ʻದಳಪತಿʼ ವಿಜಯ್ ಅಭಿನಯದ ʻಜನ ನಾಯಗನ್ʼ ಸಿನಿಮಾವು ಜನವರಿ 9ರಂದು ತೆರೆಗೆ ಬರುತ್ತಿದೆ. ಕಾಲಿವುಡ್ ಪಾಲಿಗೆ ಮಾತ್ರವಲ್ಲದೆ, ದಕ್ಷಿಣ ಭಾರತಕ್ಕೆ ಇದೊಂದು ಮಹತ್ವದ ಸಿನಿಮಾವಾಗಿದೆ. ಕಾರಣ, ಇದು ವಿಜಯ್ ಅವರ ಕೊನೆಯ ಸಿನಿಮಾ. ಹಾಗಾಗಿ, ಫ್ಯಾನ್ಸ್‌ಗಂತೂ ಭಾರಿ ನಿರೀಕ್ಷೆ ಇದೆ. ಈ 69ನೇ ಸಿನಿಮಾದೊಂದಿಗೆ ಸಿನಿಮಾ ಬದುಕಿಗೆ ವಿಜಯ್ ವಿದಾಯ ಹೇಳಲಿದ್ದಾರೆ. ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ. ಸದ್ಯ ʻಜನ ನಾಯಗನ್ʼ ಸಿನಿಮಾದ ಬಗ್ಗೆ ಒಂದು ದೊಡ್ಡ ಅನುಮಾನ ಇದೆ. ಇದು ರಿಮೇಕೋ, ಇಲ್ಲ ಸ್ವಮೇಕೋ ಎಂಬ ಪ್ರಶ್ನೆ ಫ್ಯಾನ್ಸ್‌ಗೆ ಕಾಡುತ್ತಿದೆ. ಅದಕ್ಕೀಗ ಉತ್ತರ ಸಿಗುವ ಸಮಯ ಬಂದಿದೆ.
ಜನವರಿ 3ರಂದು ಟ್ರೇಲರ್ ರಿಲೀಸ್
ಜನ ನಾಯಗನ್ ಸಿನಿಮಾವು ತೆಲುಗಿನ ಭಗವಂತ್ ಕೇಸರಿ ಚಿತ್ರದ ರಿಮೇಕ್ ಎಂದು ಆರಂಭದಿಂದಲೂ ಟಾಕ್ ಇದೆ. ಆದರೆ ಚಿತ್ರತಂಡ ಎಲ್ಲಿಯೂ ಕೂಡ ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಅಲ್ಲದೆ, ಜನ ನಾಯಗನ್ ಚಿತ್ರದ ಕೆಲವು ಕಂಟೆಂಟ್‌ಗಳು ಭಗವಂತ್ ಕೇಸರಿ ಚಿತ್ರವನ್ನು ನೆನಪಿಸಿದ್ದು ಸುಳ್ಳಲ್ಲ. ಸದ್ಯ ಜನವರಿ 3ರ ಸಂಜೆ ಜನ ನಾಯಗನ್ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಈವರೆಗೂ ಇದ್ದ ಎಲ್ಲಾ ಅನುಮಾನಗಳಿಗೂ ಬ್ರೇಕ್ ಬೀಳಲಿದೆ. ಇದು ನಿಜವಾಗಿಯೂ ಭಗವಂತ್ ಕೇಸರಿಯ ರಿಮೇಕ್ ಹೌದೋ, ಅಲ್ಲವೋ ಅನ್ನೋದು ಗೊತ್ತಾಗುತ್ತದೆ.
Thalapathy Vijay: ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲು: ಕೆಳಗೆ ಬಿದ್ದ ದಳಪತಿ ವಿಜಯ್
ನಿರ್ದೇಶಕರು ಹೇಳಿದ್ದೇನು?
ಈ ಬಗ್ಗೆ ಜನ ನಾಯಗನ್ ನಿರ್ದೇಶಕ ಎಚ್ ವಿನೋದ್ ಅವರನ್ನು ಪ್ರಶ್ನಿಸಿದಾಗ, "ಈ ಸಿನಿಮಾ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಆಗಿರಲಿ ಅಥವಾ ಕೆಲವು ದೃಶ್ಯಗಳನ್ನು ಅಳವಡಿಸಿಕೊಂಡಿರಲಿ ಅಥವಾ ಕೇವಲ ಒಂದು ದೃಶ್ಯದಿಂದ ಪ್ರೇರಿತವಾಗಿರಲಿ, ಅದು ಏನೇ ಆಗಿದ್ದರೂ, ಪ್ರೇಕ್ಷಕರು ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದು ದಳಪತಿ ವಿಜಯ್ ಅವರ ಸಿನಿಮಾ" ಎಂದು ಹೇಳಿದ್ದರು.
ಜನ ನಾಯಗನ್ ಕುರಿತ ಟ್ವೀಟ್
"ಕೆಲವರು 'ನಾನು ಈಗಾಗಲೇ ಮೂಲ ಚಿತ್ರವನ್ನು ನೋಡಿದ್ದೇನೆ, ಇದನ್ನೇಕೆ ಮತ್ತೆ ನೋಡಬೇಕು?' ಎಂದು ಯೋಚಿಸಬಹುದು. ಇನ್ನು ಕೆಲವರು ಅಸಮಾಧಾನಗೊಳ್ಳಬಹುದು. ಅವರಿಗೆ ನಾನು ಹೇಳುವುದು ಇಷ್ಟೇ, ಒಂದೇ ಒಂದು ಶೋ ನೋಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಟೀಸರ್, ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗುತ್ತಲೇ ಇರುತ್ತವೆ, ಆಗ ನಿಮಗೆ ಎಲ್ಲವೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸದ್ಯಕ್ಕೆ, ನಾನು 'ಹೌದು' ಎಂದೂ ಹೇಳಲಾರೆ, 'ಇಲ್ಲ' ಎಂದೂ ಹೇಳಲಾರೆ" ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು ವಿನೋದ್.
ಸ್ಯಾಂಡಲ್‌ವುಡ್‌ನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಜನ ನಾಯಗನ್ ಸಿನಿಮಾವು ಜನವರಿ 9ರಂದು ವಿಶ್ವಾದ್ಯಂತ ಬಹುಭಾಷೆಯಲ್ಲಿ ತೆರೆಕಾಣಲಿದ್ದು, ಪೂಜಾ ಹೆಗ್ಡೆ, ಮಮಿತಾ ಬೈಜು, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ.