ʻದಳಪತಿʼ ವಿಜಯ್ ಅವರ ಕೊನೆ ಸಿನಿಮಾ 'ಜನನಾಯಕನ್' ಈಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇನ್ನೂ ತೆರೆಕಾಣದ ದುಬಾರಿ ವೆಚ್ಚದ ಈ ಸಿನಿಮಾವು ಹೀಗೆ ಸೋರಿಕೆ ಆಗಿದ್ದರ ಬಗ್ಗೆ ಭಾರತೀಯ ಚಿತ್ರರಂಗ ಗರಂ ಆಗಿದೆ. ಈ ನಡುವೆ ಲೀಕ್‌ನ ಹಿಂದೆ ಸೆನ್ಸಾರ್ ಮಂಡಳಿ ಇರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಟಿವಿಕೆ ಪಕ್ಷದ ವಿಜಯ್ ಅವರ ಘನತೆಗೆ ಮಸಿ ಬಳಿಯಲು ಸಿಬಿಎಫ್‌ಸಿ (CBFC) ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದೆ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಇದು ಮಂಡಳಿಯ ಕಣ್ತಪ್ಪಿನಿಂದಲೂ ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಈ ಬಗ್ಗೆ ಶನಿವಾರ (ಏ.11) ಪತ್ರಿಕಾ ಮಾಹಿತಿ ಬ್ಯೂರೋ (PIB) ಅಧಿಕೃತ ಹೇಳಿಕೆಯನ್ನು ನೀಡಿ, ಹಬ್ಬಿರುವ ವದಂತಿಯನ್ನು ತಳ್ಳಿಹಾಕಿದೆ. "ತಮಿಳು ಸಿನಿಮಾ 'ಜನ ನಾಯಗನ್' ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಸೋರಿಕೆಯಾಗಿದೆ ಎಂಬ ವರದಿಗಳು ಆಧಾರರಹಿತ ಮತ್ತು ದಾರಿತಪ್ಪಿಸುವಂತವಾಗಿವೆ. ಪ್ರಮಾಣೀಕರಣಕ್ಕಾಗಿ ಸಲ್ಲಿಸಲಾದ ಎಲ್ಲಾ ಚಿತ್ರಗಳಿಗೆ ಮಂಡಳಿಯು ಅತ್ಯಂತ ಸುರಕ್ಷಿತವಾದ ಕೆಡಿಎಂ (Key Delivery Message) ವ್ಯವಸ್ಥೆಯನ್ನು ಅನುಸರಿಸುತ್ತದೆ" ಎಂದು ಸಿಬಿಎಫ್‌ಸಿ ಸ್ಪಷ್ಟಪಡಿಸಿದೆ.
Jana Nayagan: 'ಜನ ನಾಯಗನ್' ದೃಶ್ಯ ಲೀಕ್; ಬೆಂಬಲಕ್ಕೆ ನಿಂತ ತಾರೆಯರು
ಪಾಸ್‌ವರ್ಡ್ ಇಲ್ಲದೇ ಯಾರು ನೋಡಲು ಸಾಧ್ಯವಿಲ್ಲ
"ಚಿತ್ರವನ್ನು ವೀಕ್ಷಣೆ ಮಾಡುವುದಕೆ ಪಾಸ್‌ವರ್ಡ್ ಬಳಕೆ ಮಾಡುತ್ತೇವೆ. ಆ ಮೂಲಕ ಸಿನಿಮಾವು ರಕ್ಷಿಸಲ್ಪಟ್ಟಿರುತ್ತದೆ ಮತ್ತು ಈ ಕೆಡಿಎಂ ಕೇವಲ ನಿರ್ಮಾಪಕರು ಅಥವಾ ಚಲನಚಿತ್ರ ನಿರ್ಮಾಪಕರ ಬಳಿ ಮಾತ್ರ ಇರುತ್ತದೆ. ಮಾನ್ಯವಾದ ಕೆಡಿಎಂ ಇಲ್ಲದೆ ಚಿತ್ರವನ್ನು ವೀಕ್ಷಿಸಲು ಸಾಧ್ಯವಿಲ್ಲ" ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ.
"ಜನ ನಾಯಗನ್ ಚಿತ್ರದ ಡಿಸಿಪಿ (Digital Cinema Package) ಅನ್ನು ಮಾರ್ಚ್ 17 ರಂದು ಮುಂಬೈನಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಲಾಗಿದ್ದು, ಅಂದಿನಿಂದ ಅದು ಅವರ ಬಳಿಯೇ ಇದೆ. ತಮ್ಮ ಬಳಿ ಫೈಲ್‌ನ ಪಾಸ್‌ವರ್ಡ್ ಇಲ್ಲದ ಕಾರಣ ಮತ್ತು ಮಾರ್ಚ್ 17 ರಿಂದ ಚಿತ್ರದ ಫೈಲ್ ತಮ್ಮ ಬಳಿ ಇಲ್ಲದ ಕಾರಣ, ತಮ್ಮ ಕಡೆಯಿಂದ ಸಿನಿಮಾ ಸೋರಿಕೆಯಾಗುವುದು ತಾಂತ್ರಿಕವಾಗಿ ಅಸಾಧ್ಯ" ಎಂದು ಮಂಡಳಿಯು ವಾದಿಸಿದೆ.
Jana Nayagan: ಸ್ಯಾಂಡಲ್‌ವುಡ್ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟಕ್ಕೆ ಮರುಗಿದ ನಟ ʻದಳಪತಿʼ ವಿಜಯ್!
ಇನ್ನು, ಗಮನಿಸಬೇಕಾದ ಅಂಶವೆಂದರೆ, ಕೆವಿಎನ್ ಪ್ರೊಡಕ್ಷನ್ಸ್ ಆಗಲಿ ಅಥವಾ ವಿಜಯ್ ಅವರಾಗಲಿ ಸಿನಿಮಾ ಸೋರಿಕೆಗೆ ಸೆನ್ಸಾರ್ ಮಂಡಳಿಯನ್ನು ನೇರವಾಗಿ ಯಾರೂ ದೂಷಿಸಿಲ್ಲ. ಚಿತ್ರದ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಂಡಳಿಯ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ಸೆನ್ಸಾರ್ ಕ್ಲಿಯರೆನ್ಸ್ ಇಲ್ಲದ ಕಾರಣ ಚಿತ್ರದ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ನಿರ್ಮಾಣ ಸಂಸ್ಥೆ ಜೊತೆಗೆ ವಿಜಯ್ ಕೂಡ ಧ್ವನಿ ಎತ್ತಿದ್ದಾರಷ್ಟೇ.
ಕಾನೂನು ಕ್ರಮ ಗ್ಯಾರಂಟಿ
ಈ ಮಧ್ಯೆ, ಜನ ನಾಯಗನ್ ಸಿನಿಮಾದ ಸೋರಿಕೆಯಾದ ಫೈಲ್ ಅನ್ನು ಹಂಚುವ ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಜನ ನಾಯಗನ್ ಸಿನಿಮಾದ ಲೀಕ್‌ನ ಹಿಂದಿರುವ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ.