ದಳಪತಿ ವಿಜಯ್ ಅವರ ಕೊನೆಯ ತಮಿಳು ಸಿನಿಮಾ ʻಜನ ನಾಯಗನ್ʼ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸುಮಾರು 400 ಕೋಟಿ ರೂ.ಗಳಿಗೂ ಅಧಿಕ ಬಂಡವಾಳದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಎಚ್. ವಿನೋದ್ ಇದರ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, ಬಿಡುಗಡೆಗೆ ಇನ್ನೂ 10 ದಿನಗಳು ಬಾಕಿ ಇರುವಾಗಲೇ ಇದರ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದೆ, ಅದು ಕೂಡ ಕರ್ನಾಟಕದಲ್ಲಿ!
ಚೆನ್ನೈಗಿಂತ ಮೊದಲೇ ಬೆಂಗಳೂರಿನಲ್ಲಿ ಟಿಕೆಟ್ ಬುಕಿಂಗ್
ʻಜನ ನಾಯಗನ್ʼ ತಮಿಳು ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದ್ದು, ಇದು ವಿಜಯ್ ಅವರ ಕೊನೆಯ ಸಿನಿಮಾವಾಗಿರುವುದರಿಂದ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಸದ್ಯ ಜನವರಿ 9ರಂದು ತೆರೆಗೆ ಬರಲಿರುವ ಈ ಸಿನಿಮಾಕ್ಕೆ ಇಂದಿನಿಂದಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಅದು ಕೂಡ ಚೆನ್ನೈಗಿಂತ ಮೊದಲು ಬೆಂಗಳೂರಿನಲ್ಲಿ! ಅಚ್ಚರಿ ಎನಿಸಿದರೂ ಇದು ನಿಜ. ಬೆಂಗಳೂರಿನ ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ʻಜನ ನಾಯಗನ್ʼ ತಮಿಳು ಸಿನಿಮಾದ ಬುಕಿಂಗ್ ಶುರುವಾಗಿದ್ದು, ಜನವರಿ 9ರ ಬೆಳಗ್ಗೆ 6.15 ಗಂಟೆಯ ಶೋಗಳನ್ನ ಮಾತ್ರ ತೆರೆಯಲಾಗಿದೆ.
Thalapathy Vijay: ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲು: ಕೆಳಗೆ ಬಿದ್ದ ದಳಪತಿ ವಿಜಯ್
ಸದ್ಯ ಬುಕಿಂಗ್ ಓಪನ್ ಆಗಿರುವ ಬೆಳ್ಳಂಬೆಳಗ್ಗೆಯ 15 ಶೋಗಳು ಕೂಡ ಸೋಲ್ಡ್ ಔಟ್ ಆಗಿವೆ. ಅಚ್ಚರಿ ಎಂದರೆ, ಇದ ಟಿಕೆಟ್ ದರ! ಸಾಮಾನ್ಯವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 150-200 ರೂ. ಟಿಕೆಟ್ ದರ ಇದ್ದರೆ, ʻಜನ ನಾಯಗನ್ʼ ಸಿನಿಮಾದ ಈ ಸ್ಪೆಷಲ್ ಶೋನ ಟಿಕೆಟ್ ದರಗಳು 800-1000 ಇದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ಟಿಕೆಟ್ ಸೇಲ್ ಮಾಡುತ್ತಿರುವುದು ಸಿನಿಪ್ರಿಯರಿಗೆ ಆಘಾತವನ್ನು ಉಂಟು ಮಾಡಿದೆ. ವಿಪರ್ಯಾಸವೆಂದರೆ, ತಮಿಳುನಾಡಿನಲ್ಲಿ ಈ ಪ್ರಮಾಣದ ದುಬಾರಿ ಟಿಕೆಟ್ ದರ ಎಂದಿಗೂ ಇರುವುದಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಪ್ರತಿ ಬಾರಿ ದೊಡ್ಡ ಸಿನಿಮಾಗಳು ತೆರೆಕಾಣುವಾಗ ಇದೊಂದು ಸಮಸ್ಯೆ ಎದ್ದು ತೋರುತ್ತದೆ.
ಇದು ರಿಮೇಕ್ ಸಿನಿಮಾವಾ?
ಸದ್ಯ ಇಂತಹದ್ದೊಂದು ಚರ್ಚೆ ಎಲ್ಲೆಡೆ ಕೇಳಿಬರುತ್ತಿದೆ. ಹೌದು, ಜನ ನಾಯಗನ್, ತೆಲುಗಿನ ಭಗವಂತ್ ಕೇಸರಿ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡ ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಆದರೆ ನಿರ್ದೇಶಕ ಎಚ್. ವಿನೋದ್, "ಇದು ರಿಮೇಕ್ ಸಿನಿಮಾ ಎಂಬ ಬಗ್ಗೆ ಚರ್ಚೆಗಳು ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ನೂರಕ್ಕೆ ನೂರರಷ್ಟು ದಳಪತಿ ವಿಜಯ್ ಅವರ ಸಿನಿಮಾ. ಇದು ಅವರ ಸಿದ್ಧಾಂತ ಮತ್ತು ಅಭಿಮಾನಿಗಳೊಂದಿಗಿನ ಬಾಂಧವ್ಯದ ಆಚರಣೆ" ಎಂದಿದ್ದಾರೆ.
ವಿಜಯ್ ಅವರ ಜೊತೆಗೆ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್, ಬಾಬಿ ಡಿಯೋಲ್, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್, ಸುನೀಲ್, ನಾಸರ್, ರೆಬಾ ಮೋನಿಕಾ ಜಾನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.