ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಸಿನಿಮಾಗಳು ಅಷ್ಟಾಗಿ ಜಾದೂ ಮಾಡುತ್ತಿಲ್ಲ. ಆದರೆ ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಪರಭಾಷಾ ಚಿತ್ರಗಳು ಕರುನಾಡಿನ ಸಿನಿಮಾ ಮಾರ್ಕೆಟ್‌ನಲ್ಲಿ ಕೋಟಿ ಕೋಟಿ ಲೂಟಿ ಎಬ್ಬಿಸಲು ಮುಂದಾಗಿವೆ. ತಮಿಳು ನಟ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಹಾಗೂ ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಚಿತ್ರಗಳ ಟಿಕೆಟ್ ದರ ಬೆಂಗಳೂರಿನಲ್ಲಿ ಗಗನಕ್ಕೇರಿದ್ದು, ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
42 ಶೋಗಳಿಂದಲೇ 1.90 ಕೋಟಿ ರೂ. ಬಾಚಿದ 'ಜನ ನಾಯಗನ್'!
ಸಿಎಂ ವಿಜಯ್ ನಟನೆಯ 'ಜನ ನಾಯಗನ್' ಚಿತ್ರದ ಮೇಲಿನ ಹೈಪ್ ಸದ್ಯ ಜೋರಾಗಿದೆ. ತಮಿಳುನಾಡಿನಲ್ಲಿ ಇನ್ನು ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಬೇಕಾಗಿದ್ದರೂ, ಬೆಂಗಳೂರಿನಲ್ಲಿ ಈಗಾಗಲೇ ಸದ್ದಿಲ್ಲದೆ ಬುಕಿಂಗ್ ಪ್ರಕ್ರಿಯೆ ಶುರುವಾಗಿದೆ. ಜುಲೈ 16 ರಂದು ಬೆಂಗಳೂರಿನ ಆಯ್ದ ಚಿತ್ರಮಂದಿರಗಳಲ್ಲಿ ಮುಂಗಡ ಬುಕಿಂಗ್ ಮುಕ್ತಾಯಗೊಳಿಸಲಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನದ ಮುಂಜಾನೆ 6 ಮತ್ತು 6.30ರ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಇದು ವಿಜಯ್ ಅವರ ಮೇಲಿರುವ ಕ್ರೇಜ್ ರಾಜ್ಯದ ಗಡಿಗಳನ್ನು ಮೀರಿದ್ದೆಂದು ಸಾಬೀತುಪಡಿಸಿದೆ.
ಕರ್ನಾಟಕದಲ್ಲಿ ಈವರೆಗೂ 20 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿರುವ ಮಾಹಿತಿ ಇದ್ದು, ಈ ಚಿತ್ರವು ಕೇವಲ 42 ಶೋಗಳಿಂದಲೇ ಈಗಾಗಲೇ 1.90 ಕೋಟಿ ರೂ. ಮೌಲ್ಯದ ಮುಂಗಡ ಟಿಕೆಟ್ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಈವರೆಗೂ ಕೇವಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲೇ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿದೆ. ದುರಂತ ಎಂದರೆ, ಸಾಮಾನ್ಯವಾಗಿ 120 ರೂ. ಹಾಗೂ 150 ರೂ. ಟಿಕೆಟ್‌ಗೆ ಚಾರ್ಜ್ ಮಾಡುತ್ತಿದ್ದ ಈ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು, 'ಜನ ನಾಯಗನ್' ಸಿನಿಮಾದ ಟಿಕೆಟ್‌ಗಳಿಗೆ ಬರೋಬ್ಬರಿ 800 ರೂ. ನಿಂದ 1,000 ರೂ. ವರೆಗೆ ಲೂಟಿ ಮಾಡುತ್ತಿವೆ. ತಮಿಳುನಾಡಿನಲ್ಲಿ ಸಿನಿಮಾಗಳ ಟಿಕೆಟ್‌ಗೆ 200 ರೂ. ಒಳಗಡೆ ಚಾರ್ಜ್ ಮಾಡಲಾಗುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಈ ರೀತಿ ಹಗಲು ದರೋಡೆ ನಡೆಯುತ್ತಿರುವುದು ಸಿನಿಮಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡು ತನ್ನ ಎಂದಿನ ಸಂಪ್ರದಾಯವನ್ನು ಅನುಸರಿಸಿ ಬೆಳಿಗ್ಗೆ 9 ಗಂಟೆಯ ಶೋಗಳೊಂದಿಗೆ ಬುಕಿಂಗ್ ಆರಂಭಿಸುವ ನಿರೀಕ್ಷೆಯಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಮುಂಜಾನೆ 6 ಗಂಟೆಯ ಶೋಗಳನ್ನು ನೀಡಲಾಗಿದ್ದು, ಅಭಿಮಾನಿಗಳು ಈ ಮುಂಜಾನೆಯ ಸ್ಲಾಟ್‌ಗಳನ್ನು ಬುಕ್ ಮಾಡಲು ಮುಗಿಬೀಳುತ್ತಿದ್ದಾರೆ.
ಹಾಲಿವುಡ್ ಚಿತ್ರ 'ದಿ ಒಡಿಸ್ಸಿ' ಟಿಕೆಟ್ ದರ 1,950 ರೂ.!
ಕೇವಲ ʻಜನ ನಾಯಗನ್ʼ ಮಾತ್ರವಲ್ಲದೆ, ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಚಿತ್ರದ ಟಿಕೆಟ್‌ಗಳಿಗೂ ಬೆಂಗಳೂರಿನಲ್ಲಿ ದುಬಾರಿ ಬೆಲೆ ನಿಗದಿ ಮಾಡಲಾಗಿದೆ. ಈ ಚಿತ್ರವು ಈಗಾಗಲೇ ಭಾರತದ ಸಿನಿಮಾ ಪ್ರೇಮಿಗಳ ನಡುವೆ ಅತಿ ದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಚಿತ್ರದ ಮೇಲಿರುವ ಕ್ರೇಜ್ ಮುಂಗಡ ಬುಕಿಂಗ್‌ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು, ವಿಶೇಷವಾಗಿ ಐಮ್ಯಾಕ್ಸ್ (IMAX) ಪ್ರದರ್ಶನಗಳ ಪ್ರೀಮಿಯಂ ಟಿಕೆಟ್‌ಗಳು ಅತ್ಯಂತ ವೇಗವಾಗಿ ಖಾಲಿಯಾಗುತ್ತಿವೆ.
ಇದೇ ಸಮಯದಲ್ಲಿ, ಇಲ್ಲಿನ ಟಿಕೆಟ್ ದರಗಳು ಅನೇಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದು, ಪ್ರೇಕ್ಷಕರು ಸಾಮಾನ್ಯವಾಗಿ ಸಿನಿಮಾಕ್ಕೆ ಪಾವತಿಸುವ ದರಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಬೆಂಗಳೂರಿನ ಸಿನಿಪೊಲಿಸ್ ನೆಕ್ಸಸ್ ಶಾಂತಿನಿಕೇತನದಲ್ಲಿ ಟಿಕೆಟ್ ದರ ಬರೋಬ್ಬರಿ 1,950 ರೂ. ವರೆಗೆ ತಲುಪಿದ್ದರೆ, ಪಿವಿಆರ್ ವಿಆರ್ ಬೆಂಗಳೂರಿನಲ್ಲಿ (PVR VR Bengaluru) ಬೆಲೆಗಳು 1,200 ರೂ. ನಿಂದ 1,850 ರೂ. ವರೆಗಿನ ವ್ಯಾಪ್ತಿಯಲ್ಲಿವೆ.
ಒಟ್ಟಾರೆಯಾಗಿ, ಸ್ಥಳೀಯ ಸಿನಿಮಾಗಳ ಮಂಕಾದ ವಾತಾವರಣದ ನಡುವೆ, ಪರಭಾಷಾ ಸಿನಿಮಾಗಳು ಬೆಂಗಳೂರಿನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡು ಪ್ರೇಕ್ಷಕರನ್ನು ರಾಜಾರೋಷವಾಗಿ ಸುಲಿಗೆ ಮಾಡುತ್ತಿವೆ.