ತೆಲುಗು ನಟ ತಿರುವೀರ್ ಈಗ ಪ್ಯಾನ್ ಇಂಡಿಯಾ ಸ್ಟಾರ್; ಹೊಸ ಚಿತ್ರಕ್ಕೆ ಐಶ್ವರ್ಯಾ ರಾಜೇಶ್ ಸಾಥ್
Actor Thiruveer: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ತಿರುವೀರ್ ಮತ್ತು ಬಹುಭಾಷಾ ನಟಿ ಐಶ್ವರ್ಯಾ ರಾಜೇಶ್ ಮೊದಲ ಬಾರಿಗೆ ತೆರೆಮೇಲೆ ಒಂದಾಗುತ್ತಿರುವ, ಗಂಗಾ ಎಂಟರ್‌ಟೈನ್‌ಮೆಂಟ್ಸ್‌ನ ಪ್ರೊಡಕ್ಷನ್ ನಂ. 2 ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಭರತ್ ದರ್ಶನ್ ನಿರ್ದೇಶಿಸುತ್ತಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ.
ಹೈದರಾಬಾದ್‌ನಲ್ಲಿ ತಿರುವೀರ್ ಮತ್ತು ಐಶ್ವರ್ಯಾ ರಾಜೇಶ್ ನಟನೆಯ ಹೊಸ ಚಿತ್ರಕ್ಕೆ ಚಾಲನೆ ನೀಡಲಾಯಿತು. -
ಹೈದರಾಬಾದ್, ನ. 9: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ತಿರುವೀರ್ (Actor Thiruveer) ಮತ್ತು ಬಹುಭಾಷಾ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಮೊದಲ ಬಾರಿಗೆ ತೆರೆಮೇಲೆ ಒಂದಾಗುತ್ತಿರುವ, ಗಂಗಾ ಎಂಟರ್‌ಟೈನ್‌ಮೆಂಟ್ಸ್‌ನ ಪ್ರೊಡಕ್ಷನ್ ನಂ. 2 ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಬ್ಲಾಕ್‌ಬಸ್ಟರ್ 'ದಿ ಗ್ರೇಟ್ ಪ್ರಿ ವೆಡ್ಡಿಂಗ್ ಶೋ' ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಯುವ ನಾಯಕ ತಿರುವೀರ್, ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಂಕ್ರಾಂತಿಗೆ ಬಂದ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದ ಯಶಸ್ಸಿನ ನಂತರ ನಾಯಕಿ ಐಶ್ವರ್ಯಾ ರಾಜೇಶ್ ಈ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ಭರತ್ ದರ್ಶನ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಮಹೇಶ್ವರ ರೆಡ್ಡಿ ಮೂಲಿ ಗಂಗಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದು ಅವರ ಎರಡನೇ ಪ್ರಾಜೆಕ್ಟ್ ಆಗಿದೆ.
ಈ ಸುದ್ದಿಯನ್ನೂ ಓದಿ: IFFI 2025: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಕಾಂತ್‌ಗೆ IFFI ಗೌರವ ; ಅಮರನ್ 'ಗೋಲ್ಡನ್ ಪೀಕಾಕ್ ಪ್ರಶಸ್ತಿ'ಗೆ ನಾಮನಿರ್ದೇಶನ
'ಶಿವಂ ಭಜೆ' ಚಿತ್ರದಿಂದ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಗಂಗಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ, ಇದೀಗ ನಿರ್ದೇಶಕ ಭರತ್ ದರ್ಶನ್ ಅವರ ಕಥೆಗೆ ಬಂಡವಾಳ ಹೂಡುತ್ತಿದೆ. ಅಂದಹಾಗೆ ಭಾನುವಾರ (ನವೆಂಬರ್ 9) ಚಿತ್ರದ ಪಾತ್ರ ಮತ್ತು ತಾಂತ್ರಿಕ ಬಳಗದ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ಮುಹೂರ್ತ ನೆರವೇರಿತು. ಕಂಟೆಂಟ್ ಮೂಲಕವೇ ಜನಪ್ರಿಯರಾದ ತಿರುವೀರ್, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ಮಸೂದ'ದಿಂದ ಇತ್ತೀಚಿನ 'ಪ್ರಿ ವೆಡ್ಡಿಂಗ್ ಶೋ'ವರೆಗೆ ಬಗೆಬಗೆ ಕಥೆಗಳ ಮೂಲಕ ಗಮನ ಸೆಳೆದಿದ್ದಾರೆ.
ನಟ ತಿರುವೀರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಚಿತ್ರದಲ್ಲಿ ಪ್ರತಿಭಾವಂತ ತಂತ್ರಜ್ಞರ ತಂಡವಿದೆ. 'ರಜಾಕಾರ್' ಮತ್ತು 'ಪೋಲಿಮೇರ' ಚಿತ್ರಗಳಿಗೆ ಕೆಲಸ ಮಾಡಿದ ಛಾಯಾಗ್ರಾಹಕ ಸಿ.ಎಚ್. ಕುಶೇಂದರ್ ಇಲ್ಲಿಯೂ ಕ್ಯಾಮರಾ ನಿರ್ವಹಿಸಲಿದ್ದಾರೆ. ಭರತ್ ಮಂಚಿರಾಜು ಸಂಗೀತ ಸಂಯೋಜನೆ ಮಾಡಲಿದ್ದಾರೆ. 'ಬಲಗಂ' ಖ್ಯಾತಿಯ ತಿರುಮಲ ಎಂ. ತಿರುಪತಿ ಕಲಾ ನಿರ್ದೇಶಕರಾಗಿದ್ದರೆ, 'ಕಾ' ಖ್ಯಾತಿಯ ಶ್ರೀ ವರಪ್ರಸಾದ್ ಎಡಿಟರ್. ಚಿತ್ರದ ಶೂಟಿಂಗ್ ನವೆಂಬರ್ 19ರಿಂದ ಪ್ರಾರಂಭವಾಗಲಿದೆ. ಈ ಚಿತ್ರವು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.