ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳು ನಟ ಸೂರ್ಯಗೆ ಸಾಧ್ಯವಾಗಿದ್ದು ಬೇರೆ 'ಸ್ಟಾರ್' ಹೀರೋಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಅಭಿಮಾನಿಗಳಿಗೆ ಬೇಕಿರುವುದು ಇದೇ ಸ್ಪೀಡ್!

Actor Suriya: ನಟ ಸೂರ್ಯ ಅವರ ಸ್ಪೀಡ್ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕೇವಲ ಆರು ತಿಂಗಳ ಅಂತರದಲ್ಲಿ ‘ಕರುಪ್ಪು’, ‘ವಿಶ್ವನಾಥ್ & ಸನ್ಸ್’ ಮತ್ತು ನವೆಂಬರ್‌ನಲ್ಲಿ ಬರಲಿರುವ ‘ಸೀನ್’ ಮೂಲಕ ಮೂರು ಚಿತ್ರಗಳನ್ನು ನೀಡುತ್ತಿದ್ದಾರೆ. ಸಾಲು ಸಾಲು ಹಿಟ್ ನೀಡುತ್ತಿರುವ ಸೂರ್ಯ, ಇತರ ಸ್ಟಾರ್ ನಟರಿಗೆ ಮಾದರಿಯಾಗಿದೆ.

ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ್ದು, ಸಖತ್ ಸ್ಪೀಡ್‌ನಲ್ಲಿದ್ದಾರೆ. ಈ ವರ್ಷ ಈಗಾಗಲೇ ಬಿಡುಗಡೆಯಾಗಿರುವ ಅವರ ‘ಕರುಪ್ಪು’ ಮತ್ತು ‘ವಿಶ್ವನಾಥ್ & ಸನ್ಸ್’ ಚಿತ್ರಗಳು ಸಾಲು ಸಾಲಾಗಿ ಸೂಪರ್ ಹಿಟ್ ಆಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿವೆ. ಈ ಎರಡೂ ಸಿನಿಮಾಗಳ ಗೆಲುವಿನ ಗುಂಗಿನಿಂದ ಪ್ರೇಕ್ಷಕರು ಹೊರಬರುವ ಮುನ್ನವೇ, ಸೂರ್ಯ ತಮ್ಮ ಮುಂದಿನ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರಿಗೆ ಮತ್ತೊಂದು ದೊಡ್ಡ ಅಚ್ಚರಿ ನೀಡಿದ್ದಾರೆ. ಜಿತು ಮಾಧವನ್ ನಿರ್ದೇಶನದ, ಸೂರ್ಯ ನಟನೆಯ ‘ಸೀನ್’ ಚಿತ್ರವು ಇದೇ ನವೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಲಗ್ಗೆಯಿಡಲು ಸಜ್ಜಾಗಿದೆ.

ಆರು ತಿಂಗಳಲ್ಲಿ 3 ಸಿನಿಮಾ

ಇದರೊಂದಿಗೆ, ಕೇವಲ ಆರು ತಿಂಗಳ ಅಂತರದಲ್ಲಿ ಸೂರ್ಯ ನಟನೆಯ ಮೂರು ದೊಡ್ಡ ಚಿತ್ರಗಳು ತೆರೆಕಂಡಂತಾಗುತ್ತದೆ. ಮೇ ತಿಂಗಳಲ್ಲಿ ‘ಕರುಪ್ಪು’ ಬಿಡುಗಡೆಯಾದರೆ, ಆಗಸ್ಟ್‌ನಲ್ಲಿ ‘ವಿಶ್ವನಾಥ್ & ಸನ್ಸ್’ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಇದೀಗ ನವೆಂಬರ್‌ನಲ್ಲಿ ‘ಸೀನ್’ ತೆರೆಗೆ ಬರುತ್ತಿದೆ. ಇಷ್ಟಕ್ಕೇ ನಿಲ್ಲದ ಸೂರ್ಯ, ಮುಂದಿನ ವರ್ಷದ ಆರಂಭದಲ್ಲೂ ಮತ್ತೊಂದು ಚಿತ್ರವನ್ನು ಸಿದ್ಧಪಡಿಸುತ್ತಿದ್ದು, 2027ರಲ್ಲೂ 2 ರಿಂದ 3 ಸಿನಿಮಾಗಳನ್ನು ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಕೇವಲ ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ವಿಭಿನ್ನ ಹಾಗೂ ಗುಣಮಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಎರಡೂ ಚಿತ್ರಗಳನ್ನು ಗೆಲ್ಲಿಸಿರುವ ಸೂರ್ಯ ಅವರ ಈ ಕಾರ್ಯವೈಖರಿ ಗಮನಸೆಳೆಯುತ್ತಿದೆ.

ಎಲ್ಲರಿಗೂ ಇದು ಏಕೆ ಸಾಧ್ಯವಾಗುತ್ತಿಲ್ಲ?

‘ಸೀನ್’ ಚಿತ್ರದ ಟೈಟಲ್ ಗ್ಲಿಂಪ್ಸ್ ಜೊತೆಗೆ ನವೆಂಬರ್ ಬಿಡುಗಡೆಯ ದಿನಾಂಕ ಪ್ರಕಟವಾಗುತ್ತಿದ್ದಂತೆ, ಸಿನಿಪ್ರಿಯರಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೊಂದು ಶುರುವಾಗಿದೆ. ಸೂರ್ಯ ಅವರಂತೆ ಉಳಿದ ಸ್ಟಾರ್ ನಟರು ಏಕೆ ಸಾಲು ಸಾಲಾಗಿ ಚಿತ್ರಗಳನ್ನು ಮಾಡುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ. ಯಾವುದೇ ಭಾರಿ ವಿಎಫ್‌ಎಕ್ಸ್ ಇಲ್ಲದ ಸಾಮಾನ್ಯ ಕಥಾಹಂದರದ ಸಿನಿಮಾಗಳಿಗೂ ಕೆಲ ಸ್ಟಾರ್ ಹೀರೋಗಳು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವುದೇಕೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಗ್ರಪಂಕ್ತಿಯ ನಾಯಕರನ್ನು ಬಿಟ್ಟರೂ, ಕನಿಷ್ಠ ಮಧ್ಯಮ ಕ್ರಮಾಂಕದ ನಟರಾದರೂ ವರ್ಷಕ್ಕೆ 2-3 ಸಿನಿಮಾಗಳನ್ನು ನೀಡುವತ್ತ ಗಮನಹರಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಉದಾಹರಣೆಗೆ, ಕನ್ನಡ ಚಿತ್ರರಂಗದ ಕೆಲ ಸ್ಟಾರ್ ನಟರ ಚಿತ್ರಗಳು ಈ ವರ್ಷ ಒಂದೂ ತೆರೆಕಂಡಿಲ್ಲದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

Vishwanath and Sons : 100 ಕೋಟಿ ರೂ. ಬಾಚಿದ ‘ವಿಶ್ವನಾಥ್ ಆ್ಯಂಡ್ ಸನ್ಸ್’; ಸೂರ್ಯ-ಮಮಿತಾ ಬೈಜು ಜೋಡಿಗೆ ಫ್ಯಾನ್ಸ್‌ ಫಿದಾ

ಕನಿಷ್ಠ 2-3 ಸಿನಿಮಾಗಳು ಬರಬೇಕು

ಸ್ಟಾರ್ ನಟರ ಸಿನಿಮಾಗಳು ನಿರಂತರವಾಗಿ ತೆರೆಕಂಡಾಗ ಮಾತ್ರ ಚಿತ್ರಮಂದಿರಗಳತ್ತ ಜನರನ್ನು ಸೆಳೆಯಲು ಸಾಧ್ಯ. ಇಲ್ಲವಾದರೆ, ದೀರ್ಘಾವಧಿಯ ಗ್ಯಾಪ್‌ನಿಂದಾಗಿ ಪ್ರೇಕ್ಷಕರು ಒಟಿಟಿ (OTT) ವೀಕ್ಷಣೆಗೆ ಹೆಚ್ಚು ಒಗ್ಗಿಕೊಳ್ಳಲಿದ್ದು, ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿಯುವ ಅಪಾಯವಿದೆ. ಸ್ಟಾರ್ ನಟರು ಅತಿ ಹೆಚ್ಚು ಸಮಯ ವ್ಯರ್ಥ ಮಾಡದೆ, ಪಕ್ಕಾ ಪ್ಲ್ಯಾನ್‌ ಮಾಡಿಕೊಂಡು ವರ್ಷಕ್ಕೆ ಕನಿಷ್ಠ ಎರಡು-ಮೂರು ಸಿನಿಮಾಗಳನ್ನು ಬಿಡುಗಡೆ ಮಾಡಿದಾಗ ಮಾತ್ರ ಚಿತ್ರಮಂದಿರಗಳಲ್ಲಿ ಸದಾ ಲವಲವಿಕೆ ಮತ್ತು ವ್ಯಾಪಾರ ಚಟುವಟಿಕೆಗಳು ಜೀವಂತವಾಗಿರಲು ಸಾಧ್ಯ ಎಂಬುದನ್ನು ಸೂರ್ಯ ತಮ್ಮ ವೇಗದ ಮೂಲಕ ಸಾಬೀತುಪಡಿಸಿದ್ದಾರೆ.