ಮಹೇಶ್ ಬಾಬು ಮತ್ತು ಎಸ್ ಎಸ್ ರಾಜಮೌಳಿ ಕಾಂಬಿನೇಷನ್‌ನ ಬಿಗ್ ಬಜೆಟ್ ಪ್ಯಾನ್ ವರ್ಲ್ಡ್ ಸಿನಿಮಾ ʻವಾರಣಾಸಿʼಗೆ ಬಿರುಸಿನ ಶೂಟಿಂಗ್ ನಡೆಯುತ್ತಿದೆ. ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. 2027ರ ಏಪ್ರಿಲ್‌ನಲ್ಲಿ ʻವಾರಣಾಸಿʼ ಸಿನಿಮಾವನ್ನು ತೆರೆಗೆ ತರುವುದಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಚಿತ್ರತಂಡಕ್ಕೆ ಒಂದು ಶಾಕಿಂಗ್ ಸುದ್ದಿ ಎದುರಾಗಿದೆ.
ಲೀಕ್ ಆಯ್ತು ವಾರಣಾಸಿ ಸಿನಿಮಾ ಕಥೆ!
'ವಾರಣಾಸಿ' ಸಿನಿಮಾ ಬಿಡುಗಡೆಗೆ ಸರಿಯಾಗಿ ಒಂದು ವರ್ಷ ಬಾಕಿ ಇರುವಂತೆಯೇ, ಸಿನಿಮಾ ವಲಯದಲ್ಲಿ ಕುತೂಹಲ ಗರಿಗೆದರಿದೆ. ಈ ನಡುವೆ, ಈ ಬೃಹತ್ ಬಜೆಟ್ ಚಿತ್ರದ ಕಥೆಯು ಸೋರಿಕೆಯಾಗಿದೆ. ಅದಕ್ಕೆ ಕಾರಣವಾಗಿರುವುದು, ಈ ಸಿನಿಮಾದ ವಿಎಫ್‌ಎಕ್ಸ್ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಯ ವೆಬ್‌ಸೈಟ್! ಕಥೆಯ ವಿವರಗಳನ್ನು ಬಹಳ ಗೌಪ್ಯವಾಗಿ ಇಡಲಾಗಿದ್ದರೂ ಈ ರೀತಿ ಸೋರಿಕೆ ಆಗಿರುವುದು ಚಿತ್ರತಂಡಕ್ಕೆ ಶಾಕ್ ನೀಡಿದೆ.
Mahesh Babu: ʻವಾರಣಾಸಿʼ ಸಿನಿಮಾದಲ್ಲಿ ಶಿವಭಕ್ತನಾದ ಪ್ರಕಾಶ್ ರಾಜ್; ಪಾತ್ರದ ಗುಟ್ಟು ರಟ್ಟಾಗಿ ಹೋಯ್ತಾ?
ವಾರಣಾಸಿ ಸಿನಿಮಾಗೆ 'ಸಿನೆಸೈಟ್' (Cinesite) ಎಂಬ ವಿಎಫ್‌ಎಕ್ಸ್ ಸಂಸ್ಥೆ ಕೆಲಸ ಮಾಡುತ್ತಿದೆ. ಇದೀಗ ಅದರ ವೆಬ್‌ಸೈಟ್‌ನಲ್ಲಿ ವಾರಣಾಸಿ ಸಿನಿಮಾದ ಸಾರಾಂಶವನ್ನು ಪಬ್ಲಿಷ್ ಮಾಡಲಾಗಿದೆ. ಈ ವೆಬ್‌ಸೈಟ್ ಪ್ರಕಾರ, ಮಹೇಶ್ ಬಾಬು ಅವರು 'ರುದ್ರ' ಎಂಬ ಶಿವಭಕ್ತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪಾರ ಶಕ್ತಿಯುಳ್ಳ, ಕಳೆದುಹೋದ ಬ್ರಹ್ಮಾಂಡದ ಕಲಾಕೃತಿಯೊಂದನ್ನು ಹುಡುಕಲು ರುದ್ರನು ಟೈಮ್ ಟ್ರಾವೆಲ್‌ನ ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಾನೆ. ಈ ಕಾರ್ಯಾಚರಣೆಯ ಹಿಂದಿರುವ ಮಾಸ್ಟರ್ ಮೈಂಡ್, 'ಕುಂಭ' (ಪೃಥ್ವಿರಾಜ್ ಸುಕುಮಾರನ್). ಮೊದಲು ಕುಂಭನ ಮಾತಿನಂತೆ ಕೆಲಸ ಮಾಡುವ ರುದ್ರನಿಗೆ, ನಂತರ ಕುಂಭನ ದುರುದ್ದೇಶಗಳು ತಿಳಿಯುತ್ತವೆ. ರಾಮಾಯಣ ಕಾಲದ ಆ ಅಮೂಲ್ಯ ವಸ್ತುವನ್ನು ಪಡೆದು ಜಗತ್ತನ್ನೇ ಆಳುವ ಹಪಾಹಪಿ ಕುಂಭನದಾಗಿರುತ್ತದೆ. ಇದೆಲ್ಲಾ ಗೊತ್ತಾದ ಮೇಲೆ ರುದ್ರ ಏನು ಮಾಡುತ್ತಾನೆ ಎಂಬುದೇ ಕಥೆ.
Mahesh Babu: ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು ನಟಿಸೋದು ಕನ್‌ಫರ್ಮ್! ಯಾವ ಸಿನಿಮಾ?
1991ರಲ್ಲಿ ಸ್ಥಾಪನೆಯಾದ ಸಿನೆಸೈಟ್ ಸಂಸ್ಥೆಯು ವಿಎಫ್‌ಎಕ್ಸ್ ಮತ್ತು ಅನಿಮೇಷನ್ ಕ್ಷೇತ್ರದಲ್ಲಿ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಇದು ಹಾಲಿವುಡ್‌ನ 'ದಿ ವಿಚರ್', 'ಅಕ್ವಾಮ್ಯಾನ್', 'ಥೋರ್: ಲವ್ ಅಂಡ್ ಥಂಡರ್' ಮತ್ತು 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ನಂತಹ ದೊಡ್ಡ ಚಿತ್ರಗಳಿಗೆ ಕೆಲಸ ಮಾಡಿದೆ. ಇದೀಗ ವಾರಣಾಸಿ ಸಿನಿಮಾಗೂ ಇದೇ ತಂಡ ಕೆಲಸ ಮಾಡುತ್ತಿದೆ.
ಈಗೇನ್ ಮಾಡ್ತಾರೆ ರಾಜಮೌಳಿ?
ವಾರಣಾಸಿ ಸಿನಿಮಾದ ಕಥೆ ಸೋರಿಕೆಯಾದ ಹಿನ್ನೆಲೆಯಲ್ಲಿ ರಾಜಮೌಳಿ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಬಗ್ಗೆ ತೀವ್ರ ಗೌಪ್ಯತೆ ಕಾಪಾಡುವ ರಾಜಮೌಳಿ ಅವರು, ಈಗ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬಹುದು ಅಥವಾ ಪ್ರೇಕ್ಷಕರಲ್ಲಿ ಕುತೂಹಲ ಉಳಿಸಿಕೊಳ್ಳಲು ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ವೆಬ್‌ಸೈಟ್‌ನಲ್ಲಿರುವ ಕಥೆಯ ಸಾರಾಂಶದ ಸತ್ಯಾಸತ್ಯತೆಯ ಬಗ್ಗೆಯೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ಬಿರುಸಿನ ಶೂಟಿಂಗ್ ಮಾಡುತ್ತಿರುವ ರಾಜಮೌಳಿ
ವಾರಣಾಸಿ ಸಿನಿಮಾಗೆ ರಾಜಮೌಳಿ ಭಾರಿ ಬಿರುಸಿನಿಂದ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ದು, ಇದರಲ್ಲಿ ಪುರಾಣ, ಜಾನಪದ ಮತ್ತು ವಿಜ್ಞಾನ ಎಲ್ಲವನ್ನೂ ಬೆರೆಸಲಾಗಿದೆಯಂತೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ, ಪ್ರಕಾಶ್ ರಾಜ್, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಈ ಸಿನಿಮಾದ ಭಾಗವಾಗಿದ್ದಾರೆ.