ಹೈದರಾಬಾದ್: ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಬುಚಿ ಬಾಬು ಸನಾ (Buchi Babu Sana) ಸದ್ಯ ʼಪೆದ್ದಿʼ (Peddi Movie) ಚಿತ್ರದಲ್ಲಿ ನಿರತರಾಗಿದ್ದಾರೆ. ರಾಮ್ ಚರಣ್ (Ram Charan) ಮತ್ತು ಶಿವ ರಾಜ್‌ಕುಮಾರ್ (Shiva Rajkumar) ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಈ ತೆಲುಗು ಚಿತ್ರ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಮಧ್ಯೆ ಮಲಯಾಳಂ ನಟಿ ಸ್ವಾಸಿಕಾ (Swasika) ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗೆ ಯೂಟ್ಯೂಬ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ 33 ವರ್ಷದ ಅವರು, ತಮಗೆ ʼಪೆದ್ದಿʼ ಚಿತ್ರದಲ್ಲಿ 40 ವರ್ಷದ ರಾಮ್ ಚರಣ್‌ಗೆ ತಾಯಿಯಾಗಿ ನಟಿಸುವ ಆಫರ್ ಬಂದಿತ್ತು ಎಂದಿದ್ದಾರೆ. ಸದ್ಯ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸ್ವಾಸಿಕಾ, ʼಪೆದ್ದಿʼ ಚಿತ್ರದಲ್ಲಿ ರಾಮ್ ಚರಣ್ ಅವರ ತಾಯಿ ಪಾತ್ರಕ್ಕೆ ಆಫರ್ ಬಂದಾಗ ನಿಜಕ್ಕೂ ಅಚ್ಚರಿಯಾಗಿತ್ತು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Peddi Movie: ಮತ್ತೊಮ್ಮೆ ರಗಡ್ ಅವತಾರದಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್; ಶಿವಣ್ಣ ಜತೆಗಿನ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್
ರಾಮ್ ಚರಣ್‌ಗಿಂತ 7 ವರ್ಷ ಚಿಕ್ಕವರು ಸ್ವಾಸಿಕಾ
ʼʼಇತ್ತೀಚೆಗೆ ನನಗೆ ಹಲವು ಚಿತ್ರಗಳಲ್ಲಿನ ತಾಯಿ ಪಾತ್ರದಲ್ಲಿ ನಟಿಸುವಂತೆ ಆಫರ್ ಬರುತ್ತಿದೆ. ಈ ಪೈಕಿ ನನಗೆ ಆಘಾತವಾಗಿದ್ದು, ʼಪೆದ್ದಿʼ ಚಿತ್ರದಲ್ಲಿ ರಾಮ್ ಚರಣ್‌ಗೆ ತಾಯಿಯಾಗಬೇಕು ಎಂದಾಗ. ಇದು ಅದ್ಧೂರಿ ಬಜೆಟ್‌ನ ಚಿತ್ರ ನಿಜ. ಆದರೆ ರಾಮ್ ಚರಣ್‌ನ ತಾಯಿ ಪಾತ್ರ ನಿರ್ವಹಿಸಬೇಕು ಎಂದಾಗ ನಿಜಕ್ಕೂ ಅಚ್ಚರಿಯಾಯ್ತು. ಹೀಗಾಗಿ ನಾನು ಈ ಆಫರ್‌ಗೆ ನೋ ಎಂದಿದ್ದೇನೆʼʼ ಎಂಬುದಾಗಿ ವಿವರಿಸಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಇಂದಿಗೂ ನಟ-ನಟಿಯರ ವಿಚಾರದಲ್ಲಿ ಅಸಮಾನತೆ ಕಂಡು ಬರುತ್ತಿದೆ ಎನ್ನುವ ವಾದವನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ನಿರ್ದಿಷ್ಟ ವಯಸ್ಸು ದಾಟಿದ ಬಳಿಕ ನಟಿಯರ ಬೇಡಿಕೆ ಕಡಿಮೆಯಾಗುತ್ತಿದೆ, ನಾಯಕಿಯರಿಂದ ಪೋಷಕ ಪಾತ್ರಕ್ಕೆ ಸೀಮಿತರಾಗುತ್ತಾರೆ ಎನ್ನುವ ಆರೋಪವನ್ನು ಈ ಘಟನೆ ಮತ್ತೆ ಸಾಬೀತುಪಡಿಸಿದೆ. ಮಗನಿಗಿಂತ ತಾಯಿ 7 ವರ್ಷ ಚಿಕ್ಕವರು ಎಂದು ಹಲವರು ವ್ಯಂಗ್ಯವಾಡಿದ್ದಾರೆ.
ಯಾರು ಈ ಸ್ವಾಸಿಕಾ?
ಮಲಯಾಳಂ ಮೂಲದ ನಟಿ, ನಿರೂಪಕಿ ಸ್ವಾಸಿಕಾ ತಮಿಳು ಮತ್ತು ತೆಲುಗಿನಲ್ಲೂ ನಟಿಸಿದ್ದಾರೆ. 2009ರಲ್ಲಿ ರಿಲೀಸ್ ಆದ ʼವೈಗೈʼ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು 2010ರಲ್ಲಿ ತೆರೆಕಂಡ ʼಫಿಡಲ್ʼ ಮಲಯಾಳಂ ಸಿನಿಮಾದಲ್ಲಿ ನಟಿಸಿದರು. ಜತೆಗೆ ಮಲಯಾಳಂ ಕಿರುತೆರೆಯ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. 2019ರಲ್ಲಿ ಬಿಡುಗಡೆಯಾದ ʼವಾಸಂತಿʼ ಮಲಯಾಳಂ ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕೆ ಸ್ವಾಸಿಕಾ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
2021ರಲ್ಲಿ ತೆರೆಕಂಡ ತೆಲುಗಿನ ʼಉಪ್ಪೇನಾʼ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಿತರಾದ ಬುಚಿ ಬಾಬು ಸನಾ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್ ಈ ʼಪೆದ್ದಿʼ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಈ ಚಿತ್ರ ಮುಂದಿನ ವರ್ಷ ಮಾರ್ಚ್ 27ರಂದು ತೆರೆ ಕಾಣಲಿದೆ. ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಕಾರಣಕ್ಕೂ ಕುತೂಹಲ ಕೆರಳಿಸಿದೆ. ಸುಮಾರು 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ನ ಜಾಹ್ನವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.