ತಮಿಳುನಾಡಿನ ಮುಖ್ಯಮಂತ್ರಿ, ನಟ 'ದಳಪತಿ' ವಿಜಯ್ ಅವರ ನಟನಾ ವೃತ್ತಿಜೀವನದ ಕೊನೆಯ ಸಿನಿಮಾ ಎನಿಸಿಕೊಂಡಿರುವ ‘ಜನ ನಾಯಗನ್’ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ದಾಖಲೆಗಳನ್ನು ಬರೆಯಲು ವಿಫಲವಾಗಿದೆ. ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಕಳಪೆ ಪ್ರದರ್ಶನ ಕಂಡ ಪರಿಣಾಮ ಮೊದಲ ದಿನ ವಿಶ್ವದಾದ್ಯಂತ 100 ಕೋಟಿ ರೂ. ಗಡಿ ದಾಟಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ.
ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಬೆಳಗಿನ ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದರೂ, ಉತ್ತರ ಭಾರತ ಹಾಗೂ ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಹವಾ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಮೊದಲ ದಿನ ದೇಶಾದ್ಯಂತ 41 ಕೋಟಿ ರೂ. ಗಳಿಕೆ ಆಗಿದೆ. ಈ ಮೂಲಕ ಭಾರತದಲ್ಲಿ ಅತ್ಯಧಿಕ ಓಪನಿಂಗ್ ಪಡೆದ ಟಾಪ್ 5 ತಮಿಳು ಸಿನಿಮಾಗಳು ಹಾಗೂ ವಿಜಯ್ ಅಭಿನಯದ ಟಾಪ್ 3 ಸಿನಿಮಾಗಳ ಪಟ್ಟಿಯಲ್ಲಿ ‘ಜನ ನಾಯಗನ್’ ಜಾಗ ಪಡೆಯುವಲ್ಲಿ ವಿಫಲವಾಗಿದೆ.
ವಿದೇಶಗಳಲ್ಲಿ ಚಿತ್ರ ಕೊಂಚ ಚೇತರಿಸಿಕೊಂಡಿದ್ದು, ಉತ್ತರ ಅಮೆರಿಕದಲ್ಲಿ $2 ಮಿಲಿಯನ್ ಹಾಗೂ ಇತರ ದೇಶಗಳಲ್ಲಿ $1 ಮಿಲಿಯನ್‌ಗೂ ಹೆಚ್ಚು ಗಳಿಸಿ, ವಿದೇಶಿ ಮಾರುಕಟ್ಟೆಯಿಂದ ಒಟ್ಟು $3.2 ಮಿಲಿಯನ್ ಬಾಚಿಕೊಂಡಿದೆ. ಆ ಮೂಲಕ ಮೊದಲ ದಿನ ಪ್ರಪಂಚದಾದ್ಯಂತ ಒಟ್ಟು 78 ಕೋಟಿ ರೂ. ಕಲೆಕ್ಷನ್ ಮಾಡಿದೆ. ₹100 ಕೋಟಿ ದಾಟುವ ನಿರೀಕ್ಷೆಯಿದ್ದ ಚಿತ್ರವು 78 ಕೋಟಿ ರೂ.ಗಳಿಗೆ ಸೀಮಿತಗೊಂಡಿದ್ದರಿಂದ, ಅತ್ಯಧಿಕ ಓಪನಿಂಗ್ ಪಡೆದ ಭಾರತೀಯ ಸಿನಿಮಾಗಳ 'ಟಾಪ್ 25' ಪಟ್ಟಿಯಿಂದಲೂ ಹೊರಬಿದ್ದಿದೆ.
Trisha Krishnan: 'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!
ಕಲೆಕ್ಷನ್ ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಈ ಸಿನಿಮಾ ಏಪ್ರಿಲ್‌ನಲ್ಲೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಆಗಲೇ ಸುಮಾರು 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಇದು ಮೊದಲ ದಿನದ ಕಲೆಕ್ಷನ್‌ಗೆ ಭಾರಿ ಹೊಡೆತ ನೀಡಿದೆ. ಸದ್ಯ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದು ಮತ್ತು ತಮಿಳುನಾಡಿನ ಹೊರಗೆ ಮತ್ತು ತೆಲುಗು, ಹಿಂದಿ ಡಬ್ ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಾಣದಿರುವುದು ಕೂಡ ಒಂದು ಪ್ರಮುಖ ಕಾರಣ.
ವಿಜಯ್ ಅವರ ಕೊನೆಯ ಚಿತ್ರ
ಎಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ (CBFC) ಪ್ರಮಾಣಪತ್ರ ವಿಳಂಬವಾದ ಕಾರಣ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ವಿಜಯ್ ಅವರ 'ಟಿವಿಕೆ' ಪಕ್ಷವು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ವಿಜಯ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ವಿಜಯ್ ಅವರ ಪೂರ್ಣಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ಬಂದ ಈ ಕೊನೆಯ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಮುಂತಾದವರು ನಟಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.