ನಟ ಸೂರ್ಯ ಅಭಿನಯದ ದ್ವಿಭಾಷಾ ಚಿತ್ರ ‘ವಿಶ್ವನಾಥ್ ಅಂಡ್ ಸನ್ಸ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗೆಲುವು ಕಾಣುತ್ತಿದೆ. ಕೆಲ ತಿಂಗಳುಗಳ ಹಿಂದಷ್ಟೇ ತೆರೆಕಂಡು ಭರ್ಜರಿ ಗಳಿಕೆ ಮಾಡಿದ್ದ ‘ಕರುಪ್ಪು’ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಸೂರ್ಯ ಇದೀಗ ಮತ್ತೊಂದು ಬ್ಲಾಕ್‌ಬಸ್ಟರ್ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ.
ತೆಲುಗಿನ ಖ್ಯಾತ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ಚಿತ್ರವು ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲಿ ಜಾಗತಿಕವಾಗಿ ಬರೋಬ್ಬರಿ 75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಕಲೆಕ್ಷನ್ ಹೆಚ್ಚಾಗುವುದರ ಜತೆಗೆ ಶೋಗಳ ಸಂಖ್ಯೆಯೂ ಡಬಲ್ ಆಗಿದೆ.
ಎರಡೇ ದಿನಕ್ಕೆ 75 ಕೋಟಿ ರೂ.ಗಳಿಕೆ
ಚಿತ್ರವು ಮೊದಲ ದಿನ ಭಾರತದಲ್ಲಿ 15.35 ಕೋಟಿ ರೂ. ನಿವ್ವಳ (Net) ಕಲೆಕ್ಷನ್ ಮಾಡುವ ಮೂಲಕ ಉತ್ತಮ ಆರಂಭ ಪಡೆದಿತ್ತು. ಸ್ವಾತಂತ್ರ್ಯ ದಿನಾಚರಣೆಯ ಸಾರ್ವಜನಿಕ ರಜೆಯ ದಿನವಾದ ಆಗಸ್ಟ್ 15 ರಂದು ಚಿತ್ರದ ಗಳಿಕೆಯಲ್ಲಿ ಬರೋಬ್ಬರಿ ಶೇ.45 ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಈ ಚಿತ್ರದ ಒಟ್ಟು ದೇಶೀಯ ಗಳಿಕೆ 44 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ವಿದೇಶದಲ್ಲೂ ಈ ಚಿತ್ರವು ಭಾರಿ ಕಮಾಲ್ ಮಾಡಿದ್ದು, ವಿದೇಶಗಳಲ್ಲಿ ಒಟ್ಟು 31 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ 75 ಕೋಟಿ ರೂ. ಗಳಿಕೆಯನ್ನು ದಾಖಲಿಸಿದೆ.
ಮೂರೇ ದಿನಕ್ಕೆ 100 ಕೋಟಿ ರೂ. ಫಿಕ್ಸ್
ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಉತ್ತರ ಅಮೆರಿಕ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 1 ಮಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ್ದು, ಸೂರ್ಯ ಅವರ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸುಮಾರು 63 ಕೋಟಿ ರೂಪಾಯಿಗಳ ಥಿಯೇಟ್ರಿಕಲ್ ಬಿಸಿನೆಸ್ ನಡೆದಿದ್ದು, ಸಾಗರೋತ್ತರ ಮಾರುಕಟ್ಟೆಯಲ್ಲಿ ಈಗಾಗಲೇ ಬ್ರೇಕ್-ಈವನ್ ಹಂತವನ್ನು ತಲುಪಿದೆ. ಮೊದಲ ವಾರಾಂತ್ಯ ಮುಗಿಯುವ ಹೊತ್ತಿಗೆ ಚಿತ್ರವು ಜಾಗತಿಕವಾಗಿ 100 ಕೋಟಿ ರೂಪಾಯಿ ಕಲೆಕ್ಷನ್ ಗಡಿ ದಾಟುವುದು ಖಚಿತವಾಗಿದೆ.
ಮಮಿತಾ ಬೈಜು ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ರಾಧಿಕಾ ಶರತ್‌ಕುಮಾರ್, ರವೀನಾ ಟಂಡನ್, ವೈವಾ ಹರ್ಷ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಲವು ದಿನಗಳ ನಂತರ ಸೂರ್ಯ ಅವರು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ತಮಿಳುನಾಡು ಹಾಗೂ ತೆಲುಗು ರಾಜ್ಯಗಳಲ್ಲಿ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಈ ಚಿತ್ರವು ವಿತರಕರು ಹಾಗೂ ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಡುವ ಮುನ್ಸೂಚನೆ ನೀಡಿದೆ.