ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್; 'ಮಾಫಿ ಸಾಕ್ಷಿ'ಯಾಗಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ

ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ 'ಮಾಫಿ ಸಾಕ್ಷಿ' (Approver) ಆಗಲು ನಿರ್ಧರಿಸಿದ್ದಾರೆ. ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳಿಂದ ಮುಕ್ತಿ ಪಡೆಯಲು ಜಾಕ್ವೆಲಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಪ್ರಕರಣದಲ್ಲಿ 'ಮಾಫಿ ಸಾಕ್ಷಿ' (Approver) ಆಗಲು ಬಯಸುತ್ತಿರುವುದಾಗಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ (ED) ಅಧಿಕೃತ ಮನವಿ ಸಲ್ಲಿಸುವಂತೆ ನ್ಯಾಯಾಲಯವು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸೂಚಿಸಿದೆ. ಪಟಿಯಾಲ ಹೌಸ್ ನ್ಯಾಯಾಲಯವು ಶುಕ್ರವಾರ (ಏ.17) ಜಾಕ್ವೆಲಿನ್ ಅವರ ಮನವಿಯ ಮೇರೆಗೆ ಇಡಿಗೆ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 20 ರಂದು ವಿಚಾರಣೆಯನ್ನು ನಿಗದಿಪಡಿಸಿದೆ.

ಇಡಿ ಅಂಗಳದಲ್ಲಿ ಜಾಕ್ವೆಲಿನ್ ಭವಿಷ್ಯ

ನಿಯಮಗಳ ಪ್ರಕಾರ, ಇಂತಹ ವಿನಂತಿಯನ್ನು ತನಿಖಾ ಸಂಸ್ಥೆಗೆ ಸಲ್ಲಿಸಬೇಕಾಗುತ್ತದೆ. ಇಡಿ ಸಂಸ್ಥೆಯು ಮೊದಲು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತದೆ ಮತ್ತು ನಂತರ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಲು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತದೆ. ಜಾಕ್ವೆಲಿನ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

ವ್ಯಾಲೆಂಟೈನ್ಸ್ ಡೇಯಂದು ಜೈಲಿನಿಂದಲೇ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಐಷಾರಾಮಿ ಹೆಲಿಕಾಫ್ಟರ್‌ ಗಿಫ್ಟ್‌ ನೀಡಿದ ಸುಕೇಶ್‌ ಚಂದ್ರಶೇಖರ್‌

ಸುಕೇಶ್‌ಗೆ ಜಾಕ್ವೆಲಿನ್‌ ಪ್ರೇಯಸಿ?

ಹಲವಾರು ಕೇಸ್‌ಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ತಾನು ನಟಿ ಜಾಕ್ವೆಲಿನ್ ಅವರ ಪ್ರಿಯಕರ ಎಂದು ನಿರಂತರವಾಗಿ ಹೇಳಿಕೊಳ್ಳುತ್ತಿದ್ದಾನೆ. ಜೈಲಿನಿಂದ ಪತ್ರಗಳನ್ನು ಕಳುಹಿಸುವ ಮೂಲಕ ಜಾಕ್ವೆಲಿನ್ ಮೇಲಿನ ತನ್ನ ಪ್ರೀತಿಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದಾನೆ. ಇಬ್ಬರ ನಡುವಿನ ಆಪ್ತ ಫೋಟೋಗಳು ಲೀಕ್‌ ಆದಮೇಲೆ ಇವರ ನಡುವಿನ ಪರಿಚಯವನ್ನು ಖಾತರಿಪಡಿಸಿದ್ದವು. ಆದರೆ, "ಸುಕೇಶ್ ಒಬ್ಬ ಉತ್ತಮ ಉದ್ಯಮಿ ಎಂದು ನಂಬಿಸಿ ತನಗೆ ದಾರಿ ತಪ್ಪಿಸಿದ್ದಾನೆ" ಎಂದು ಜಾಕ್ವೆಲಿನ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಜೈಲಿನಿಂದಲೇ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಬಿಡ್‌ ಸಲ್ಲಿಸಿದ ಸುಕೇಶ್; ನಟಿ ಜಾಕ್ವೆಲಿನ್‌ಗೆ ಉಡುಗೊರೆ ನೀಡಲು ನಿರ್ಧಾರ

ಇಡಿ ಸಂಸ್ಥೆಯು 2022ರ ಆಗಸ್ಟ್‌ನಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಜಾಕ್ವೆಲಿನ್ ಅವರನ್ನು ಕೂಡ ಆರೋಪಿ ಎಂದು ಹೆಸರಿಸಿದೆ. ಸುಕೇಶ್‌ ಚಂದ್ರಶೇಖರ್‌ನ ಕ್ರಿಮಿನಲ್ ಹಿನ್ನೆಲೆ ತಿಳಿದಿದ್ದರೂ ಅವನಿಂದ ಜಾಕ್ವೆಲಿನ್ 7 ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ ಆಭರಣಗಳು, ಬಟ್ಟೆಗಳು ಮತ್ತು ವಾಹನಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆಯು ಆರೋಪಿಸಿದೆ. ಅಲ್ಲದೆ, ಸುಕೇಶ್ ಬಂಧನದ ನಂತರ ಜಾಕ್ವೆಲಿನ್ ತಮ್ಮ ಫೋನ್‌ನಲ್ಲಿದ್ದ ಮಹತ್ವದ ಡಾಟವನ್ನು ಅಳಿಸಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ ಆರಂಭದಲ್ಲಿ ಹಣಕಾಸು ವಹಿವಾಟಿನ ವಿವರಗಳನ್ನು ಕೂಡ ಜಾಕ್ವೆಲಿನ್ ಮರೆಮಾಚಿದ್ದರು ಎಂದು ಇಡಿ ಹೇಳಿತ್ತು.

ಆರೋಪಗಳನ್ನು ಅಲ್ಲಗಳೆದಿರುವ ನಟಿ

ಜಾಕ್ವೆಲಿನ್ ಅವರು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, "ಸುಕೇಶ್ ನನ್ನ ಭಾವನೆಗಳ ಜೊತೆ ಆಟವಾಡಿದ್ದಾನೆ, ನನ್ನ ಜೀವನವನ್ನು ನರಕವಾಗಿಸಿದ್ದಾನೆ, ಅವನು ನನ್ನನ್ನು ದಾರಿತಪ್ಪಿಸಿ ನನ್ನ ವೃತ್ತಿಜೀವನಕ್ಕೆ ಧಕ್ಕೆ ತಂದಿದ್ದಾನೆ" ಎಂದು ಜಾಕ್ವೆಲಿನ್ ಫರ್ನಾಂಡಿಸ್ ಈ ಹಿಂದೆ ಹೇಳಿಕೆ ನೀಡಿದ್ದರು.