ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thalapathy Vijay: ದುಬಾರಿ ಟಿಕೆಟ್‌ ದರದ ಎಫೆಕ್ಟ್‌! ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಲೂಟಿ ಮಾಡಿದ ʻಜನ ನಾಯಗನ್‌ʼ; ಮೊದಲ ದಿನ ಕರುನಾಡಿನಲ್ಲಿ ಸಿಕ್ಕ ಕಲೆಕ್ಷನ್‌ ಎಷ್ಟು?

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ 'ದಳಪತಿ' ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಮೊದಲ ದಿನವೇ ಬರೋಬ್ಬರಿ 11.57 ಕೋಟಿ ರೂ. ಕಲೆಕ್ಷನ್ ಮಾಡಿ ಇತಿಹಾಸ ಬರೆದಿದೆ. ಬೆಂಗಳೂರಿನಲ್ಲಿ ದುಬಾರಿ ಟಿಕೆಟ್ ದರ ಇದ್ದ ಕಾರಣ, ಗಳಿಕೆ ಪ್ರಮಾಣ ಜಾಸ್ತಿ ಆಗಿದೆ.

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ 'ದಳಪತಿ' ವಿಜಯ್, ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಜುಲೈ 23ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬಂದಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ವಿಜಯ್ ಅವರ ಚಿತ್ರರಂಗದ ಕೊನೆಯ ಸಿನಿಮಾವಾಗಿದ್ದು, ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿತ್ತು. ತಮಿಳುನಾಡು ಮಾತ್ರವಲ್ಲದೆ ಕರ್ನಾಟಕದಲ್ಲೂ ಚಿತ್ರಕ್ಕೆ ಭಾರಿ ಓಪನಿಂಗ್ ಸಿಕ್ಕಿದ್ದು, ದಳಪತಿ ಹವಾ ಕರುನಾಡಿನಲ್ಲಿ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕರ್ನಾಟಕದಲ್ಲಿ ದಾಖಲೆ ಕಲೆಕ್ಷನ್

ತಮಿಳು ಸಿನಿಮಾಗಳಿಗೆ ಬೆಂಗಳೂರು ಸದಾ ದೊಡ್ಡ ಮಾರುಕಟ್ಟೆಯಾಗಿದೆ. ಈ ಬಾರಿಯೂ ಬೆಂಗಳೂರಿನಲ್ಲಿ 'ಜನ ನಾಯಗನ್' ಭರ್ಜರಿ ಗಳಿಕೆ ಮಾಡಿದೆ. ಕರ್ನಾಟಕದಿಂದ ಮೊದಲ ದಿನವೇ ಈ ಚಿತ್ರ ಬರೋಬ್ಬರಿ 11.57 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಈ ಭಾರಿ ಮೊತ್ತದಲ್ಲಿ ಬೆಂಗಳೂರಿನ ಮಾರುಕಟ್ಟೆಯದ್ದೇ ಅಧಿಕ ಪಾಲು. ಕರ್ನಾಟಕದಲ್ಲಿ ಉತ್ತಮ ಓಪನಿಂಗ್‌ ಪಡೆದ ಕಾಲಿವುಡ್ ಸಿನಿಮಾಗಳಲ್ಲಿ ಜನ ನಾಯಗನ್‌ಗೆ 4ನೇ ಸ್ಥಾನ ಸಿಕ್ಕಿದೆ.

ಈ ಚಿತ್ರದ ಬಿಡುಗಡೆ ವೇಳೆ ಬೆಂಗಳೂರಿನಲ್ಲಿ ಟಿಕೆಟ್ ದರ ಗಗನಕ್ಕೇರಿತ್ತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಟಿಕೆಟ್ ದರ ₹2,000 ಗಡಿ ತಲುಪಿದ್ದರೆ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಬೆಳಗಿನ ಜಾವದ ಶೋಗಳಿಗೆ ₹800 ರಿಂದ ₹1,000 ವರೆಗೆ ದರ ನಿಗದಿಯಾಗಿತ್ತು. ದುಬಾರಿ ಟಿಕೆಟ್ ದರದ ಪೂರ್ಣ ಲಾಭ ಪಡೆದುಕೊಂಡ ನಿರ್ಮಾಣ ಸಂಸ್ಥೆಯು ಕರ್ನಾಟಕದಿಂದ ಭಾರಿ ಪ್ರಮಾಣದ ಹಣವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Trisha Krishnan: 'ಜನ ನಾಯಗನ್' ನೋಡಿ ತ್ರಿಶಾ ಹೇಳಿದ್ದೇನು? ನನಗೆ ಬೇಸರವಾಗಿದೆ ಎಂದ ನಟಿ ತಾಯಿ!

ದೇಶ ಹಾಗೂ ಜಾಗತಿಕ ಮಟ್ಟದ ಗಳಿಕೆ

ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾದ ಈ ಚಿತ್ರಕ್ಕೆ ದೇಶಾದ್ಯಂತ ಮೊದಲ ದಿನ 13,000ಕ್ಕೂ ಹೆಚ್ಚು ಪ್ರದರ್ಶನಗಳು ಸಿಕ್ಕಿದ್ದವು. ಭಾರತದಲ್ಲಿ ಮೊದಲ ದಿನ ಒಟ್ಟು 48 ಕೋಟಿ ಗಳಿಕೆಯಾಗಿದ್ದು, ಇದರಲ್ಲಿ ಕರ್ನಾಟಕ ಒಂದರ ಕೊಡುಗೆಯೇ ₹11.57 ಕೋಟಿ ಎಂಬುದು ಗಮನಾರ್ಹ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬೆಳಗಿನ ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದರೂ, ಉತ್ತರ ಭಾರತ ಮತ್ತು ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಹವಾ ಸೃಷ್ಟಿಸಲು ಸಾಧ್ಯವಾಗಲಿಲ್ಲ.

ವಿಶ್ವ ಮಾರುಕಟ್ಟೆಯಲ್ಲಿ (ದುಬೈ, ಅಮೆರಿಕ ಸೇರಿದಂತೆ) 'ಜನ ನಾಯಗನ್' 30 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಜಾಗತಿಕವಾಗಿ ಮೊದಲ ದಿನ ಒಟ್ಟು ₹78.27 ಕೋಟಿ ಗಳಿಸಿದೆ. ಮೊದಲ ದಿನವೇ ₹100 ಕೋಟಿಯ ಗಡಿ ದಾಟುವ ನಿರೀಕ್ಷೆಯಿತ್ತಾದರೂ, ಗಳಿಕೆ ₹78 ಕೋಟಿ ರೂ.ಗಳಿಗೆ ಸುಸ್ತು ಹೊಡೆದಿದೆ.

ಕಲೆಕ್ಷನ್ ಕುಸಿತಕ್ಕೆ ಪ್ರಮುಖ ಕಾರಣಗಳು

ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟ ತಲುಪದಿರಲು ಕೆಲವು ಪ್ರಮುಖ ಕಾರಣಗಳಿವೆ. ಏಪ್ರಿಲ್‌ನಲ್ಲೇ ಈ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಬಿಡುಗಡೆಗೂ ಮುನ್ನವೇ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಇದು ಚಿತ್ರಮಂದಿರದ ಕಲೆಕ್ಷನ್‌ಗೆ ಭಾರಿ ಹೊಡೆತ ನೀಡಿದೆ. ಜೊತೆಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಹಾಗೂ ತಮಿಳುನಾಡಿನ ಹೊರಗಿನ ರಾಜ್ಯಗಳಲ್ಲಿ ಡಬ್ ಆವೃತ್ತಿಗಳಿಗೆ ನಿರೀಕ್ಷಿತ ಪ್ರದರ್ಶನ ಸಿಗದಿರುವುದು ಮೊದಲ ದಿನದ ಗಳಿಕೆಯ ಮೇಲೆ ಪರಿಣಾಮ ಬೀರಿದೆ ಎಂಬ ಮಾತುಗಳು ಸಿನಿಪ್ರಿಯರ ವಲಯದಿಂದ ಕೇಳಿಬಂದಿವೆ.