ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಜಯ್ ದೇವರಕೊಂಡ - ರಶ್ಮಿಕಾ ನಟನೆಯ ‘ರಣಬಾಲಿ’ ಚಿತ್ರಕ್ಕೆ ಬರಗಾಲದ ರಾಕ್ಷಸನಾಗಿ ಬಂದ ʻದಿ ಮಮ್ಮಿʼ ಖ್ಯಾತಿಯ ಹಾಲಿವುಡ್‌ ನಟ ಆರ್ನಾಲ್ಡ್ ವೋಸ್ಲೂ

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ 'ರಣಬಾಲಿ' ಚಿತ್ರಕ್ಕೆ 'ದಿ ಮಮ್ಮಿ' ಖ್ಯಾತಿಯ ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ಖಳನಾಯಕನಾಗಿ ಸೇರ್ಪಡೆಯಾಗಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಐತಿಹಾಸಿಕ ಚಿತ್ರದಲ್ಲಿ ಅವರು ಬ್ರಿಟಿಷ್ ಅಧಿಕಾರಿ 'ಸರ್ ಥಿಯೋಡರ್ ಹೆಕ್ಟರ್' ಎಂಬ ಪಾತ್ರ ಮಾಡುತ್ತಿದ್ದಾರೆ.

ತೆಲುಗು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ರಣಬಾಲಿ’ ಸಿನಿಮಾ ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಐತಿಹಾಸಿಕ ಸಿನಿಮಾದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿರುವ, ಯಾರಿಗೂ ತಿಳಿಯದ ಕಥೆಗಳನ್ನು ಹೇಳಲಾಗುತ್ತಿದೆಯಂತೆ. ಸದ್ಯ ಈ ಸಿನಿಮಾದಲ್ಲಿ ಹಾಲಿವುಡ್‌ ನಟ ಅರ್ನಾಲ್ಡ್ ವೋಸ್ಲೂ ಅವರು ನಟಿಸುತ್ತಿರುವುದು ಖಚಿತವಾಗಿದೆ.

ಅರ್ನಾಲ್ಡ್ ವೋಸ್ಲೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಫಸ್ಟ್‌ ಲುಕ್‌ ಜೊತೆಗೆ ಪಾತ್ರದ ಹಿನ್ನೆಲೆಯನ್ನು ಚಿತ್ರತಂಡ ಬಹಿರಂಗಪಡಿಸಿದೆ. ಈ ಸಿನಿಮಾದಲ್ಲಿ ಬರಗಾಲದ ರಾಕ್ಷಸನೆಂದೇ ಕರೆಯಲಾಗುವ ʻಸರ್ ಥಿಯೋಡರ್ ಹೆಕ್ಟರ್ʼ ಎಂಬ ಪಾತ್ರದಲ್ಲಿ ಅರ್ನಾಲ್ಡ್ ವೋಸ್ಲೂ ನಟಿಸುತ್ತಿದ್ದಾರೆ. "ದಿ ಮಮ್ಮಿ ಸಿನಿಮಾದಲ್ಲಿ ಇಮ್ಹೋಟೆಪ್ ಪಾತ್ರದ ಮೂಲಕ ವಿಶ್ವದಾದ್ಯಂತ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದ ಅರ್ನಾಲ್ಡ್ ವೋಸ್ಲೂ ಅವರು, ಈಗ 'ರಣಬಾಲಿ' ಚಿತ್ರದಲ್ಲಿ ಕ್ರೂರ 'ಸರ್ ಥಿಯೋಡರ್ ಹೆಕ್ಟರ್' ಆಗಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಅವರಿಗೆ ಭಾರತೀಯ ಚಿತ್ರರಂಗಕ್ಕೆ ಆತ್ಮೀಯ ಸ್ವಾಗತ ಮತ್ತು ಜನ್ಮದಿನದ ಶುಭಾಶಯಗಳು" ಎಂದು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀ ಮೇಕರ್ಸ್‌ ಹೇಳಿಕೊಂಡಿದೆ.

Vijay Deverakonda: 'ರಣಬಾಲಿ' ತೆರೆಮರೆಯ ದೃಶ್ಯ ವೈರಲ್‌; ವಿಜಯ್​ ದೇವರಕೊಂಡ ನೋಡಿ ಫಿದಾ ಆದ್ರು ಫ್ಯಾನ್ಸ್‌

ಅರ್ನಾಲ್ಡ್ ವೋಸ್ಲೂ ಅವರನ್ನೇ ಆಯ್ಕೆ ಮಾಡಿದ್ದೇಕೆ?

‘ರಣಬಾಲಿ’ ಚಿತ್ರಕ್ಕೆ ಅಂತರರಾಷ್ಟ್ರೀಯ ನಟ ಅರ್ನಾಲ್ಡ್ ವೋಸ್ಲೂ ಅವರ ಸೇರ್ಪಡೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ನಿರ್ದೇಶಕ ರಾಹುಲ್, "ನಾನು ತೆಗೆದುಕೊಂಡ ಅತ್ಯಂತ ದಿಟ್ಟ ಮತ್ತು ಹೆಮ್ಮೆಯ ನಿರ್ಧಾರವೆಂದರೆ ಅರ್ನಾಲ್ಡ್ ಅವರನ್ನು ಸರ್ ಥಿಯೋಡರ್ ಹೆಕ್ಟರ್ (ಚಿತ್ರದ ಕಾಲ್ಪನಿಕ ಬ್ರಿಟಿಷ್ ಅಧಿಕಾರಿ) ಪಾತ್ರಕ್ಕೆ ಆಯ್ಕೆ ಮಾಡಿದ್ದು. ಮೊದಲ ಮಾತುಕತೆಯಲ್ಲೇ ಅವರು ಚಿತ್ರದ ಬಗ್ಗೆ ಉತ್ಸುಕರಾಗಿದ್ದರು. ದಕ್ಷಿಣ ಆಫ್ರಿಕಾದವರಾದ ಅವರು (ಅದು ಕೂಡ ಹಿಂದೆ ಬ್ರಿಟಿಷ್ ವಸಾಹತಾಗಿತ್ತು) ಇತಿಹಾಸದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಚಿತ್ರಕಥೆಯ ಭಾವನೆಗಳಿಗೆ ಬೇಗನೆ ಕನೆಕ್ಟ್ ಆದರು. ಇದೊಂದು ಪಕ್ಕಾ ಆಕ್ಷನ್ ಪಾತ್ರವಾಗಿದ್ದು, ಅವರೊಂದಿಗೆ ಕೆಲಸ ಮಾಡುವುದು ಸುಲಭವಾಯಿತು" ಎಂದಿದ್ದಾರೆ. ಬ್ರಿಟಿಷ್ ಉಚ್ಚಾರಣೆಯನ್ನು ಕರಗತ ಮಾಡಿಕೊಳ್ಳಲು ಅರ್ನಾಲ್ಡ್ ವೋಸ್ಲೂ ಅವರಿಗೆ ವಿಶೇಷ ಭಾಷಾ ತರಬೇತಿಯನ್ನೂ ನೀಡಲಾಗಿದೆಯಂತೆ.

ಮದ್ರಾಸ್ ಪ್ರೆಸಿಡೆನ್ಸಿಯ ಯಾರಿಗೂ ಗೊತ್ತಿರದ ಕಥೆ

ಇಂದಿನ ಚೆನ್ನೈ, ತೆಲುಗು ಪ್ರದೇಶಗಳು ಹಾಗೂ ಬೆಂಗಳೂರನ್ನು ಒಳಗೊಂಡಿದ್ದ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯು ತನ್ನದೇ ಆದ ಹೋರಾಟ ಹಾಗೂ ಹತ್ತು ಹಲವು ಅಪರಿಚಿತ ಕಥೆಗಳನ್ನು ಹೊಂದಿದೆ ಎಂದು ರಾಹುಲ್ ಸಂಕೃತ್ಯನ್ ಹೇಳಿದ್ದಾರೆ. "ಇಂತಹ ಕಥೆಗಳು ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಕೇಳಿಬರುವುದು ತೀರಾ ವಿರಳ. ನಮ್ಮ ತಂದೆಯ ಹಳ್ಳಿಗೆ ಭೇಟಿ ನೀಡಿದಾಗ ಅಲ್ಲಿನ ಇತಿಹಾಸದಲ್ಲಿ ಹುದುಗಿ ಹೋಗಿದ್ದ ಹಳೆಯ ಆಚರಣೆಯೊಂದನ್ನು ಮತ್ತೆ ಜೀವಂತಗೊಳಿಸಿದ್ದನ್ನು ನೋಡಿದ್ದೆ. ನನಗೆ ಆ ಘಟನೆಯೇ ಈ ಸಿನಿಮಾದ ಕ್ಲೈಮ್ಯಾಕ್ಸ್ ಬರೆಯಲು ಪ್ರೇರಣೆಯಾಯಿತು" ಎಂದು ರಾಹುಲ್‌ ಹೇಳುತ್ತಾರೆ.

ಅರ್ನಾಲ್ಡ್ ವೋಸ್ಲೂ ಕುರಿತ ಪೋಸ್ಟ್‌



ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸಿರೀಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾ ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮದುವೆಯ ನಂತರ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಇದಾಗಿದೆ.