ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಇನ್ನೂ ಕೂಡ ಸೆನ್ಸಾರ್ ಸಮಸ್ಯೆಯಿಂದ ಹೊರಗೆಬಂದಿಲ್ಲ. ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗದೇ ಇರುವ ಕಾರಣ, ರಿಲೀಸ್ ಯಾವಾಗ ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಈ ಮಧ್ಯೆ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿ ಮಾಡಿದ್ದ ಎಲ್ಲಾ ವಿತರಕರ ಜೊತೆಗಿನ ಒಪ್ಪಂದವನ್ನು ರದ್ದು ಮಾಡಲಾಗಿದೆಯಂತೆ! ಅರೇ, ದಿಢೀರ್ ಅಂತ ಇಂಥ ನಿರ್ಧಾರವನ್ನು ಕೈಗೊಂಡಿದ್ದೇಕೆ? ಮುಂದೆ ಓದಿ.
ವಿತರಕರ ನಷ್ಟ ತಪ್ಪಿಸಲು ಈ ನಿರ್ಧಾರ
ಹೌದು, ಎಚ್. ವಿನೋದ್ ನಿರ್ದೇಶನದ ಸಾಮಾಜಿಕ-ರಾಜಕೀಯ ಕಥಾಹಂದರ ಹೊಂದಿರುವ ಈ ಪೊಲಿಟಿಕಲ್ ಡ್ರಾಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಸೆನ್ಸಾರ್ ಸರ್ಟಿಫಿಕೇಟ್ ವಿಳಂಬ ಹಾಗೂ ಇತರ ತಾಂತ್ರಿಕ ತೊಂದರೆಗಳಿಂದಾಗಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ವಿತರಕರ ಆಗುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ದಳಪತಿ ವಿಜಯ್ ಅವರೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
CM vijay: 'ಜನ ನಾಯಗನ್' ಸಿನಿಮಾ ಬಿಡುಗಡೆ ಯಾವಾಗ? ʻಸತ್ಯ ಹೇಳೋಕೆ ನಂಗೂ ಧೈರ್ಯ ಇಲ್ಲʼ ಎಂದ ನಿರ್ದೇಶಕ ಎಚ್. ವಿನೋದ್
ಅಂದುಕೊಂಡ ಸಮಯಕ್ಕೆ ಸಿನಿಮಾ ಬಂದಿಲ್ಲ!
ಸೆನ್ಸಾರ್ ಸರ್ಟಿಫಿಕೇಟ್ ಸಿಗುವಲ್ಲಿ ಎದುರಾದ ವಿವಾದದಿಂದಾಗಿ ಕಳೆದ 6 ತಿಂಗಳಿನಿಂದ ಸಿನಿಮಾದ ರಿಲೀಸ್ ಮುಂದೂಡಲ್ಪಡುತ್ತಿದೆ. ತಮಿಳುನಾಡಿನ ವಿವಿಧ ಭಾಗಗಳ ಬೈಯರ್ಸ್ ಹಾಗೂ ಡಿಸ್ಟ್ರಿಬ್ಯೂಟರ್ಸ್ (ವಿತರಕರು) ಈ ಚಿತ್ರದ ಥಿಯೇಟ್ರಿಕಲ್ ಹಕ್ಕುಗಳನ್ನು ಭಾರಿ ಮೊತ್ತ ಮುಂಗಡ ಹಣ ನೀಡಿ ಖರೀದಿಸಿದ್ದರು. ಆದರೆ ಸಿನಿಮಾ ಅಂದುಕೊಂಡ ಸಮಯಕ್ಕೆ ಬಾರದೇ ಇರುವುದು, ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೇ ಇರುವುದರಿಂದ, ಹಣ ನೀಡಿದ ವಿತರಕರು ಭಾರಿ ನಷ್ಟ ಅನುಭವಿಸುವಂತಾಗಿದೆ.
ಸೂಚನೆ ಕೊಟ್ಟ ದಳಪತಿ ವಿಜಯ್
ನಮ್ಮ ಸಿನಿಮಾದಿಂದಾಗಿ ವಿತರಕರು ನಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದುವರೆಗೆ ನಡೆದಿರುವ ಎಲ್ಲಾ ಥಿಯೇಟ್ರಿಕಲ್ ಮತ್ತು ನಾನ್-ಥಿಯೇಟ್ರಿಕಲ್ ಒಪ್ಪಂದಗಳನ್ನು ತಕ್ಷಣವೇ ರದ್ದುಗೊಳಿಸಿ, ವಿತರಕರಿಂದ ಪಡೆದಿರುವ ಮುಂಗಡ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸುವಂತೆ ನಿರ್ಮಾಪಕರಿಗೆ ವಿಜಯ್ ಸೂಚನೆ ನೀಡಿದ್ದಾರೆ.
ಜನ ನಾಯಗನ್ ಸಿನಿಮಾ ಕುರಿತ ಟ್ವೀಟ್
ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾದ ಮೇಲೆ ಸ್ವಂತವಾಗಿ ರಿಲೀಸ್ ಮಾಡಲು ನಿರ್ಮಾಪಕರಿಗೆ ವಿಜಯ್ ಸಲಹೆ ನೀಡಿದ್ದಾರಂತೆ. ಈ ಸಂಬಂಧ ನಿರ್ಮಾಪಕರು ತಕ್ಷಣವೇ ತುರ್ತು ಸಭೆ ನಡೆಸಿ, ವಿತರಕರಿಂದ ಪಡೆದ ಮುಂಗಡ ಹಣವನ್ನು ವಾಪಸ್ ನೀಡುವುದರ ಜೊತೆಗೆ, ಕಳೆದ 6 ತಿಂಗಳ ಅವಧಿಗೆ ಅನ್ವಯಿಸುವಂತೆ ಬಡ್ಡಿಯನ್ನು ಸೇರಿಸಿ ನೀಡಲು ನಿರ್ಧರಿಸಿದ್ದಾರಂತೆ.
ಜನ ನಾಯಗನ್ ಬಗ್ಗೆ..
ಜನ ನಾಯಗನ್ ಸಿನಿಮಾದಲ್ಲಿ ವಿಜಯ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಉಳಿದಂತೆ ಮಮಿತಾ ಬೈಜು, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಚಿತ್ರವು ಸುಮಾರು 400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆಯಂತೆ.