ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srinagar Kitty: ʻವೇಷಗಳುʼ ಸಿನಿಮಾಕ್ಕಾಗಿ ಜೊತೆಯಾದ ʻನಮ್ಮನೆ ಯುವರಾಣಿʼ ಅಂಕಿತಾ ಅಮರ್‌ - ಭರತ್‌ ಬೋಪಣ್ಣ

Veshagalu Kannada Movie: ʻನಮ್ಮನೆ ಯುವರಾಣಿʼ ಖ್ಯಾತಿಯ ನಟಿ ಅಂಕಿತಾ ಅಮರ್‌ ಅವರು ʻವೇಷಗಳುʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ʻಬ್ರಹ್ಮಗಂಟುʼ ಖ್ಯಾತಿಯ ಭರತ್‌ ಬೋಪಣ್ಣ ನಾಯಕರಾಗಿದ್ದಾರೆ. ನಟ ಶ್ರೀನಗರ ಕಿಟ್ಟಿ ಅವರಿಲ್ಲಿ ಪ್ರಮುಖವಾದ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.

ನಟ ಶ್ರೀನಗರ ಕಿಟ್ಟಿ ಅವರು ಬಸಪ್ಪ ಮತ್ತು ಬಸಮ್ಮ ಜೋಗತಿಯಾಗಿ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ʻವೇಷಗಳುʼಸಿನಿಮಾದಲ್ಲಿ ಈಗ ಹೀರೋ ಮತ್ತು ಹೀರೋಯಿನ್‌ ಆಯ್ಕೆಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈಚೆಗೆ ಭರವಸೆ ಮೂಡಿಸಿರುವ ʻನಮ್ಮನೆ ಯುವರಾಣಿʼ ಸೀರಿಯಲ್‌ ಖ್ಯಾತಿಯ ನಟಿ ಅಂಕಿತಾ ಅಮರ್‌ ಅವರು ಈ ಚಿತ್ರದಲ್ಲಿ ನಾಯಕಿಯಾಗಿದ್ದು, ʻಬ್ರಹ್ಮಗಂಟುʼ ಖ್ಯಾತಿಯ ಭರತ್‌ ಬೋಪಣ್ಣ ಅವರು ಈ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಈಚೆಗೆ ಈ ಚಿತ್ರದ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.

ಅಂಕಿತಾ ಅಮರ್‌ ಏನಂದ್ರು?

"ನಮ್ಮ ದೈನಂದಿನ ಜೀವನದಲ್ಲಿ ನಾವೆಲ್ಲಾ ಒಂದೊಂದು ವೇಷ ಹಾಕಿಕೊಂಡೇ ಓಡಾಡುತ್ತೇವೆ. ಒಳಗಿರುವ ಕಾಣದ ವೇಷಗಳನ್ನು ತೋರಿಸುವ ಪ್ರಯತ್ನ ಮಾಡ್ತಿದ್ದೇವೆ. ನನ್ನದು ಅಲಮೇಲು ಪಾತ್ರ, ಆಕೆಯ ಆಸೆ, ಕನಸುಗಳು ಏನು ಎಂದು ಈ ಪಾತ್ರ ಬಿಂಬಿಸುತ್ತದೆ" ಎನ್ನುತ್ತಾರೆ ನಟಿ ಅಂಕಿತಾ ಅಮರ್. "ಚಿನ್ನಲ್ಲ" ಎಂಬ ಮುಗ್ಧ ಹುಡುಗನ ಪಾತ್ರ ಮಾಡುತ್ತಿದ್ದಾರೆ ನಾಯಕ ಭರತ್ ಬೋಪಣ್ಣ. ಈ ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ಒಟ್ಟು 12 ಹಾಡುಗಳು ಚಿತ್ರದಲ್ಲಿ ಇರಲಿವೆಯಂತೆ. ಈಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ಬೃಹತ್ ಡ್ರಾಮಾ ಸ್ಟೇಜ್ ಸೆಟ್‌ನಲ್ಲಿ ಶಾಕುಂತಲಾ ದುಷ್ಯಂತ ಮಹಾರಾಜನ ನಾಟಕದ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ಗೌಳಿಯಲ್ಲಿ ರಗಡ್‌ ಲುಕ್‌ ತಾಳಿದ ಶ್ರೀನಗರ ಕಿಟ್ಟಿ

ನಿರ್ದೇಶಕರು ಹೇಳಿದ್ದೇನು?

ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಈ ಚಿತ್ರಕ್ಕೆ ಚಿತ್ರಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆಯನ್ನು ಸೌಜನ್ಯ ಬರೆಯುತ್ತಿದ್ದು, ಮನೋಹರ ಜೋಷಿ ಛಾಯಾಗ್ರಹಣ ಮಾಡುತ್ತಿದ್ದಾರೆ. "ನಾನು ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ದುಡಿದಿದ್ದೇನೆ. ವೇಷಗಳು ಕಥೆ ಓದಿದಾಗ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎನಿಸಿತು. ಭಾವನಾ ಬೆಳಗೆರೆ ಅವರಿಗೆ ಕೇಳಿದಾಗ ಅವರೂ ಒಪ್ಪಿದರು. ಬಹುತೇಕ ರಂಗಸಜ್ಜಿಕೆಯೊಳಗೇ ನಡೆಯುವ, ನಾಟಕದ ಹಿನ್ನೆಲೆಯಲ್ಲಿ ಸಾಗುವ ಪ್ರೇಮಕಥೆಯಿದು. ಮಾಲೂರು ವಿಜಯ್ ಅವರು ಅದ್ಭುತವಾದ ಡ್ರಾಮಾ ಸೆಟ್ ಗಳನ್ನು ಹಾಕಿಕೊಟ್ಟಿದ್ದಾರೆ. ಕವಿರಾಜ್, ನಾಗೇಂದ್ರ ಪ್ರಸಾದ್, ಕಲ್ಯಾಣ್, ವಿ. ಮನೋಹರ್ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರದಲ್ಲಿ 40 ರಿಂದ 50 ಭಾಗ ನಾಟಕದ ಎಪಿಸೋಡ್ ಬರುತ್ತದೆ. ಈ ಕಥೆ ಬಳ್ಳಾರಿಯಿಂದ ಶುರುವಾಗಿ ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು ಅಲ್ಲದೆ ಮಧ್ಯಪ್ರದೇಶದ ಮಹೇಶ್ವರದವರೆಗೂ ಸಾಗುತ್ತದೆ" ಎನ್ನುತ್ತಾರೆ ನಿರ್ದೇಶಕ ಕಿಶನ್‌ ರಾವ್.

"ಇದೊಂದು ಸಣ್ಣ ಕಥೆ. ಇದನ್ನು ಕಿಶನ್ ಸಿನಿಮಾ ಮಾಡ್ತೀನಿ ಎಂದಾಗ ನನ್ನ ಹೆಂಡ್ತಿ ಭಾವನಾ ಒಪ್ಪಿದಳು. ರಂಗಭೂಮಿಯ ಒಳಹರಿವುಗಳು ಹೇಗಿರುತ್ತೆ? ಅಲೆಮಾರಿ ತಂಡಗಳು ಯಾವರೀತಿ ಇರುತ್ತವೆ? ಇದನ್ನೆಲ್ಲ ನಮ್ಮ ಚಿತ್ರದಲ್ಲಿ ಹೇಳುತ್ತಿದ್ದೇವೆ. 2000ನೇ ಇಸವಿಯಲ್ಲಿ ರಂಗಭೂಮಿ ನಡುವೆ ಒಂದು ಪ್ರೇಮಕಥೆ ಇಲ್ಲಿ ಸಾಗುತ್ತದೆ. ನಟಿ ಅಂಕಿತಾ ಉತ್ತಮ ನಟಿ. ಹಾಗೇ ನಾನು ಇಲ್ಲಿ ಬಸಪ್ಪ, ಮತ್ತು ಬಸಮ್ಮ ಹೀಗೆ ಎರಡು ಶೇಡ್ ಗಳಲ್ಲಿ ನಟಿಸುತ್ತಿದ್ದೇನೆ. ಇದೊಂದು ಹೊಸ ಪ್ರಯತ್ನ" ಎನ್ನುತ್ತಾರೆ ನಟ ಶ್ರೀನಗರ ಕಿಟ್ಟಿ. ಶರತ್ ಲೋಹಿತಾಶ್ವ, ತಬಲಾ ನಾಣಿ ಮುಂತಾದವರು ನಟಿಸುತ್ತಿದ್ದಾರೆ.