ತಮಿಳುನಾಡು ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಜುಲೈ 23 ರಂದು ತೆರೆಕಂಡ ಈ ಚಿತ್ರವು ಎರಡನೇ ದಿನ ಗಳಿಕೆಯಲ್ಲಿ ಶೇ. 50 ರಷ್ಟು ಕುಸಿತ ಕಂಡಿತ್ತಾದರೂ, ಮೂರನೇ ದಿನದಂದು (ಶನಿವಾರ) ಭಾರಿ ಚೇತರಿಕೆ ಕಂಡುಕೊಂಡಿದೆ.
ಮೂರನೇ ದಿನ ಕಲೆಕ್ಷನ್‌ನಲ್ಲಿ ಏರಿಕೆ
ಸಾಕ್ನಿಲ್ಕ್ (Sacnilk) ವರದಿಯ ಪ್ರಕಾರ, ಮೊದಲ ದಿನ ಭಾರತದಲ್ಲಿ 42.70 ಕೋಟಿ ಗಳಿಸಿದ್ದ ಸಿನಿಮಾ, ಎರಡನೇ ದಿನ 21.51 ಕೋಟಿಗೆ ಕುಸಿದಿತ್ತು. ಆದರೆ ಮೂರನೇ ದಿನ ಶೇ. 34.8 ರಷ್ಟು ಜಿಗಿತ ಕಾಣುವ ಮೂಲಕ 12,299 ಶೋಗಳಿಂದ ಬರೋಬ್ಬರಿ 28.50 ಕೋಟಿ ರೂ. ನೆಟ್ ಸಂಗ್ರಹಿಸಿದೆ. ಇದರೊಂದಿಗೆ ಚಿತ್ರದ ಭಾರತದ ಒಟ್ಟು ಗ್ರಾಸ್ ಗಳಿಕೆ 108.93 ಕೋಟಿಗೆ ತಲುಪಿದ್ದು, ನೆಟ್ ಕಲೆಕ್ಷನ್ 92.35 ಕೋಟಿ ರೂ. ಆಗಿದೆ. ತಮಿಳುನಾಡಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಶನಿವಾರ ಕೂಡ 24.40 ಕೋಟಿ ರೂ. ನೆಟ್ ಗಳಿಕೆ ಅಗಿದೆ. ಹಿಂದಿ ಅವತರಣಿಕೆಯು 2.70 ಕೋಟಿ ರೂ. ಗಳಿಸಿದರೆ, ತೆಲುಗು ಅವತರಣಿಕೆಯಿಂದ 1.40 ಕೋಟಿ ರೂ. ಕಲೆಕ್ಷನ್ ಆಗಿದೆ.
Jana Nayagan Twitter Review: ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ಜನ ನಾಯಗನ್‌ಗೆ ಪ್ರೇಕ್ಷಕರ ಜಯಕಾರ
ನಾಲ್ಕು ದಿನಕ್ಕೆ 200 ಕೋಟಿ ರೂ.?
ಪ್ರಸ್ತುತ ವಿಶ್ವದಾದ್ಯಂತ 171.84 ಕೋಟಿ ರೂ. ಗಳಿಸಿರುವ ಈ ಚಿತ್ರಕ್ಕೆ ಭಾನುವಾರದ ಕಲೆಕ್ಷನ್ ಅತ್ಯಂತ ನಿರ್ಣಾಯಕವಾಗಿದೆ. ಭಾನುವಾರ ₹30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದರೆ, ಸಿನಿಮಾ ಸುಲಭವಾಗಿ 200 ಕೋಟಿ ರೂ. ಕ್ಲಬ್‌ಗೆ ಈ ಸಿನಿಮಾ ಸೇರಲು ಸಾಧ್ಯವಾಗುತ್ತದೆ. ಆ ದಾಖಲೆ ನೆರವೇರಲಿದೆಯಾ? ಕಾದುನೋಡಬೇಕು.
ಭಗವಂತ್ ಕೇಸರಿ ರಿಮೇಕ್
ತೆಲುಗಿನ ಯಶಸ್ವಿ ಚಿತ್ರ 'ಭಗವಂತ್ ಕೇಸರಿ'ಯ ಅಧಿಕೃತ ರಿಮೇಕ್ ಇದಾಗಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಅವರ ಇಮೇಜ್‌ಗೆ ತಕ್ಕಂತೆ ಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದಲ್ಲಿ ಮಮಿತಾ ಬೈಜು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಜೊತೆಗಿನ ವಿವಾದದಿಂದಾಗಿ ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಜುಲೈನಲ್ಲಿ ತೆರೆಗೆ ಬಂದಿದೆ.
ಸೀನ್ ಡಿಲೀಟ್: ಕಣ್ಣೀರಿಟ್ಟ ನಟಿ ಆನಂದಿ ಅಜಯ್
ಮತ್ತೊಂದೆಡೆ, ಚಿತ್ರದಲ್ಲಿ ತಮ್ಮ ದೃಶ್ಯಗಳನ್ನು ಸಂಪೂರ್ಣವಾಗಿ ಎಡಿಟ್ ಮಾಡಿ ತೆಗೆದುಹಾಕಿದ್ದಕ್ಕೆ ನಟಿ ಆನಂದಿ ಅಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ವಿಡಿಯೋ ಹಂಚಿಕೊಂಡಿದ್ದಾರೆ. "ನನ್ನ ಕಮ್‌ಬ್ಯಾಕ್‌ನಲ್ಲಿ ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿತ್ತು. ದಳಪತಿ ವಿಜಯ್ ಸರ್ ಜೊತೆ ನಟಿಸಿದ್ದ ಕಾಂಬಿನೇಷನ್ ಸೀನ್‌ಗಳನ್ನು ಕಟ್ ಮಾಡಲಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಒಂದೂವರೆ ವರ್ಷದಿಂದ ಈ ಸಿನಿಮಾಗಾಗಿ ಕಾಯುತ್ತಿದ್ದ ನನಗೆ ಭಾರಿ ನಿರಾಶೆಯಾಗಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.