ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

A Date Review: ಒಲವಿನ ಹಲವು ಮಜಲುಗಳನ್ನು ಪರಿಚಯಿಸುವ ಒಂದು ದಿನದ ಕಥೆ!

A Date Review: ಆಧುನಿಕ ಕಾಲದ ಕಾರ್ಪೊರೇಟ್ ಪ್ರೇಮ ಸಂಬಂಧಗಳ ಸಂಕೀರ್ಣತೆಯನ್ನು ಕಟ್ಟಿಕೊಡುವ ಪ್ರಯತ್ನವೇ ʻಎ ಡೇಟ್‌ʼಸಿನಿಮಾ. ಕನ್ನಡಿಗ ಟೆಕ್ಕಿ ಹಾಗೂ ದೆಹಲಿ ಮೂಲದ ಯುವತಿಯ ನಡುವೆ ಬೆಂಗಳೂರಿನಲ್ಲಿ ಒಂದೇ ದಿನ ನಡೆಯುವ ಸಂವಾದಾತ್ಮಕ ಪಯಣವೇ ಚಿತ್ರದ ಜೀವಾಳ.

ಚಿತ್ರ: ಎ ಡೇಟ್

ತಾರಾಗಣ: ಸುಜನಿತ್‌ ಶೆಟ್ಟಿ, ಅಶ್ವಿನಿ ಶೆಣೈ

ನಿರ್ದೇಶನ: ವಿಮಲ್‌ ರಾಜ್‌

ಅವಧಿ: 2 ಗಂಟೆ 13 ನಿಮಿಷ

ರೇಟಿಂಗ್: 3/5

ಪ್ರಸ್ತುತ ಕಾಲಘಟ್ಟದಲ್ಲಿ ಪ್ರೇಮ ಸಂಬಂಧಗಳಿಗೆ ಭಿನ್ನ ಭಿನ್ನ ಹೆಸರುಗಳಿವೆ. ಅದರಲ್ಲೂ ಈ ಜೆನ್‌-ಝಿ (Gen Z) ಜಗತ್ತಂತೂ ಸಿಚುಯೇಶನ್‌ಶಿಪ್, ಫ್ರೆಂಡ್ಸ್ ವಿತ್ ಬೆನಿಫಿಟ್ಸ್, ಓಪನ್ ರಿಲೇಷನ್‌ಶಿಪ್, ಡಿಜಿಟಲ್ ಅಥವಾ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್, ಘೋಸ್ಟಿಂಗ್, ಬೆಂಚಿಂಗ್... ಅಂತೆಲ್ಲ ಸಂಬಂಧಗಳಿಗೆ ಹೊಸ ವ್ಯಾಖ್ಯಾನಗಳನ್ನು ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಪ್ರೀತಿಗೆ ಹೊಸ ಅರ್ಥವನ್ನು ಹುಡುಕುವ ಪ್ರಯತ್ನವೇ 'ಎ ಡೇಟ್' ಸಿನಿಮಾ.

'ಎ ಡೇಟ್‌' ಸಿನಿಮಾದ ಕಥೆಯೇನು?

'ಎ ಡೇಟ್‌'— ಕಾರ್ಪೊರೇಟ್‌ ಜಗತ್ತಿನ ಯುವಕ ಮತ್ತು ಯುವತಿಯ ನಡುವೆ ಒಂದೇ ದಿನದಲ್ಲಿ ನಡೆಯುವ ಕಥೆ. ಡೇಟಿಂಗ್ ನೆಪದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಜೊತೆಯಾಗಿ ಸುತ್ತಾಡುವ ಆ ಜೋಡಿಯ ಮಧ್ಯೆ ಏನೆಲ್ಲ ನಡೆಯುತ್ತದೆ ಎಂಬುದನ್ನು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿಮಲ್‌ ರಾಜ್.‌ ಟೆಕ್ಕಿಯಾಗಿರುವ ಪಕ್ಕಾ ಕನ್ನಡಿಗ ಕಾರ್ತಿಕ್‌ಗೆ (ಸುಜನಿತ್) ತನ್ನದೇ ಕಚೇರಿಗೆ ಹೊಸದಾಗಿ ಸೇರಿಕೊಂಡಿರುವ ಮೊನಿಷಾಳನ್ನು (ಅಶ್ವಿನಿ) ಕಂಡರೆ ಇಷ್ಟ. ಆಕೆಯೋ ಪಕ್ಕಾ ಕನ್ನಡತಿಯೇನಲ್ಲ; ದೆಹಲಿ ಮೂಲದವಳು. ಅಪ್ಪ ಪಂಜಾಬಿ, ಅಮ್ಮ ಕನ್ನಡತಿ. ಹೀಗಾಗಿ ಮೊನಿಷಾಗೆ ಕನ್ನಡ ಗೊತ್ತಿದ್ದರೂ, ದಕ್ಷಿಣ ಭಾರತೀಯರನ್ನು ಕಂಡರೆ ಅಷ್ಟಕ್ಕಷ್ಟೇ. ಇಂತಹ ಇಬ್ಬರು ಜೊತೆಯಾಗಿ ಒಂದು ದಿನ ಬೆಂಗಳೂರಿನಲ್ಲಿ ಡೇಟಿಂಗ್‌ಗೆ ತೆರಳಿದರೆ ಏನಾಗುತ್ತದೆ ಎಂಬುದೇ ಈ ಸಿನಿಮಾದ ಕಥಾಹಂದರ.

ಮೇಕಿಂಗ್‌ ಹೇಗಿದೆ?

ಮೇಲ್ನೋಟಕ್ಕೆ ಈ ಕಥೆ ಇಷ್ಟೇನಾ ಎನ್ನಿಸಬಹುದು. ಆದರೆ, ಕೇವಲ ಎರಡೇ ಮುಖ್ಯ ಪಾತ್ರಗಳನ್ನು ಇಟ್ಟುಕೊಂಡು, ಬೆಳಗ್ಗೆಯಿಂದ ರಾತ್ರಿಯವರೆಗೂ ಬೆಂಗಳೂರಿನ ಒಂದೊಂದೇ ಮಗ್ಗುಲನ್ನು ಪರಿಚಯಿಸುತ್ತಾ, ಕಾರ್ತಿಕ್‌ ಮತ್ತು ಮೊನಿಷಾಳ ಬದುಕಿನ ಆಳಕ್ಕಿಳಿದು ಹೊಸ ತಿರುವುಗಳನ್ನು ನೀಡುತ್ತಾ ಸಾಗಿದ್ದಾರೆ ವಿಮಲ್‌ ರಾಜ್.‌ ನಿರೂಪಣೆಯಲ್ಲಿ ಯಾವುದೇ ಆತುರವಿಲ್ಲದೆ, ಪ್ರತಿಯೊಂದನ್ನೂ ಸಾವಧಾನವಾಗಿ ಹೇಳುತ್ತಾ, ಭಾವನೆಗಳೊಂದಿಗೆ ಸಂವಾದ ನಡೆಸುವಂತೆ ಕಥೆಯನ್ನು ಒಂದೇ ಓಘದಲ್ಲಿ ಕಟ್ಟಿಕೊಡಲಾಗಿದೆ.

ಈ ಸಿನಿಮಾಗೆ ಮೋಕ್ಷಾ ಬೀಟ್ಸ್‌ ಅವರ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ವಿಭಿನ್ನ ಮೆರುಗು ನೀಡಿವೆ. ಇದರ ಜೊತೆಗೆ ವಡ್ಡೆ ದೇವೇಂದರ್ ರೆಡ್ಡಿ ಅವರ ಛಾಯಾಗ್ರಹಣ ಮತ್ತೊಂದು ದೊಡ್ಡ ಪ್ಲಸ್‌ ಪಾಯಿಂಟ್‌. ಬೆಂಗಳೂರಿನ ರಸ್ತೆಗಳು, ಏರಿಯಾಗಳನ್ನು ಅವರು ಅತ್ಯಂತ ನೈಜವಾಗಿ ಹಾಗೂ ಸುಂದರವಾಗಿ ಸೆರೆಹಿಡಿದಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆಗಳ ಜೊತೆಗೆ ಸಂಕಲನವನ್ನೂ ವಿಮಲ್‌ ರಾಜ್‌ ಅವರೇ ನಿಭಾಯಿಸಿದ್ದಾರೆ. ದ್ವಿತೀಯಾರ್ಧದಲ್ಲಿ ತುಸು ನಿಧಾನ ಎನಿಸುವ ಕಥೆಯು ಕ್ಲೈಮ್ಯಾಕ್ಸ್ ಹೊತ್ತಿಗೆ ಕುತೂಹಲ ಮೂಡಿಸುತ್ತದೆ. ನಾಯಕಿಯ ಮಾನಸಿಕ ತೊಳಲಾಟ ಹಾಗೂ ಪ್ರೀತಿಯಲ್ಲಿನ ಸಂಕಟಗಳನ್ನು ಮನಮುಟ್ಟುವಂತೆ ಚಿತ್ರಿಸಿರುವ ರೀತಿ ಆಪ್ತವಾಗಿದೆ. ಆಕೆಯ ಮಾಜಿ ಪ್ರಿಯಕರನ ಪಾತ್ರವನ್ನು ಪರಿಚಯಿಸಿರುವ ಶೈಲಿಯೂ ವಿಭಿನ್ನವಾಗಿದೆ. ವಿಮಲ್‌ ರಾಜ್‌ ಮುಂದಿನ ದಿನಗಳಲ್ಲಿ ಇನ್ನಷ್ಟು ಸಿದ್ಧತೆಯೊಂದಿಗೆ ತೊಡಗಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ನಿರ್ದೇಶಕರಾಗಿ ಹೊರಹೊಮ್ಮುವ ಭರವಸೆ ಮೂಡಿಸುತ್ತಾರೆ.

ಕಲಾವಿದರ ನಟನೆ ಹೇಗಿದೆ?

ಚಿತ್ರದುದ್ದಕ್ಕೂ ಸುಜನಿತ್‌ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಇಬ್ಬರೇ ಆವರಿಸಿಕೊಂಡಿದ್ದಾರೆ. ಅದರಲ್ಲೂ ಉತ್ತರ ಭಾರತ ಮೂಲದ ಹುಡುಗಿಯ ಪಾತ್ರದಲ್ಲಿ ಅಶ್ವಿನಿ ಶೆಣೈ ಸಹಜವಾಗಿ ನಟಿಸಿದ್ದಾರೆ. ಪ್ರೀತಿಯ ಗೊಂದಲದಲ್ಲಿ ಸಿಲುಕಿ ಒದ್ದಾಡುವ ಯಾತನೆಯನ್ನು ಅಭಿವ್ಯಕ್ತಪಡಿಸುವಲ್ಲಿ ಅವರು ಗೆದ್ದಿದ್ದಾರೆ. ಸುಜನಿತ್‌ ಕೂಡ ಕಾರ್ತಿಕ್‌ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದ್ದಾರೆ. ವಿಭಿನ್ನ ಶೈಲಿಯ, ಅದರಲ್ಲೂ ಆಧುನಿಕ ಪ್ರೇಮಕಥೆಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ 'ಎ ಡೇಟ್‌' ಖಂಡಿತ ಇಷ್ಟವಾಗುತ್ತದೆ.