ಖ್ಯಾತ ನಟಿ ಸುಮನ್ ರಂಗನಾಥನ್ ವಿರುದ್ಧ 'ತದ್ವಿರುದ್ಧ' ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೂ, ನಟಿಗೆ ನೀಡಬೇಕಾದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ್ದರೂ ಅವರು ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಸಹಕರಿಸುತ್ತಿಲ್ಲ ಎಂದು ನಿರ್ಮಾಣ ಸಂಸ್ಥೆ 'ಚಾರ್ಮಿಯನ್ ಮೋಷನ್ ಪಿಕ್ಚರ್ಸ್' ಆರೋಪಿಸಿದೆ.
ದೂರಿನಲ್ಲೇನಿದೆ?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಲ್ಲಿಸಿರುವ ದೂರಿನ ಪತ್ರದಲ್ಲಿ ಚಿತ್ರತಂಡ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದೆ. "2023ರ ಏಪ್ರಿಲ್ 7 ರಂದು ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಸುಮನ್ ರಂಗನಾಥನ್ ಅವರು ಅಭಿನಯ, ಡಬ್ಬಿಂಗ್ ಹಾಗೂ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿತ್ತು. ಕಳೆದ 30 ದಿನಗಳಿಂದ ನಟಿ ಹಾಗೂ ಅವರ ಮ್ಯಾನೇಜರ್ ಶಿವು ಅವರನ್ನು ಫೋನ್ ಕರೆ, ವಾಟ್ಸಾಪ್ ಸಂದೇಶಗಳ ಮೂಲಕ ಸಂಪರ್ಕಿಸಲು ನಿರಂತರ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ" ಎಂದು ಚಿತ್ರತಂಡ ಹೇಳಿದೆ.
"ತದ್ವಿರುದ್ಧ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲು ನಿಗದಿಯಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರಕ್ಕೆ ಪ್ರಮುಖ ನಟಿ ಲಭ್ಯವಿಲ್ಲದಿರುವುದು ಚಿತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ತರುವ ಸಾಧ್ಯತೆಯಿದೆ. ನಮ್ಮ ಚಿತ್ರದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿಯು ಅಗತ್ಯ ಮಧ್ಯಸ್ಥಿಕೆ ವಹಿಸಬೇಕು. ನಟಿಯೊಂದಿಗೆ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಪರಿಹಾರ ಕಂಡುಕೊಡಬೇಕು" ಎಂದು ನಿರ್ಮಾಪಕರು ಚೇಂಬರ್‌ಗೆ ಮನವಿ ಮಾಡಿದ್ದಾರೆ.
ಜುಲೈ 31ಕ್ಕೆ ತೆರೆಗೆ ‘ತದ್ವಿರುದ್ಧ’
ವಿನೋದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ತದ್ವಿರುದ್ಧ’ ಚಿತ್ರದಲ್ಲಿ ಮುರಳಿ ಹಾಗೂ ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಹಿರಿಯ ಕಲಾವಿದರ ತಾರಾಗಣವಿದೆ. ಸದ್ಯ ಚಿತ್ರತಂಡ ಸಲ್ಲಿಸಿರುವ ಈ ಗಂಭೀರ ಆರೋಪದ ಬಗ್ಗೆ ನಟಿ ಸುಮನ್ ರಂಗನಾಥನ್ ಕಡೆಯಿಂದ ಯಾವ ರೀತಿಯ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಬರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.