ತಮಿಳುನಾಡು ರಾಜಕಾರಣದ ಚಿತ್ರವನ್ನೇ ಬದಲಿಸಿದ್ದಾರೆ ನಟ ʻದಳಪತಿʼ ವಿಜಯ್. ಕುಟುಂಬ ರಾಜಕಾರಣದ ವಿರುದ್ಧ ʻಕತ್ತಿʼ ಬೀಸಿರುವ ವಿಜಯ್, ತಮ್ಮ ಎದುರಾಳಿಗೆ ʻಮಾಸ್ಟರ್ʼ ಸ್ಟ್ರೋಕ್ ಕೊಟ್ಟಿದ್ದಾರೆ. ತಮಿಳುನಾಡಿನ ಮುಂದಿನ ʻಜನ ನಾಯಗನ್ʼ ನಾನೇ ಎಂಬುದನ್ನು ದೊಡ್ಡದಾಗಿಯೇ ವಿಜಯ್ ಹೇಳಿದ್ದಾರೆ. ವಿಜಯ್ ಹೀಗೆ ರಾಜಕೀಯಕ್ಕೆ ಬರಬೇಕು ಎಂಬುದು ತಂದೆ ಎಸ್ ಎ ಚಂದ್ರಶೇಖರ್ ಅವರ ಬಹುದಿನಗಳ ಆಸೆ ಆಗಿತ್ತು. ಅದೆಲ್ಲವೂ ನೆರವೇರಿದೆ. ಸದ್ಯ ತಮಿಳುನಾಡಿನ ಮುಂದಿನ ಸಿಎಂ ಆಗುವತ್ತ ಹೆಜ್ಜೆ ಇಡುತ್ತಿರುವ ನಟ ವಿಜಯ್ ಅವರ ಧಾರ್ಮಿಕ ಹಿನ್ನೆಲೆಯ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
ವಿಜಯ್ ಹಿಂದೂನಾ? ಕ್ರಿಶ್ಚಿಯನ್ ಹಾ?
ಸದ್ಯ ಇಂಥದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ವಿಜಯ್ ಕ್ರಿಶ್ಚಿಯನ್. ಅವರ ಪೂರ್ಣ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ಆದರೆ ಈಗ ಧರ್ಮದ ಚರ್ಚೆ ಹುಟ್ಟಲು ಕಾರಣ, ವಿಜಯ್ ಅವರ ಕುಟುಂಬ. ಹೌದು, ವಿಜಯ್ ಅವರ ತಂದೆ, ನಿರ್ದೇಶಕ ಎಸ್ ಎ ಚಂದ್ರಶೇಖರ್ ಕ್ರಿಶ್ಚಿಯನ್. ಆದರೆ ಅವರು ಮದುವೆಯಾಗಿದ್ದು ಹಿಂದೂ ಧರ್ಮದ ಶೋಭಾ ಅವರನ್ನು. ಹೀಗೆ ಕ್ರೈಸ್ತ ಮತ್ತು ಹಿಂದೂ ದಂಪತಿಗೆ ಜನಿಸಿದ ವಿಜಯ್ ಮುಂದೆ ಮದುವೆಯಾಗಿದ್ದು ಶ್ರೀಲಂಕಾ ಮೂಲದ ತಮಿಳು ಹಿಂದೂ ಕುಟುಂಬಕ್ಕೆ ಸೇರಿದ ಸಂಗೀತಾ ಅವರನ್ನು. 1999ರಲ್ಲಿ ವಿಜಯ್ ಮತ್ತು ಸಂಗೀತಾ ಅವರ ವಿವಾಹವು 1999 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಪದ್ಧತಿಗಳ ಪ್ರಕಾರ ನಡೆದಿತ್ತು.
"ಇಡೀ ತಮಿಳುನಾಡಿಗೇ ಆತ ಮಗ ಇದ್ದಂತೆ"; ಟಿವಿಕೆ ಗೆಲುವಿನ ಬಳಿಕ ವಿಜಯ್ ತಂದೆ ಹೇಳಿದ್ದೇನು?
ಮನೆಯಲ್ಲಿ ಎರಡೂ ಧರ್ಮಗಳ ಆಚರಣೆ
ವಿಜಯ್ ಅವರು ಕ್ರಿಶ್ಚಿಯನ್ ಆಗಿದ್ದರೂ, ಮನೆಯಲ್ಲಿ ಎರಡೂ ಧರ್ಮದ ಆಚರಣೆ ಮಾಡಲಾಗುತ್ತಿದೆ. ಚರ್ಚ್‌ಗಳಿಗೆ ಹೋಗುವಂತೆ ದೇವಸ್ಥಾನಗಳಿಗೂ ವಿಜಯ್ ಭೇಟಿ ನೀಡುತ್ತಾರೆ. ದೇವರ ದರ್ಶನ ಮಾಡುತ್ತಾರೆ. ಇನ್ನು, ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರು ಸಾಯಿ ಬಾಬಾಗೆ ದೊಡ್ಡ ಭಕ್ತೆ. ಸಾಯಿ ಬಾಬಾರನ್ನು ತುಂಬ ಆರಾಧಿಸುತ್ತಾರೆ.
ಆ ಹಿನ್ನೆಲೆಯಲ್ಲಿ ಅಮ್ಮನಿಗಾಗಿಯೇ ಒಂದು ಸಾಯಿ ಬಾಬಾ ದೇವಸ್ಥಾನವನ್ನು ವಿಜಯ್ ಕಟ್ಟಿಸಿದ್ದರು.ಚೆನ್ನೈನ ಕೊರಟ್ಟೂರಿನಲ್ಲಿ ಈ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆಯನ್ನು 2024ರ ಫೆಬ್ರವರಿಯಲ್ಲಿ ಮಾಡಲಾಗಿತ್ತು. ವಿಜಯ್ ಕೂಡ ಈ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲ, ಸಾಯಿ ಬಾಬಾಗೆ ತಮ್ಮ ತಾಯಿ ಭಕ್ತೆ ಆಗಿರುವುದರಿಂದ, ಎಲ್ಲೇ ಸಾಯಿ ಬಾಬಾ ದೇವಸ್ಥಾನ ಕಂಡರೂ, ವಿಜಯ್ ಅಲ್ಲಿಗೆ ಭೇಟಿ ನೀಡುತ್ತಾರಂತೆ.
ಹಿಂದೊಮ್ಮೆ ವಿಜಯ್ ತಂದೆ ಏನ್ ಹೇಳಿದ್ರು ಗೊತ್ತಾ?
"ನಾನು ಕ್ರಿಶ್ಚಿಯನ್ ಆಗಿ ಜನಿಸಿದವನು. ನನ್ನ ಪತ್ನಿ ಶೋಭಾ ಹಿಂದೂ ಧರ್ಮದವಳು. ನಾನು ಎಂದಿಗೂ ಆಕೆಯ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಾನು ಒಮ್ಮೆ ಜೆರುಸಲೇಂಗೆ ಹೋಗಿದ್ದೇನೆ ಮತ್ತು ಮೂರು ಬಾರಿ ತಿರುಪತಿಗೆ ಭೇಟಿ ನೀಡಿದ್ದೇನೆ. ತಿರುಪತಿಯಲ್ಲಿ ನಾನು ಮುಡಿ ಕೂಡ ಕೊಟ್ಟಿದ್ದೇನೆ. ವಿಜಯ್ ಕೂಡ ಒಬ್ಬ ಹಿಂದೂ ಹುಡುಗಿಯನ್ನು (ಸಂಗೀತಾ) ವಿವಾಹವಾಗಿದ್ದಾನೆ. ನಮ್ಮ ಮನೆಯಲ್ಲಿ ದೊಡ್ಡ ಪೂಜಾ ಕೋಣೆಯಿದೆ" ಎಂದು ವಿಜಯ್ ತಂದೆ ಚಂದ್ರಶೇಖರ್ ಹೇಳಿದ್ದರು.