ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻದಳಪತಿʼ ವಿಜಯ್ ಪುತ್ರನ ʻಸಿಗ್ಮಾʼ ಸಿನಿಮಾ ರಿಲೀಸ್‌ಗೆ ರೆಡಿ; ತಮಿಳುನಾಡು ಸಿಎಂ ಮಗ ಜೇಸನ್‌ ಸಂಜಯ್‌ ಡೈರೆಕ್ಟರ್‌ ಆಗಿದ್ದೇಕೆ?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

ತಮಿಳುನಾಡು ಮುಖ್ಯಮಂತ್ರಿ ʻದಳಪತಿʼ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಜೇಸನ್ ಸಂಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾ 'ಸಿಗ್ಮಾ' (Sigma) ಈಗಾಗಲೇ ರಿಲೀಸ್‌ಗೆ ಸಿದ್ಧವಾಗಿದ್ದು, ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಜೇಸನ್ ಸಂಜಯ್ ಅವರು ತಮ್ಮ ನಿರ್ದೇಶನದ ಜರ್ನಿ, ಬಾಲ್ಯದ ದಿನಗಳು ಮತ್ತು ಸಿನಿಮಾ ಮೇಲಿರುವ ಪ್ಯಾಶನ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಕುಟುಂಬ ಮತ್ತು ಸ್ನೇಹಿತರ ಬೆಂಬಲವೇ ಶಕ್ತಿ

"ನಾನು ಸಿನಿಮಾ ನಿರ್ದೇಶನ ಮಾಡಲು ನಿರ್ಧರಿಸಿದಾಗ ನನ್ನ ನಿರ್ಧಾರವನ್ನು ಮೊದಲು ನನ್ನ ಅಪ್ಪ-ಅಮ್ಮ, ತಂಗಿ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡೆ. ಅವರೆಲ್ಲರೂ ನನ್ನ ನಿರ್ಧಾರಕ್ಕೆ ತುಂಬಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಅವರ ನೀಡಿದ ಬೆಂಬಲ ಮತ್ತು ಪ್ರೋತ್ಸಾಹ ನನಗೆ ಹೊಸ ಶಕ್ತಿಯನ್ನು ನೀಡಿತು. ನನ್ನ ಸಾಮರ್ಥ್ಯದ ಮೇಲೆ ಅವರಿಗೆ ಎಷ್ಟೊಂದು ನಂಬಿಕೆ ಇದೆ ಎಂಬುದು ಆ ಕ್ಷಣದಲ್ಲಿ ನನಗೆ ಅರ್ಥವಾಯಿತು" ಎಂದು ಜೇಸನ್ ಹೇಳಿದ್ದಾರೆ. ಇದರೊಂದಿಗೆ, 'ಸಿಗ್ಮಾ' ಚಿತ್ರದ ಶೂಟಿಂಗ್ ಆರಂಭವಾದ ಸಂದರ್ಭದಲ್ಲಿ ಕಾಲಿವುಡ್‌ನ ಪ್ರಮುಖ ನಟರಾದ ವಿಜಯ್ ಸೇತುಪತಿ ಮತ್ತು ಸೂರಿ ಸೇರಿದಂತೆ ಹಲವು ಗಣ್ಯರು ತಮಗೆ ಶುಭ ಹಾರೈಸಿದ್ದನ್ನು ಜೇಸನ್ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.

Jason Sanjay: ಪರೋಕ್ಷವಾಗಿ ತಂದೆಯನ್ನು ದೂರಿದ್ರಾ ಸಿಎಂ ವಿಜಯ್ ಪುತ್ರ? ಜೇಸನ್ ಮುಕ್ತ ಮಾತು

ಬಾಲ್ಯದಿಂದಲೇ ಅಂಟಿಕೊಂಡ ಸಿನಿಮಾ ಹವ್ಯಾಸ

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಜೇಸನ್, "ನಾನು ಸಿನಿಮಾ ಹಿನ್ನೆಲೆ ಇರುವ ಕುಟುಂಬದಲ್ಲೇ ಬೆಳೆದ ಕಾರಣ, ಬಾಲ್ಯದಿಂದಲೇ ಚಿತ್ರೀಕರಣದ ಲೊಕೇಷನ್‌ಗಳಿಗೆ ಭೇಟಿ ನೀಡುವ ಮತ್ತು ಅನೇಕ ಸಿನಿಮಾಗಳ ಪ್ರೀಮಿಯರ್ ಶೋಗಳನ್ನು ನೋಡುವ ಅಪರೂಪದ ಅವಕಾಶಗಳು ನನಗೆ ಸಿಕ್ಕಿದ್ದವು. ಸಿನಿಮಾ ನೋಡುವುದು ನನ್ನ ಪ್ರಮುಖ ಹವ್ಯಾಸವಾಗಿತ್ತು. ಈಗ ಜಗತ್ತಿನ ವಿವಿಧ ಭಾಷೆಗಳ ಹಾಗೂ ವಿಭಿನ್ನ ಪ್ರಕಾರಗಳ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿದೆ. ನಾನು ಸಿನಿಮಾ ನೋಡುವಾಗ ಕೇವಲ ಮನರಂಜನೆಗೆ ಸೀಮಿತವಾಗದೆ, ನಿರ್ದೇಶಕರು ಕಥೆಯನ್ನು ಹೇಗೆ ಆರಂಭಿಸುತ್ತಾರೆ ಮತ್ತು ಅದನ್ನು ತೆರೆಯ ಮೇಲೆ ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಆ ದಿನಗಳಲ್ಲಿ ನನ್ನ ಸ್ನೇಹಿತರಿಗೆ ಸಿನಿಮಾದ ಕಥೆಗಳನ್ನು ಉತ್ಸಾಹದಿಂದ ಹೇಳುತ್ತಿದ್ದ ಆ ಅಭ್ಯಾಸವೇ ಮುಂದೆ ನಾನು ನಿರ್ದೇಶಕನಾಗಲು ಮುಖ್ಯ ಪ್ರೇರಣೆಯಾಯಿತು" ಎಂದು ತಿಳಿಸಿದ್ದಾರೆ.

ಕಿರುಚಿತ್ರದ ಮೂಲಕ ಸಾಮರ್ಥ್ಯದ ಪರೀಕ್ಷೆ

ಫಿಲ್ಮ್ ಮೇಕಿಂಗ್ ಕೋರ್ಸ್ ಓದುತ್ತಿದ್ದ ದಿನಗಳಲ್ಲೇ ಜೇಸನ್ 120 ಪುಟಗಳ ಸುದೀರ್ಘ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆದರೆ ಆ ಸಮಯದಲ್ಲಿ ಪೂರ್ಣ ಪ್ರಮಾಣದ ಕಮರ್ಷಿಯಲ್ ಸಿನಿಮಾ ಮಾಡುವಂತಹ ಪರಿಸ್ಥಿತಿ ಇರಲಿಲ್ಲ. ಹೀಗಾಗಿ, ಜೇಸನ್ ಆ ಕಥೆಯನ್ನೇ ಆಧರಿಸಿ 20 ನಿಮಿಷಗಳ ಕಿರುಚಿತ್ರವೊಂದನ್ನು ರೂಪಿಸಿದರು. ಈ ಚೊಚ್ಚಲ ಪ್ರಯತ್ನವು ಒಬ್ಬ ನಿರ್ದೇಶಕನಾಗಿ ತಮ್ಮ ಸಾಮರ್ಥ್ಯ ಮತ್ತು ತಾಂತ್ರಿಕ ಜ್ಞಾನವನ್ನು ಪರೀಕ್ಷಿಸಿಕೊಳ್ಳಲು ತಮಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

ಜೇಸನ್‌ ಸಂಜಯ್‌ ಕುರಿತ ಫೋಸ್ಟ್‌



ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಎಂಟ್ರಿ

"ನಾನು ಆರಂಭದಲ್ಲಿ ದೊಡ್ಡ ಬ್ಯಾನರ್‌ನಲ್ಲಿ ಸಿನಿಮಾ ಸಿಗುತ್ತದೆ ಎಂಬ ಯಾವುದೇ ದೊಡ್ಡ ನಿರೀಕ್ಷೆಗಳನ್ನಿಟ್ಟುಕೊಂಡು ಹೋಗಿರಲಿಲ್ಲ. ಕೇವಲ ಒಬ್ಬ ನಿರ್ಮಾಪಕರಿಗೆ ಕಥೆ ಹೇಳುವ ಅನುಭವ ಸಿಗಲಿ ಎಂಬ ಸಾಮಾನ್ಯ ಉದ್ದೇಶ ಮಾತ್ರ ನನ್ನದಾಗಿತ್ತು. ಆದರೆ, ನಾನು ಹೇಳಿದ ಕಥೆ ತಮಿಳ್ ಕುಮಾರನ್ ಸರ್‌ಗೆ ತುಂಬಾ ಇಷ್ಟವಾಯಿತು. ಆ ನಂತರ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್ ಸರ್ ಅವರಿಗೂ ಕಥೆ ವಿವರಿಸಿದೆ, ಅವರಿಗೂ ಕಥೆ ತುಂಬಾ ಇಷ್ಟವಾಯಿತು. ಅಂದು ನಾನು ನಂಬಿದ್ದ ಆ ಕಥೆಯೇ ಇಂದು 'ಸಿಗ್ಮಾ' ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದೆ" ಎಂದು ಜೇಸನ್ ಸಂಜಯ್ ಹೇಳಿದ್ದಾರೆ.

Thalapathy Vijay: 'ಜನ ನಾಯಗನ್' ಚಿತ್ರದ ಹೊಸ ಪೋಸ್ಟರ್ ಔಟ್‌! ರಿಲೀಸ್‌ ಯಾವಾಗ?

ಮುಂದಿನ ಲೈನ್‌ಅಪ್ ಸಿದ್ಧ

ಮೊದಲ ಸಿನಿಮಾದ ಕೆಲಸಗಳ ನಡುವೆಯೇ ಜೇಸನ್ ತಮ್ಮ ಮುಂದಿನ ಚಿತ್ರಗಳಿಗೂ ಸಿದ್ಧತೆ ಮಾಡಿಕೊಂಡಿದ್ದಾರೆ. "ನನ್ನ ಬಳಿ ಈಗಾಗಲೇ ಎರಡು-ಮೂರು ಕಥೆಗಳಿವೆ. ಸದ್ಯಕ್ಕೆ ನನ್ನ ಗಮನವೆಲ್ಲಾ 'ಸಿಗ್ಮಾ' ಚಿತ್ರದ ಮೇಲಿದ್ದು, ಇದು ಬಿಡುಗಡೆಯಾದ ಬಳಿಕ ಆ ಕಥೆಗಳ ಸ್ಕ್ರಿಪ್ಟ್ ಡೆವಲಪ್‌ಮೆಂಟ್ ಕೆಲಸಗಳನ್ನು ಅಧಿಕೃತವಾಗಿ ಆರಂಭಿಸುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜೇಸನ್ ಸಂಜಯ್ ಚೊಚ್ಚಲ ನಿರ್ದೇಶನದ ಈ 'ಸಿಗ್ಮಾ' ಚಿತ್ರದಲ್ಲಿ ನಟ ಸಂದೀಪ್ ಕಿಶನ್ ನಾಯಕನಾಗಿ ನಟಿಸಿದ್ದಾರೆ.