ನಟ, ನಿರ್ದೇಶಕ ಸಮುಥಿರಕನಿ ಅವರು ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಕನ್ನಡಕ್ಕೆ ಈ ಹಿಂದೆ ಅವರು ನಿರ್ದೇಶಕರಾಗಿ ಎಂಟ್ರಿ ನೀಡಿದ್ದರು. ಯಾರೇ ಕೂಗಾಡಲಿ ಚಿತ್ರಕ್ಕೆ ಸಮುಥಿರಕನಿ ನಿರ್ದೇಶನ ಮಾಡಿದ್ದರು. ಆದರೆ ಇದೀಗ ಅವರು ನಟರಾಗಿ ಸ್ಯಾಂಡಲ್‌ವುಡ್‌ನ ಕದ ತಟ್ಟಿದ್ದಾರೆ. ಹೌದು, ಕವಳ ಅನ್ನೋ ಹೊಸ ಸಿನಿಮಾದಲ್ಲಿ ವಿಲನ್ ಆಗಿ ಬಣ್ಣ ಹಚ್ಚಲಿದ್ದಾರೆ ಸಮುಥಿರಕನಿ.
ರಾಧಾಕೃಷ್ಣ ಆರ್ಟ್ಸ್ ಮತ್ತು ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ನಿರ್ಮಾಣ ಮಾಡುತ್ತಿರುವ ʻಕವಳʼ ಚಿತ್ರಕ್ಕೆ ಈಚೆಗೆ ಮುಹೂರ್ತ ನಡೆದಿದೆ. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅವರು ಕವಳ ಚಿತ್ರಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ ಆರ್‌ಎಕ್ಸ್ ಸೂರಿ, ಭೈರಾದೇವಿ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಜೈ ಅವರು ಈಗ ಕವಳ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸಂದೀಪ್ ನಾಗರಾಜ್ ಹೀರೋ ಆಗಿರುವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಮುಥಿರಕನಿ ಏನಂದ್ರು ನೋಡಿ!
"ನಾನು ಪುನೀತ್ ರಾಜಕುಮಾರ್ ಅವರ ಜತೆ ಕನ್ನಡದಲ್ಲಿ ಎರಡು ಸಿನಿಮಾ ಮಾಡಿದ್ದು ಮರೆಯಲಾಗದ ಅನುಭವ. ನನಗೂ ಸ್ವಲ್ಪ ಸ್ವಲ್ಪ ಕನ್ನಡ ಸ್ವಲ್ಪ ಬರುತ್ತದೆ. ನನಗೆ ಈ ಕವಳ ಚಿತ್ರದಲ್ಲಿ ಒಂದು ನೆಗೆಟಿವ್ ಪಾತ್ರ ಸಿಕ್ಕಿದೆ. ಈ ತಂಡದ ಜೊತೆಗೆ ಕೆಲಸ ಮಾಡಲು ನಾನು ಕಾತರದಿಂದ ಕಾಯುತ್ತಿದ್ದೇನೆ" ಎನ್ನುತ್ತಾರೆ ಸಮುಥಿರಕನಿ.
ಕವಳ ಅಂದ್ರೇನು?
"ಕವಳ ಎಂದರೆ ತಾಂಬೂಲ.. ಅದನ್ನು ಜಗಿದಾಗ ಬರುವ ಕೆಂಪುಬಣ್ಣವನ್ನು ಚಿತ್ರದಲ್ಲಿ ಹೇಳಿದ್ದೇವೆ. ಒಂದಷ್ಟು ನೈಜಘಟನೆಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ. ಒಂದು ಸ್ಟ್ರಾಂಗ್ ಕಾರಣಕ್ಕೋಸ್ಕರ ಇಲ್ಲಿ ರಕ್ತ ಹರಿಯುತ್ತದೆ. ಯುಗಾದಿ ಹಬ್ಬದ ನಂತರ ಕಾಶಿ, ಹೈದರಾಬಾದ್ ಸೇರಿದಂತೆ ಹಲವಾರು ಜಾಗಗಳಲ್ಲಿ ಚಿತ್ರೀಕರಣ ಮಾಡುವ ಯೋಜನೆ ಇದೆ. ಹೊರರಾಜ್ಯದಿಂದ ಇಲ್ಲಿಗೆ ಬಂದವರು ಹೇಗೆ ಕನ್ನಡ ಮಾತಾಡುತ್ತಾರೋ, ಅದೇ ರೀತಿ ಸಮುಥಿರಕನಿ ಡೈಲಾಗ್‌ಗಳು ಇರಲಿವೆ. ನಿರ್ಮಾಪಕರು ನನ್ನನ್ನು ನಂಬಿ ದೊಡ್ಡ ಮಟ್ಟದ ಬಂಡವಾಳ ಹಾಕುತ್ತಿದ್ದಾರೆ. ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿಬಂದಿದೆ" ಎನ್ನುತ್ತಾರೆ ನಿರ್ದೇಶಕ ಶ್ರೀ ಜೈ.
ಕವಳ ಚಿತ್ರಕ್ಕೆ ಎ. ಕರುಣಾಕರನ್ ಅವರ ಛಾಯಾಗ್ರಹಣ ಇದ್ದು, ಕೆ. ಕೆ. ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅರ್ಜುನ್ ರಾಜ್, ವಿಕ್ರಮ್ ಮೋರ್ ಅವರ ಸಾಹಸ, ಕಲೈ, ಮುರಳಿ ಅವರ ನೃತ್ಯ, ದೀಪು ಎಸ್.ಕುಮಾರ್ ಅವರ ಈ ಚಿತ್ರಕ್ಕೆ ಸಂಕಲನವಿದೆ. ಉಳಿದಂತೆ ಕವಳ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಈಶ್ವರಿ ರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್, ಗಿಲ್ಲಿ ನಟ, ಪ್ರಕಾಶ್ ತುಮ್ಮಿನಾಡ್ ಹಾಗೂ ಇತರರು ನಟಿಸುತ್ತಿದ್ದಾರೆ.