ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸನ್ ಉದಯ ವಾಹಿನಿಯಲ್ಲಿ ‘ನವಶಕ್ತಿ ವೈಭವ’; 9 ಕ್ಷೇತ್ರಗಳು, 9 ದೇವಿಯರು, 9 ನಾಯಕಿಯರ ವಿಶೇಷ ಕಥಾಸರಣಿ!

Navashakti Vaibhava: ಸನ್ ಉದಯ ವಾಹಿನಿಯು ದಸರಾ ಹಬ್ಬದ ಪ್ರಯುಕ್ತ ಮಹಿಳಾ ಸಬಲೀಕರಣ ಸಾರುವ ಒಂಬತ್ತು ವಿನೂತನ ದೈವೀಕ ಸಂಚಿಕೆಗಳನ್ನು ಹೊತ್ತು ತರುತ್ತಿದೆ. ಒಂಬತ್ತು ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂಬತ್ತು ಜನಪ್ರಿಯ ನಾಯಕಿಯರು ದೇವಿ ಸ್ವರೂಪದಲ್ಲಿ ಅನ್ಯಾಯದ ವಿರುದ್ಧ ‘ನವಶಕ್ತಿ ವೈಭವ’ ಕಥಾಸರಣಿಯಲ್ಲಿ ಧ್ವನಿಯೆತ್ತಲಿದ್ದಾರೆ.

ವೈವಿಧ್ಯಮಯ ಕೌಟುಂಬಿಕ ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ‘ಸನ್ ಉದಯ’ ವಾಹಿನಿ ಇದೀಗ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ವೀಕ್ಷಕರಿಗೆ ವಿಶೇಷ ದೈವೀಕ ಅನುಭವ ನೀಡಲು ಸಜ್ಜಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮವನ್ನು ಇಮ್ಮಡಿಗೊಳಿಸಲು ಸ್ತ್ರೀ ಶಕ್ತಿಯನ್ನು ಕೊಂಡಾಡುವ ‘ನವಶಕ್ತಿ ವೈಭವ’ ಎಂಬ ವಿನೂತನ ವಿಶೇಷ ಸಂಚಿಕೆಗಳ ಸರಣಿಯನ್ನು ವಾಹಿನಿ ಹೊತ್ತು ತರುತ್ತಿದೆ. ಅಕ್ಟೋಬರ್ 11 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಈ ಮಹಾಸಂಚಿಕೆಗಳು ಪ್ರಸಾರವಾಗಲಿವೆ.

9 ಕ್ಷೇತ್ರ, 9 ನಾಯಕಿಯರು

ಈ ವಿಶೇಷ ಸರಣಿಯಲ್ಲಿ ರಾಜ್ಯದ ಪ್ರಸಿದ್ಧ ಒಂಬತ್ತು ದೇವಿ ಕ್ಷೇತ್ರಗಳ ಹಿನ್ನೆಲೆಯಲ್ಲಿ ಒಂಬತ್ತು ದೈವೀಕ ಕಥೆಗಳನ್ನು ಹೆಣೆಯಲಾಗಿದೆ. ಸನ್ ಉದಯ ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ ರಥಸಪ್ತಮಿ, ಮಹಾಲಕ್ಷ್ಮೀ ಮದುವೆ, ಗೆಳತಿ ಗಾಯತ್ರಿ, ಮೂಗುತಿ ಮಲ್ಲಿ, ಶಾಂತಿ ನಿವಾಸ, ಮಾಂಗಲ್ಯ, ಕೃಷ್ಣವಂಶಿ ಹಾಗೂ ಮೈನಾ ಸೇರಿದಂತೆ ಒಟ್ಟು ಒಂಬತ್ತು ಧಾರಾವಾಹಿಗಳ ನಾಯಕಿಯರು ಆಯಾ ಸಂಚಿಕೆಗಳಲ್ಲಿ ದೇವಿ ಸ್ವರೂಪಿಣಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಮೈಸೂರು, ಕೊಲ್ಲೂರು, ಕಟೀಲು, ಶಿರಸಿ, ಸವದತ್ತಿ ಸೇರಿದಂತೆ ಕರ್ನಾಟಕದ ಸುಪ್ರಸಿದ್ಧ ಒಂಬತ್ತು ಶಕ್ತಿಪೀಠಗಳಲ್ಲೇ ಈ ಸಂಚಿಕೆಗಳನ್ನು ಚಿತ್ರೀಕರಿಸಿರುವುದು ಇವುಗಳ ಪ್ರಮುಖ ಆಕರ್ಷಣೆಯಾಗಿದೆ.

ಮಹಿಳಾ ಸಬಲೀಕರಣವೇ ಮೂಲ ಸಂದೇಶ

ಕೇವಲ ಧಾರ್ಮಿಕ ನಂಬಿಕೆಗಳಿಗೆ ಸೀಮಿತವಾಗದೆ, ನಾರಿಯ ಆತ್ಮವಿಶ್ವಾಸ ಮತ್ತು ಆಕೆಯ ಅಂತಃಶಕ್ತಿಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಕಥೆಗಳನ್ನು ರೂಪಿಸಲಾಗಿದೆ. ಹೆಣ್ಣಿನಲ್ಲೇ ದೈವೀಕ ಶಕ್ತಿ ಅಡಗಿದೆ ಹಾಗೂ ಮಹಿಳಾ ಶಕ್ತಿಯನ್ನು ದಮನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಶಕ್ತ ಸಂದೇಶವನ್ನು ಸಮಾಜಕ್ಕೆ ರವಾನಿಸುವುದು ಈ ಪ್ರಯೋಗದ ಮುಖ್ಯ ಉದ್ದೇಶ ಎಂದು ಸನ್ ಉದಯ ವಾಹಿನಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಮೊದಲ ಸಂಚಿಕೆಯಲ್ಲಿ ‘ರಥಸಪ್ತಮಿ’ಯ ದೇವೀ ಮಹಿಮೆ

‘ನವಶಕ್ತಿ ವೈಭವ’ ಸರಣಿಯ ಮೊದಲ ಸಂಚಿಕೆಯು ಅಕ್ಟೋಬರ್ 11ರ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರೀಕರಣಗೊಂಡಿರುವ ‘ರಥಸಪ್ತಮಿ’ ವಿಶೇಷ ಸಂಚಿಕೆಯಲ್ಲಿ, ಮೈಕ್ರೋಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ನಲುಗುವ ಬಡ ಶಿಕ್ಷಕಿ ಹಾಗೂ ಆಕೆಯ ಮಗಳನ್ನು ಉಳಿಸಲು ನಾಯಕಿ ಸಪ್ತಮಿ ಮುಂದಾಗುತ್ತಾಳೆ. ತನ್ನ ಬುದ್ಧಿವಂತಿಕೆ ಮತ್ತು ಧೈರ್ಯವನ್ನೇ ಅಸ್ತ್ರವಾಗಿಸಿಕೊಂಡು ದುಷ್ಟರ ದಮನ ಮಾಡುವ ಮೂಲಕ ಆಕೆ ನೊಂದವರ ಪಾಲಿಗೆ ದೇವಿಯಂತೆ ಹೇಗೆ ನೆರವಾಗುತ್ತಾಳೆ ಎಂಬುದನ್ನು ಅತ್ಯಂತ ರೋಚಕವಾಗಿ ಕಟ್ಟಿಕೊಡಲಾಗಿದೆ. ಪವಾಡಗಳಿಗಿಂತ ವಾಸ್ತವ ನೆಲೆಗಟ್ಟಿನಲ್ಲಿ ಹೆಣ್ಣಿನ ದೈವೀಕ ಶಕ್ತಿಯನ್ನು ಸಮೀಕರಿಸಿರುವುದು ಈ ಕಥೆಯ ವೈಶಿಷ್ಟ್ಯ.

ʻಮಹಾಲಕ್ಷ್ಮೀ ಮದುವೆʼ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್; ಸನ್ ಉದಯ ಟಿವಿಗೆ ನಟಿ ಅಮೂಲ್ಯ ಗೌಡ ಗ್ರ್ಯಾಂಡ್ ಎಂಟ್ರಿ

ಈ ಮೊದಲ ಸಂಚಿಕೆಯಲ್ಲಿ ‘ರಥಸಪ್ತಮಿ’ ಧಾರಾವಾಹಿಯ ನಾಯಕಿ ಮೌಲ್ಯ ಗೌಡ, ನಾಯಕ ಜೀವನ್ ಅವರೊಂದಿಗೆ ಸ್ವಪ್ನಾ ರಾಜ್, ಸುದರ್ಶನ್, ಇಶಿಕಾ ಮುಂತಾದ ಖ್ಯಾತ ಕಲಾವಿದರು ನಟಿಸಿದ್ದಾರೆ. ಮಹಿಳಾ ಶಕ್ತಿಯನ್ನು ಸಾರುವ ಈ ಒಂದು ಗಂಟೆಯ ‘ನವಶಕ್ತಿ ವೈಭವ’ ವಿಶೇಷ ಸಂಚಿಕೆಗಳು ಅಕ್ಟೋಬರ್ 11 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಸನ್ ಉದಯ ವಾಹಿನಿಯಲ್ಲಿ ಮೂಡಿಬರಲಿವೆ.