ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಹುಪರಾಕ್‌ʼ ನಂತರ ʻಅಮರ್ಥʼ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ನಟಿಸಿದ ಮೇಘನಾ ರಾಜ್‌ ಸರ್ಜಾ - ಶ್ರೀನಗರ ಕಿಟ್ಟಿ

Amartha Movie Trailer: ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ ನಟನೆಯ ‘ಅಮರ್ಥ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಸಾರಥ್ಯದ ಪಂಚರಂಗಿ ಫಿಲಂಸ್ ನಿರ್ಮಿಸಿರುವ ಈ ಕೌಟುಂಬಿಕ ಚಿತ್ರವು ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ.

ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ‘ಬಹುಪರಾಕ್’ ಸಿನಿಮಾದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಜನಪ್ರಿಯ ಜೋಡಿ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ, ಇದೀಗ ‘ಅಮರ್ಥ’ ಚಿತ್ರಕ್ಕಾಗಿ ಮತ್ತೊಮ್ಮೆ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಪಂಚರಂಗಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.

ಖ್ಯಾತ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾರ್ಲಿಂಗ್’ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ಶಿವಧ್ವಜ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕೌಟುಂಬಿಕ ಕಥಾಹಂದರ ಹೊಂದಿರುವ ‘ಅಮರ್ಥ’

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ಮಾಪಕ ಡಾ. ಕನ್ಯಾನ ಸದಾಶಿವ ಶೆಟ್ಟಿ, "ನನ್ನ ಆತ್ಮೀಯ ಸ್ನೇಹಿತರಾದ ಪ್ರಕಾಶ್ ಶೆಟ್ಟಿ ಹಾಗೂ ಡಾರ್ಲಿಂಗ್ ಕೃಷ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿರುವುದು ಸಂತಸ ತಂದಿದೆ. ಕುಟುಂಬ ಸಮೇತ ಕುಳಿತು ಆನಂದಿಸಬಹುದಾದ ಅತ್ಯುತ್ತಮ ಕೌಟುಂಬಿಕ ಕಥಾಹಂದರ ಹೊಂದಿರುವ ‘ಅಮರ್ಥ’ ಸಿನಿಮಾ ಇದೇ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು" ಎಂದು ಮನವಿ ಮಾಡಿದರು.

ʻಯಶ್, ಕೆಲಸದ ಬಗ್ಗೆ ಅಪಾರ ಕಮಿಟ್‌ಮೆಂಟ್ ಇರುವ ನಟ’: ‘ರಾಮಾಯಣ’ ಟ್ರೇಲರ್ ನೋಡಿ ರಾಧಿಕಾ ಪಂಡಿತ್‌ಗೆ ಮೇಘನಾ ರಾಜ್ ಹೇಳಿದ್ದೇನು?

ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಗುರು ಹೆಗ್ಡೆ ಅವರು ಈ ಚಿತ್ರದ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಮಾತನಾಡಿದ ಅವರು, "ನಿರ್ಮಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಅವರ ಬೆಂಬಲ ಅಪಾರವಾಗಿದೆ. ವಿನಯ್ ಪ್ರೀತಮ್ ಜೊತೆಗೂಡಿ ಅತ್ಯುತ್ತಮ ಗುಣಮಟ್ಟದ ಕಥೆಯನ್ನು ಕಟ್ಟಿಕೊಟ್ಟಿದ್ದೇವೆ. ಜನರ ಬಾಯಿಂದ ಚಿತ್ರ ಚೆನ್ನಾಗಿದೆ ಎಂಬ ಮಾತು ಬಂದು, ಅವರು ಇನ್ನೊಬ್ಬರಿಗೆ ಸಿನಿಮಾ ನೋಡಲು ಶಿಫಾರಸು ಮಾಡಿದಾಗ ಮಾತ್ರ ನಮ್ಮ ಶ್ರಮ ಸಾರ್ಥಕವಾಗುತ್ತದೆ. ನಿಮ್ಮೆಲ್ಲರ ಪ್ರೀತಿ-ಸಹಕಾರದಿಂದ ಈ ಚಿತ್ರವನ್ನು ಸಮರ್ಥವಾಗಿಸಿ" ಎಂದು ಕೋರಿದರು. ಜೊತೆಗೆ ಮತ್ತೊಬ್ಬ ನಿರ್ದೇಶಕ ವಿನಯ್ ಪ್ರೀತಮ್ ಚಿತ್ರದ ನಿರ್ಮಾಣಕ್ಕೆ ಸಹಕರಿಸಿದ ಇಡೀ ತಂಡಕ್ಕೆ ಧನ್ಯವಾದ ಸಮರ್ಪಿಸಿದರು.

28ಕ್ಕೂ ಹೆಚ್ಚು ಅನುಭವಿ ಕಲಾವಿದರು ಅಭಿನಯಿಸಿದ್ದಾರೆ

ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ, "ಅಮರ್ಥ ಪ್ರತಿಯೊಬ್ಬರೂ ಕುಟುಂಬ ಸಮೇತ ನೋಡಲೇಬೇಕಾದ ಸಿನಿಮಾ. ಈ ಚಿತ್ರವನ್ನು ನೋಡುವಾಗ ಪ್ರತಿಯೊಬ್ಬರಿಗೂ ತಮ್ಮ ಎಸ್‌ಎಸ್‌ಎಲ್‌ಸಿ ಶಾಲಾ ದಿನಗಳ ಮಧುರ ನೆನಪುಗಳು ಮರುಕಳಿಸಲಿವೆ. ನಾನು ಮತ್ತು ಮೇಘನಾ ರಾಜ್ ಒಟ್ಟಾಗಿ ನಟಿಸುತ್ತಿರುವ ಮೂರನೇ ಚಿತ್ರವಿದು. ಸಿನಿಮಾದಲ್ಲಿ ಬರೋಬ್ಬರಿ 28ಕ್ಕೂ ಹೆಚ್ಚು ಅನುಭವಿ ಕಲಾವಿದರು ಅಭಿನಯಿಸಿದ್ದಾರೆ. ಸೆಪ್ಟೆಂಬರ್ 18ರ ಬಿಡುಗಡೆಗೂ ಮುನ್ನ ಚಿತ್ರತಂಡವು ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ನಗರಗಳಿಗೆ ಭೇಟಿ ನೀಡಿ ಪ್ರಚಾರ ಹಾಗೂ ಪತ್ರಿಕಾಗೋಷ್ಠಿ ನಡೆಸಲಿದೆ" ಎಂದು ತಿಳಿಸಿದರು.

ಚಿತ್ರದ ನಾಯಕಿ ಮೇಘನಾ ರಾಜ್ ಸರ್ಜಾ ಮಾತನಾಡಿ, "ಅಮರ್ಥ ಚಿತ್ರತಂಡಕ್ಕೆ ಸೇರಿದ ಮೊದಲ ಕಲಾವಿದೆ ನಾನೇ. ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿಬರಲು ನಿರ್ದೇಶಕ ಗುರು ಹೆಗ್ಡೆ ಅವರ ಕಲ್ಪನೆ ಹಾಗೂ ಪರಿಶ್ರಮವೇ ಪ್ರಮುಖ ಕಾರಣ. ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯುಳ್ಳ ಅನೇಕ ಪ್ರತಿಭಾವಂತ ಕಲಾವಿದರು ನಟಿಸಿದ್ದು, ಅವರೊಂದಿಗೆ ತೆರೆಹಂಚಿಕೊಂಡಿದ್ದು ಅತ್ಯಂತ ಖುಷಿ ನೀಡಿದೆ" ಎಂದು ತಮ್ಮ ಅನುಭವ ಹಂಚಿಕೊಂಡರು. ಒಟ್ಟಾರೆಯಾಗಿ ಭರವಸೆ ಮೂಡಿಸಿರುವ ‘ಅಮರ್ಥ’ ಇದೇ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.