಐ ತಂತ್ರಜ್ಞಾನದ (AI Technology) ದುರ್ಬಳಕೆ ಮತ್ತು ಡೀpffಫೇಕ್ ವಿಡಿಯೊ ಕಂಟೆಂಟ್ ಬಗ್ಗೆ ಧ್ವನಿ ಎತ್ತಿದ್ದಾರೆ.ಈ ತಂತ್ರಜ್ಞಾನಗಳು ಕ್ಷಿಪ್ರವಾಗಿ ಬೆಳೆಯುತ್ತಿರುವ ಕಾಲ ಘಟ್ಟದಲ್ಲಿ ಒಂದಷ್ಟು ಡಿಜಿಟಲ್ ಜವಾಬ್ದಾರಿಯನ್ನು ನಾವೆಲ್ಲರೂ ಹೊಂದುವುದು ಅಗತ್ಯವೆಂದು ಅಭಿಪ್ರಾಯ ಪಟ್ಟಿದ್ದಾರೆ. ತನ್ನ ಅಭಿಮಾನಿಗಳ ಮೂಲಕವೇ ಈ ಬದಲಾವಣೆ ಪ್ರಾರಂಭವಾಗಲಿ ಎಂದು ಹೇಳುವ ಮೂಲಕ ನಟಿ ಶ್ರೀಲೀಲಾ ಈ ಕಾಲಕ್ಕೆ ಅಗತ್ಯವಾಗಿದ್ದ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.
ಈ ಕುರಿತಾಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಾಕಿರುವ ನಟಿ ಶ್ರೀಲೀಲಾ ಹೀಗೆಂದು ಬರೆದುಕೊಂಡಿದ್ದಾರೆ. ʼʼಸಾಮಾಜಿಕ ಜಾಲತಾಣಗಳನ್ನು ಬಳಸುವ ಎಲ್ಲರಲ್ಲೂ ನಾನು ಕೈಮುಗಿದು ಪ್ರಾರ್ಥಿಸುವುದೇನೆಂದರೆ ದಯವಿಟ್ಟು ನೀವ್ಯಾರೂ ಎಐ ಪ್ರೇರಿತ ಅಸಭ್ಯಗಳನ್ನು ಎಂದಿಗೂ ಶೇರ್ ಮಾಡಬೇಡಿ. ತಂತ್ರಜ್ಞಾನವನ್ನು ಬಳಸುವುದು ಮತ್ತು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿ ಆಗುವ ಸುಧಾರಣೆಗಳು ನಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸಲು ಇರುವುದೇ ಹೊರತು ಇನ್ನಷ್ಟು ಸಂಕೀರ್ಣಗೊಳಿಸಲು ಅಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯ. ಇಲ್ಲಿ ಕೆಟ್ಟದಾಗಿ ಬಿಂಬಿಸಲ್ಪಡುವ ಪ್ರತಿಯೊಬ್ಬ ಹುಡುಗಿಯೂ, ಒಬ್ಬಾಕೆ ಮಗಳು, ತಂಗಿ, ಮೊಮ್ಮಗಳು, ಗೆಳತಿ ಅಥವಾ ಸಹೋದ್ಯೋಗಿಯಾಗಿರುತ್ತಾಳೆ ಎಂಬುದನ್ನು ನೆನಪಿಡಿʼʼ ಎಂದಿದ್ದಾರೆ.
ಶ್ರೀಲೀಲಾ ಅವರ ಇನ್‌ಸ್ಟಾಗ್ರಾಂ ಪೋಸ್ಟ್:
ʼʼನಾವು ಸಂರಕ್ಷಿತ ವಲಯದಲ್ಲಿದ್ದೇವೆ ಎಂಬ ಭರವಸೆಯೊಂದಿಗೆ ನಮ್ಮ ಸುತ್ತ ಸಂತೋಷವನ್ನು ಹರಡುವ ಉದ್ಯಮವೊಂದರ ಪಾಲುದಾರರು ನಾವೆಂಬುದನ್ನು ಮರೆಯಬಾರದು. ನನ್ನ ನಿಬಿಡ ಕಾರ್ಯದೊತ್ತಡದ ನಡುವೆ ದಿನನಿತ್ಯ ಆಗುವ ಘಟನೆಗಳ ಬಗ್ಗೆ ಕೆಲವೊಮ್ಮೆ ನನಗೆ ತಿಳಿಯುವುದಿಲ್ಲ. ಆದರೆ ಅವನ್ನೆಲ್ಲ ನನ್ನ ಗಮನಕ್ಕೆ ತರುವ ನನ್ನ ಹಿತೈಷಿಗಳಿಗೆ ಥ್ಯಾಂಕ್ಸ್ ಹೇಳುತ್ತೇನೆ. ನಾನು ಎಲ್ಲ ವಿಷಯಗಳನ್ನು ಉಪ್ಪಿನಂತೆ ಸ್ವಲ್ಪವೇ ಸ್ವೀಕರಿಸುತ್ತೇನೆ ಮತ್ತು ನಾನು ನನ್ನದೇ ಪ್ರಪಂಚದಲ್ಲಿ ವಾಸಿಸುತ್ತಿದ್ದೇನೆ. ಆದರೆ ಈ ವಿಚಾರಗಳು ತೀವ್ರ ಕಳವಳಕಾರಿ ಮತ್ತು ಕಿರಿಕಿರಿʼʼ ಎಂದು ಹೇಳಿದ್ದಾರೆ.
ಡೇಟಿಂಗ್ ರೂಮರ್ಸ್ ನಡುವೆಯೇ ಕಾರ್ತಿಕ್ ಆರ್ಯನ್ ಮನೆಯಲ್ಲಿ ಕಾಣಿಸಿಕೊಂಡ ನಟಿ ಶ್ರೀಲೀಲಾ
ಮುಂದುವರಿದು, ʼʼನನ್ನ ಸಹೋದ್ಯೋಗಿಗಳೂ ಕೆಲವೊಮ್ಮೆ ಇಂತಹ ತೊಂದರೆಗಳಿಗೆ ಸಿಲುಕಿಕೊಳ್ಳುತ್ತಿರುವುದನ್ನು ನಾನು ನೋಡಿದ್ದೇನೆ. ಹಾಗಾಗಿ ನಾನು ಅವರೆಲ್ಲರ ಪರವಾಗಿ ನಿಮ್ಮಲ್ಲಿ ಈ ರೀತಿಯಾಗಿ ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇನೆ. ನನ್ನ ಅಭಿಮಾನಿಗಳಲ್ಲಿ ನಂಬಿಕೆಯನ್ನಿರಿಸಿಕೊಂಡವಳಾಗಿ ನಾನು ನೀವೆಲ್ಲರೂ ನಮ್ಮ ಜತೆ ನಿಲ್ಲಬೇಕೆಂದು ಬಯಸುತ್ತಿದ್ದೇನೆ. ಈ ವಿಚಾರದಲ್ಲಿ ಕಾನೂನು ತನ್ನದೇ ಆದ ಕ್ರಮಗಳನ್ನು ಕೈಗೊಳ್ಳುತ್ತದೆ’ʼ ಎಂದು ಅವರು ಸುದೀರ್ಘ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಬೆಂಗಳೂರು ಬೆಡಗಿ ಶ್ರೀಲೀಲಾ ಈಗಾಗಲೇ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅನುರಾಗ್ ಬಸು-ಕಾರ್ತಿಕ್ ಆರ್ಯನ್ ಕಾಂಬಿನೇಷನ್‌ನ ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಇದಲ್ಲದೆ ದಕ್ಷಿಣ ಭಾರತದ ʼಲೆನಿನ್ʼ, ʼಪರಾಶಕ್ತಿʼ, ʼಉಸ್ತಾದ್ ಭಗತ್ ಸಿಂಗ್ʼ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.