ಸನ್ರೈಸರ್ಸ್ ಹೈದರಾಬಾದ್ನ ಸಿಇಒ ಕಾವ್ಯಾ ಮಾರನ್ ಹಾಗೂ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ʻಸೂಪರ್ಸ್ಟಾರ್ʼ ರಜನಿಕಾಂತ್ ಅವರ ಸೋದರಳಿಯನಾಗಿರುವ ಅನಿರುದ್ಧ್, ದೇಶದ ಬೃಹತ್ ಉದ್ಯಮ ಸಾಮ್ರಾಜ್ಯಗಳಲ್ಲಿ ಒಂದಾದ ಸನ್ ಗ್ರೂಪ್ ಒಡತಿ ಕಾವ್ಯಾ ಮಾರನ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ, ಇಬ್ಬರ ಕೌಟುಂಬಿಕ ಹಿನ್ನೆಲೆ, ವೈಯಕ್ತಿಕ ಸಂಪತ್ತು ಹಾಗೂ ಮದುವೆಯ ದಿನಾಂಕದ ಕುರಿತು ಎಲ್ಲೆಡೆ ಚರ್ಚೆಗಳು ಆರಂಭವಾಗಿವೆ.
ಕಾವ್ಯಾ ಮಾರನ್ ಮತ್ತು ಅನಿರುದ್ಧ್ ಮದುವೆ ನವೆಂಬರ್ 11 ರಂದು ಗ್ರೀಸ್ನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಬಳಿಕ ನವೆಂಬರ್ 21 ರಂದು ಚೆನ್ನೈನ ಪಂಚತಾರಾ ಹೋಟೆಲ್ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಧಾನಿ ಮೋದಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮದುವೆಯ ಆಹ್ವಾನ ಪತ್ರಿಕೆ ತಲುಪಿದೆ.
ವಿದೇಶದಲ್ಲಿ ಓದಿರುವ ಕಾವ್ಯಾ
ಕಾವ್ಯಾ ಮಾರನ್ ಅವರು ಕೇವಲ ಉದ್ಯಮಿ ಪುತ್ರಿಯಷ್ಟೇ ಅಲ್ಲದೆ, ಸ್ವಂತ ಪರಿಶ್ರಮದಿಂದ ವ್ಯವಹಾರ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ. ಚೆನ್ನೈನ ಪ್ರತಿಷ್ಠಿತ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಪದವಿ ಮುಗಿಸಿದ ಅವರು, ಯುನೈಟೆಡ್ ಕಿಂಗ್ಡಮ್ನ ವಾರ್ವಿಕ್ ಬಿಸಿನೆಸ್ ಸ್ಕೂಲ್ನಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಉನ್ನತ ಶಿಕ್ಷಣದ ಬಳಿಕ ಮಾಧ್ಯಮ ಮತ್ತು ಕ್ರೀಡಾ ವಲಯದಲ್ಲಿ ಸಕ್ರಿಯರಾದ ಕಾವ್ಯಾ, ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಆಗಿದ್ದಾರೆ.
24 ಸಾವಿರ ಕೋಟಿ ಮೌಲ್ಯದ ಸಾಮ್ರಾಜ್ಯ
ಇನ್ನು ಸಂಪತ್ತಿನ ವಿಚಾರಕ್ಕೆ ಬಂದರೆ, ಕಾವ್ಯಾ ಮಾರನ್ ಅವರ ವೈಯಕ್ತಿಕ ಆಸ್ತಿ ಮೌಲ್ಯ ಅಧಿಕೃತವಾಗಿ ಬಹಿರಂಗವಾಗಿಲ್ಲವಾದರೂ, ಅವರ ತಂದೆ ಕಲಾನಿಧಿ ಮಾರನ್ ಅವರ ಒಟ್ಟು ಆಸ್ತಿಯು ಫೋರ್ಬ್ಸ್ ವರದಿ ಪ್ರಕಾರ ಸುಮಾರು 24 ಸಾವಿರ ಕೋಟಿ ರೂ. ಇದೆ. 1993ರಲ್ಲಿ ಆರಂಭವಾದ ಸನ್ ಟಿವಿ ನೆಟ್ವರ್ಕ್ ಇಂದು 37 ವಾಹಿನಿಗಳನ್ನು ಹೊಂದಿದ್ದು, ದೇಶದ 14 ಕೋಟಿಗೂ ಹೆಚ್ಚು ಮನೆಗಳನ್ನು ತಲುಪುತ್ತಿದೆ. ಈ ಬೃಹತ್ ಮಾಧ್ಯಮ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಿರುವ ಕಾವ್ಯಾ, ಸನ್ ಗ್ರೂಪ್ನ ಕ್ರೀಡಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಅವರು ಕೂಡ 400-500 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ ಎಂಬ ಮಾಹಿತಿ ಇದೆ.
ದುಬಾರಿ ಸಂಭಾವನೆ ಪಡೆಯುವ ಅನಿರುದ್ಧ್
ಮತ್ತೊಂದೆಡೆ, ಸೂಪರ್ಹಿಟ್ ಹಾಡುಗಳ ಮೂಲಕ ಸೌತ್ ಸಿನಿಮಾರಂಗದಲ್ಲಿ ಧೂಳೆಬ್ಬಿಸುತ್ತಿರುವ ರಾಕ್ಸ್ಟಾರ್ ಅನಿರುದ್ಧ್ ರವಿಚಂದರ್ ಕೂಡ ಅಪಾರ ಬೇಡಿಕೆ ಹೊಂದಿರುವ ಸಂಗೀತ ನಿರ್ದೇಶಕ. 'ಜೈಲರ್ 2' ಸೇರಿದಂತೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿಗೆ ಸಂಗೀತ ನೀಡುತ್ತಿರುವ ಇವರು, ನಟ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರಕ್ಕೆ ಬರೋಬ್ಬರಿ 25 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಸಾಮಾನ್ಯವಾಗಿ ಪ್ರತಿ ಚಿತ್ರಕ್ಕೆ 8 ರಿಂದ 10 ಕೋಟಿ ಸಂಭಾವನೆ ಪಡೆಯುವ ಅನಿರುದ್ಧ್ ಅವರ ಒಟ್ಟು ಆಸ್ತಿ ಮೌಲ್ಯ ಅಂದಾಜು 60 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
Anirudh Ravichander: ಅನಿರುದ್ಧ್-ಕಾವ್ಯಾ ಮಾರನ್ ವಿವಾಹ; ಚೆನ್ನೈನಲ್ಲಿ ಅದ್ಧೂರಿ ಸಮಾರಂಭ!
ಅನಿರುದ್ಧ್ ಬಳಿ ಯಾವೆಲ್ಲಾ ಕಾರುಗಳಿವೆ?
ಅನಿರುದ್ಧ್ ಅವರ ಬಳಿ ಐಷಾರಾಮಿ ವಾಹನಗಳ ಭರ್ಜರಿ ಸಂಗ್ರಹವೇ ಇದೆ. 2023ರಲ್ಲಿ 'ಜೈಲರ್' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರೇ ಸುಮಾರು 1.10 ಕೋಟಿ ಮೌಲ್ಯದ 'ಪೋರ್ಷೆ ಮಕಾನ್' ಕಾರನ್ನು ಅನಿರುದ್ಧ್ಗೆ ಉಡುಗೊರೆಯಾಗಿ ನೀಡಿದ್ದರು. ಇದರ ಜೊತೆಗೆ BMW iX1 LWB ಎಲೆಕ್ಟ್ರಿಕ್ ಎಸ್ಯುವಿ, ಕೆಂಪು ಬಣ್ಣದ ಮಹೀಂದ್ರಾ BE 6 ಹಾಗೂ ಫೋರ್ಡ್ ಮಸ್ಟಾಂಗ್ ಜಿಟಿ ಕಾರುಗಳನ್ನು ಅವರು ಹೊಂದಿದ್ದಾರೆ. ರೋಲ್ಸ್ ರಾಯ್ಸ್, ಮರ್ಸಿಡಿಸ್-ಮೇಬ್ಯಾಕ್, ರೇಂಜ್ ರೋವರ್ನಂತಹ ದುಬಾರಿ ಕಾರುಗಳು ಇವರ ಗ್ಯಾರೇಜ್ನಲ್ಲಿವೆ ಎಂದು ಹೇಳಲಾಗುತ್ತದೆ.
ಅನಿರುದ್ಧ್ ಫ್ಯಾಮಿಲಿ ಹಿನ್ನೆಲೆ
ನಟ ರವಿ ರಾಘವೇಂದ್ರ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ ಲಕ್ಷ್ಮಿ ರವಿಚಂದರ್ ಅವರ ಪುತ್ರನಾಗಿರುವ ಅನಿರುದ್ಧ್ಗೆ ಬಾಲ್ಯದಿಂದಲೇ ಚಿತ್ರರಂಗದ ಜೊತೆ ನಂಟಿದೆ. ರಜನಿಕಾಂತ್ ಅವರ ಪತ್ನಿ ಲತಾ ಅವರು ಅನಿರುದ್ಧ್ ತಂದೆಯ ಸಹೋದರಿಯಾಗಿದ್ದು, ಈ ಮೂಲಕ ರಜನಿಕಾಂತ್ ಅವರು ಅನಿರುದ್ಧ್ಗೆ ನೇರ ಸೋದರಮಾವ ಆಗುತ್ತಾರೆ. ಜೊತೆಗೆ ಐಶ್ವರ್ಯಾ ಹಾಗೂ ಸೌಂದರ್ಯಾ ರಜನಿಕಾಂತ್ ಅವರಿಗೆ ಅನಿರುದ್ಧ್ ಸೋದರಸಂಬಂಧಿಯಾಗಿದ್ದು, ಹಿರಿಯ ನಟ ವೈ.ಜಿ. ಮಹೇಂದ್ರನ್ ಅವರ ಕುಟುಂಬಕ್ಕೂ ಹತ್ತಿರದ ಸಂಬಂಧಿಯಾಗಿದ್ದಾರೆ.