ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ರಾತ್ರಿಗೆ ತಮಿಳು ಸಿನಿಮಾಗಳ ಲೆಕ್ಕಾಚಾರ ಬದಲಿಸಿದ ʻಜನ ನಾಯಗನ್‌ʼ; ಸಿಎಂ ʻದಳಪತಿʼ ವಿಜಯ್‌ ಅಬ್ಬರಕ್ಕೆ ಸೈಡ್‌ಗೆ ಹೋದ ಚಿತ್ರಗಳಿವು!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ವೃತ್ತಿಬದುಕಿನ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಸಾಲು ಸಾಲು ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದೂಡಿಕೊಂಡಿದ್ದು, ಚಿತ್ರರಂಗದ ಕ್ಯಾಲೆಂಡರ್ ಸಂಪೂರ್ಣ ಬದಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ, ನಟ ʻದಳಪತಿʼ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸೆನ್ಸಾರ್ ಮಂಡಳಿ (CBFC) ಜೊತೆಗಿನ ಸುದೀರ್ಘ ಸಂಘರ್ಷದ ನಂತರ, ಕೊನೆಗೂ ಚಿತ್ರವು ಜುಲೈ 23ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ. ಆದರೆ, ಚಿತ್ರತಂಡ ಅಧಿಕೃತವಾಗಿ ರಿಲೀಸ್‌ ಡೇಟ್‌ ಘೋಷಣೆ ಮಾಡುತ್ತಿದ್ದಂತೆಯೇ ಕಾಲಿವುಡ್‌ನಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದ್ದು, ಹಲವು ಚಿತ್ರಗಳು ವಿಜಯ್ ಅಬ್ಬರಕ್ಕೆ ಹೆದರಿ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿವೆ.

ರಿಲೀಸ್ ರೇಸ್‌ನಿಂದ ಹಿಂದೆ ಸರಿದ ಪ್ರಮುಖ ಚಿತ್ರಗಳು

ಇಮ್ಮಾರ್ಟಲ್: ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ನಟನೆಯ ಈ ಸಿನಿಮಾ ಜುಲೈ 17ಕ್ಕೆ ರಿಲೀಸ್‌ ಆಗಬೇಕಿತ್ತು. ಆದರೆ ವಿಜಯ್ ಚಿತ್ರದ ಅಬ್ಬರದಿಂದಾಗಿ ಈಗ ಸೆಪ್ಟೆಂಬರ್ 4ಕ್ಕೆ ಪೋಸ್ಟ್‌ಪೋನ್‌ ಆಗಿದೆ.

ದ ಡಾರ್ಕ್ ಹೆವನ್: ಜುಲೈ 17 ರಂದೇ ಚಿತ್ರಮಂದಿರಕ್ಕೆ ಬರಬೇಕಿದ್ದ ಈ ಸಿನಿಮಾ ಕೂಡ ಸದ್ಯಕ್ಕೆ ಮುಂದೂಡಲ್ಪಟ್ಟಿದೆ.

ಡಿಸಿ: ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ‘ಡಿಸಿ’ ಸಿನಿಮಾ ಜುಲೈ 31ರ ಬದಲಾಗಿ ಆಗಸ್ಟ್ 7ಕ್ಕೆ ಶಿಫ್ಟ್ ಆಗಿದೆ.

ಸಿಗ್ಮಾ: ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಮೊದಲ ಸಿನಿಮಾ ‘ಸಿಗ್ಮಾ’ ಜುಲೈ 31ಕ್ಕೆ ರಿಲೀಸ್‌ ಆಗಬೇಕಿತ್ತು, ಆದರೆ ಇದೀಗ ಆಗಸ್ಟ್‌ ತಿಂಗಳಿಗೆ ಮುಂದೂಡಲ್ಪಟ್ಟಿದೆ.

ಜಿಡಿಎನ್: ನಟ ಆರ್‌. ಮಾಧವನ್ ಅವರ ಈ ಚಿತ್ರವು ಜುಲೈ 17 ಕ್ಕೆ ಬರುವ ಬಗ್ಗೆ ಚರ್ಚೆಗಳು ನಡೆದಿದ್ದರೂ, ಈಗ ಸದ್ದಿಲ್ಲದೆ ರಿಲೀಸ್‌ ರೇಸ್‌ನಿಂದ ಹಿಂದೆ ಸರಿದಿದೆ.

ಲೀಕ್ ಆದರೂ ತಗ್ಗದ ಕ್ರೇಜ್!

ಕಳೆದ ಏಪ್ರಿಲ್‌ನಲ್ಲಿಯೇ ‘ಜನ ನಾಯಗನ್‌’ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್‌ ಆಗಿ ಆಘಾತ ಮೂಡಿಸಿತ್ತು. ಆದಾಗ್ಯೂ, ಥಿಯೇಟರ್‌ಗಳಲ್ಲಿ ಈ ಚಿತ್ರಕ್ಕಿರುವ ಭಾರಿ ಕ್ರೇಜ್ ಹಾಗೂ ಅಡ್ವಾನ್ಸ್ ಬುಕ್ಕಿಂಗ್ ಬೇಡಿಕೆಯು ಇಡೀ ಚಿತ್ರರಂಗವನ್ನು ಅಚ್ಚರಿಗೊಳಿಸಿದೆ. ಈ ಸಿನಿಮಾ ತಮಿಳುನಾಡಿನಾದ್ಯಂತ ಬಹುತೇಕ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ.

Jana Nayagan: ಸಿಎಂ ʻದಳಪತಿʼ ವಿಜಯ್ ಸಿನಿಮಾಕ್ಕಾಗಿ ಪೋಸ್ಟ್‌ಪೋನ್‌ ಆಗುತ್ತಾ ಪುತ್ರ ಜೇಸನ್ ಸಂಜಯ್ ಚೊಚ್ಚಲ ಚಿತ್ರ ʻಸಿಗ್ಮಾʼ?

ಇದು ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಆಗಿರುವುದರಿಂದ ಇದರ ಮೇಲಿರುವ ನಿರೀಕ್ಷೆಗಳು ದೊಡ್ಡಮಟ್ಟದಲ್ಲಿವೆ. ಹೀಗಾಗಿ ಬೇರೆ ಚಿತ್ರಗಳ ಮುಂದೂಡಿಕೆ ಅನಿವಾರ್ಯವಾಗಿತ್ತು ಎಂದು ಚೆನ್ನೈನ ಥಿಯೇಟರ್‌ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ. "ಜನ ನಾಯಗನ್ ಸಿನಿಮಾ ಕೇಳುವಷ್ಟು ಸ್ಕ್ರೀನ್‌ಗಳನ್ನು ನೀಡುವುದು ನ್ಯಾಯೋಚಿತವಾಗಿದೆ. 7 ತಿಂಗಳು ತಡವಾಗಿದ್ದು, ಇದುವರೆಗಿನ ಬಡ್ಡಿ ಮತ್ತು ವಿತರಣಾ ವೆಚ್ಚವನ್ನು ಗಣನೆಗೆ ತೆಗೆದುಕೊಂಡರೆ, ಈ ಬಿಗ್ ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲೇ ಬಿಡುಗಡೆಯಾಗಲು ಅರ್ಹವಾಗಿದೆ" ಎಂದು ಪ್ರದರ್ಶಕರು ಹೇಳುತ್ತಿದ್ದಾರೆ.

Jana Nayagan: ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ; ಮೂವಿ ರಿಲೀಸ್‌ ಯಾವಾಗ?

ಒಂದೇ ರಾತ್ರಿಯಲ್ಲಿ ಬದಲಾದ ಚಿತ್ರರಂಗದ ಕ್ಯಾಲೆಂಡರ್

ಈ ಕುರಿತು ಮಾತನಾಡಿರುವ ಪ್ರಖ್ಯಾತ ಸಿನಿಮಾ ಟ್ರೇಡ್‌ ವಿಶ್ಲೇಷಕ ರಮೇಶ್ ಬಾಲಾ, "ಜನ ನಾಯಗನ್ ತಂಡ ಜುಲೈ 23 ಅನ್ನು ಲಾಕ್ ಮಾಡಿದ ತಕ್ಷಣ ಇಂತಹ ಬದಲಾವಣೆ ನಿರೀಕ್ಷಿತವಾಗಿತ್ತು. ಜುಲೈ ಎರಡನೇ ವಾರ ಹಾಗೂ ಕೊನೆಯ ವಾರದಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರಗಳು ಮುಂದೂಡಲ್ಪಟ್ಟಿವೆ. ಕಳೆದ ನವೆಂಬರ್‌ನಿಂದ ತಮಿಳುನಾಡಿನ ಚಿತ್ರಮಂದಿರಗಳಿಗೆ ಕಠಿಣ ಸಮಯವಾಗಿತ್ತು. ಕಳೆದ 7 ತಿಂಗಳಲ್ಲಿ ಕೇವಲ 5 ಚಿತ್ರಗಳು ಮಾತ್ರ ಯಶಸ್ವಿಯಾಗಿದ್ದವು. ಆದ್ದರಿಂದ, ‘ಜನ ನಾಯಗನ್’ ಸಿನಿಮಾವು ಪ್ರಥಮಾರ್ಧದಲ್ಲಿ ಚಿತ್ರರಂಗಕ್ಕೆ ನಷ್ಟವಾದ ಆದಾಯವನ್ನು 2026ರ ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ತುಂಬಿಕೊಡಲಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.