ಎಸ್.ಎಸ್. ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಗ್ಲೋಬಲ್ ಅಡ್ವೆಂಚರ್ ಸಿನಿಮಾ ‘ವಾರಣಾಸಿ’ ಬಿಡುಗಡೆ ದಿನಾಂಕದ ಕುರಿತು ಟಾಲಿವುಡ್ ಅಂಗಳದಲ್ಲಿ ಹೊಸ ಚರ್ಚೆಯೊಂದು ಶುರುವಾಗಿದೆ. ಈ ಹಿಂದೆ ಘೋಷಿಸಿದ ವೇಳಾಪಟ್ಟಿಯಂತೆ 2027ರ ಏಪ್ರಿಲ್ 7ರಂದು ಯುಗಾದಿ ಹಬ್ಬದ ಉಡುಗೊರೆಯಾಗಿ ತೆರೆಗೆ ಬರಬೇಕಿದ್ದ ಈ ಚಿತ್ರವು ಇದೀಗ ಸದ್ದಿಲ್ಲದೇ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಪೋಸ್ಟ್ ಪ್ರೊಡಕ್ಷನ್ ಮತ್ತು ಗ್ರಾಫಿಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಿರುವ ಕಾರಣ, ಚಿತ್ರತಂಡವು ಸಿನಿಮಾವನ್ನು 2027ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಬಿಗ್ ಬಜೆಟ್ ಸಿನಿಮಾ ʻವಾರಣಾಸಿʼ
ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ಬ್ಯಾನರ್ಗಳ ಅಡಿಯಲ್ಲಿ ಕೆ.ಎಲ್. ನಾರಾಯಣ ಹಾಗೂ ಎಸ್.ಎಸ್. ಕಾರ್ತಿಕೇಯ ಸುಮಾರು 1400 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, 1.43:1 IMAX ಫಾರ್ಮ್ಯಾಟ್ನಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಸಿನಿಮಾ ಎಂಬ ಐತಿಹಾಸಿಕ ದಾಖಲೆಗೂ ‘ವಾರಣಾಸಿ’ ಪಾತ್ರವಾಗಿದೆ.
ಕಥಾಹಂದರದ ವಿಷಯಕ್ಕೆ ಬಂದರೆ, ಚಿತ್ರದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರ ಮಾಡುತ್ತಿದ್ದಾರೆ. ವಾರಣಾಸಿ ನಗರದತ್ತ ಧಾವಿಸಿ ಬರುತ್ತಿರುವ ಬೃಹತ್ ಉಲ್ಕೆಯ ಅಪಾಯವನ್ನು ತಪ್ಪಿಸಲು ರುದ್ರ ಕೈಗೊಳ್ಳುವ ರೋಮಾಂಚಕಾರಿ ಸಾಹಸಮಯ ಪಯಣವೇ ಈ ಸಿನಿಮಾದ ಮುಖ್ಯ ತಿರುಳಾಗಿದೆಯಂತೆ!
25 ನಿಮಿಷದ 'ರಾಮಾಯಣ' ಎಪಿಸೋಡ್
ಕೇವಲ ವರ್ತಮಾನಕ್ಕೆ ಮಾತ್ರ ಸೀಮಿತವಾಗದೆ ವಿವಿಧ ಕಾಲಘಟ್ಟಗಳ ನಡುವೆ ಸಾಗುವ ಈ ಚಿತ್ರದಲ್ಲಿ, ಸುಮಾರು 25 ನಿಮಿಷಗಳ ಕಾಲ ಬರುವ 'ರಾಮಾಯಣ' ಸ್ಫೂರ್ತಿಯ ವಿಶೇಷ ಎಪಿಸೋಡ್ ಪ್ರಮುಖ ಆಕರ್ಷಣೆಯಾಗಲಿದೆ. ಈ ಭಾಗದಲ್ಲಿ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕಣ್ಮನ ಸೆಳೆಯಲಿದ್ದಾರೆ.
ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಮಿಂಚುತ್ತಿದ್ದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ‘ಕುಂಭ’ ಎಂಬ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೈದರಾಬಾದ್ ಸೇರಿದಂತೆ ಒಡಿಶಾ, ಕೀನ್ಯಾ, ಜಾರ್ಜಿಯಾ ಮುಂತಾದ ದೇಶಗಳ ಸುಂದರ ಹಾಗೂ ದುರ್ಗಮ ತಾಣಗಳಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
Varanasi Movie: ತಂದೆ-ಮಗನ ಬಾಂಧವ್ಯದ ಕಥೆ; ‘ವಾರಣಾಸಿ’ ಬಗ್ಗೆ ರಾಜಮೌಳಿ ಮಾತು
ದುಬಾರಿ ಮೊತ್ತಕ್ಕೆ ಹಕ್ಕುಗಳು ಸೇಲ್
ಬಿಡುಗಡೆಗೂ ಮುನ್ನವೇ ‘ವಾರಣಾಸಿ’ ಸಿನಿಮಾ ಬಾಕ್ಸ್ ಆಫೀಸ್ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ತೆಲುಗು ರಾಜ್ಯಗಳ ಥಿಯೇಟ್ರಿಕಲ್ ಹಕ್ಕುಗಳನ್ನು ಮೈತ್ರಿ ಮೂವಿ ಮೇಕರ್ಸ್ ದಾಖಲೆಯ 290 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿದ್ದರೆ, ಪ್ರಮುಖ ಒಟಿಟಿ ಸಂಸ್ಥೆ ನೆಟ್ಫ್ಲಿಕ್ಸ್ ಬರೋಬ್ಬರಿ 500 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ನೀಡಿ ಡಿಜಿಟಲ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ ಎಂಬ ಮಾಹಿತಿ ಇದೆ. ಇಷ್ಟೊಂದು ದೊಡ್ಡ ಮಟ್ಟದ ವ್ಯಾಪಾರ ಮತ್ತು ನಿರೀಕ್ಷೆ ಇರುವುದರಿಂದ, ವಿಷುವಲ್ ಎಫೆಕ್ಟ್ಸ್ ಗುಣಮಟ್ಟದ ವಿಷಯದಲ್ಲಿ ಎಳ್ಳಷ್ಟೂ ರಾಜಿಯಾಗದ ರಾಜಮೌಳಿ ಇನ್ನಷ್ಟು ಸಮಯ ತೆಗೆದುಕೊಳ್ಳಲು ಬಯಸಿದ್ದಾರೆ.
ಮಹೇಶ್ ಹುಟ್ಟುಹಬ್ಬದ ಗಿಫ್ಟ್
ಮತ್ತೊಂದೆಡೆ, ಈ ಸಿನಿಮಾವನ್ನು ಆಗಸ್ಟ್ ತಿಂಗಳಿಗೆ ಮುಂದೂಡುವುದರ ಹಿಂದೆ ನಿರ್ಮಾಪಕರ ದೊಡ್ಡ ವ್ಯಾಪಾರ ತಂತ್ರವೂ ಅಡಗಿದೆ. ಆಗಸ್ಟ್ 9ರಂದು ಮಹೇಶ್ ಬಾಬು ಅವರ ಹುಟ್ಟುಹಬ್ಬವಿದ್ದು, ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಸಾಲು ಸಾಲು ರಜೆಗಳು ಒಟ್ಟಿಗೆ ಸಿಗುವುದರಿಂದ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಚಿತ್ರತಂಡದ್ದಾಗಿದೆ.
ಏಪ್ರಿಲ್ನಲ್ಲಿ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕೊಂಚ ನಿರಾಸೆ ತಂದರೂ, ತೆರೆಯ ಮೇಲೆ ಅದ್ಧೂರಿ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ಮತ್ತಷ್ಟು ಸಮಯ ಕಾಯುವುದು ಅನಿವಾರ್ಯವಾಗಿದೆ. ಈ ಕುರಿತು ಚಿತ್ರತಂಡದಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.