Hi-tech Cricket Stadium: ಕಲಬುರಗಿಗೆ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ ಕೊಡಿ
ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಗುಜರಾತ್‌ನಂತಹ ರಾಜ್ಯ ಗಳಲ್ಲಿ ಐದಾರು ಅಂತಾರಾಷ್ಟ್ರೀಯ ಮೈದಾನಗಳಿದ್ದರೆ, ಕರ್ನಾಟಕದಲ್ಲಿ ಮಾತ್ರ ಕೇವಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೀಮಿತವಾಗಿರುವುದು ರಾಜ್ಯದ ಕ್ರೀಡಾ ಬದ್ಧತೆ ಪ್ರಶ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲಬುರಗಿ ಯಲ್ಲಿ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುವುದು ಸರಕಾರದ ಆದ್ಯತೆಯಾಗಬೇಕಿದೆ.
-
ದೇವೇಂದ್ರ ಜಾಡಿ ಕಲಬುರಗಿ
ರಾಜ್ಯ ಬಜೆಟ್ ಮೇಲೆ ಕಲ್ಯಾಣ ಕರ್ನಾಟಕ ಜನರ ನಿರೀಕ್ಷೆ
ಸಾವಿರಾರು ಕ್ರೀಡಾಪಟುಗಳ ಕನಸಿಗೆ ಸರಕಾರ ಸ್ಪಂದಿಸಲಿ
ಜಿಲ್ಲೆಯಲ್ಲಿ ವಿಶ್ವದರ್ಜೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಬೇಕು ಎನ್ನುವುದು ಈ ಭಾಗದ ಕ್ರೀಡಾಪಟುಗಳ ದಶಕಗಳ ಕನಸಾಗಿದ್ದು, ಇದಕ್ಕೆ ಸರಕಾರ ಈಗಲಾದರೂ ಇಚ್ಛಾಶಕ್ತಿ ಪ್ರದರ್ಶಿಸಿ ಮನ್ನಣೆ ನೀಡಬೇಕಿದೆ. ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ದರ್ಜೆಯ ಮೈದಾನ ಇಲ್ಲದಿರುವುದು ಕ್ರೀಡಾಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಗುಜರಾತ್‌ನಂತಹ ರಾಜ್ಯಗಳಲ್ಲಿ ಐದಾರು ಅಂತಾರಾಷ್ಟ್ರೀಯ ಮೈದಾನಗಳಿದ್ದರೆ, ಕರ್ನಾಟಕದಲ್ಲಿ ಮಾತ್ರ ಕೇವಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೀಮಿತವಾಗಿರುವುದು ರಾಜ್ಯದ ಕ್ರೀಡಾ ಬದ್ಧತೆ ಪ್ರಶ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲಬುರಗಿ ಯಲ್ಲಿ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುವುದು ಸರಕಾರದ ಆದ್ಯತೆಯಾಗಬೇಕಿದೆ.
ನನೆಗುದಿಗೆ ಬಿದ್ದ ಯೋಜನೆ: ಮೈಸೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿರುವ ಮೈದಾನಗಳು ಕೇವಲ ರಾಜ್ಯ ಮಟ್ಟದ ಪಂದ್ಯಗಳಿಗೆ ಸೀಮಿತವಾಗಿದ್ದು, ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಮೂಲಭೂತ ಸೌಕರ್ಯ ಹೊಂದಿಲ್ಲ. ಕಲಬುರಗಿ ವಿಶ್ವ ವಿದ್ಯಾಲಯದ ಆವರಣದಲ್ಲಿ 50 ಎಕರೆ ಜಮೀನನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಮತ್ತು ಕ್ರೀಡಾ ಗ್ರಾಮ ನಿರ್ಮಾಣಕ್ಕಾಗಿ ಈಗಾಗಲೇ ಗುರುತಿಸಲಾಗಿದೆ.
ಇದನ್ನೂ ಓದಿ: 'Vishwanath-Gavaskar' Cricket Academy: 'ವಿಶ್ವನಾಥ್–ಗವಾಸ್ಕರ್' ಅಕಾಡೆಮಿ ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್ ವಿತರಣೆ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಈ ಯೋಜನೆಗೆ 25 ಕೋಟಿಗಳ ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದು, ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ಹಂಚಿಕೆಯೂ ಆಗಿದೆ. ಆದರೆ, ಜಮೀನು ಹಸ್ತಾಂತರ ಪ್ರಕ್ರಿಯೆಯಲ್ಲಿನ ವಿಳಂಬ ಹಾಗೂ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆ ಚಾಲನೆ ಪಡೆಯುತ್ತಿಲ್ಲ. ಜಿಲ್ಲೆಯ ಪ್ರಸ್ತುತ ಕ್ರೀಡಾಂಗಣವು ತಾಲೂಕು ಮಟ್ಟದ ಸೌಲಭ್ಯಗಳಿಗಿಂತಲೂ ಕಳಪೆ ಯಾಗಿವೆ ಎಂಬ ದೂರು ಕೇಳಿಬರುತ್ತಿದೆ.
ಬಜೆಟ್‌ನಲ್ಲಿ ಕ್ರೀಡಾಂಗಣಕ್ಕೆ ಒತ್ತು ನೀಡಿ: ರಾಜ್ಯ ಸರಕಾರವು ಬಜೆಟ್‌ನಲ್ಲಿ ಕಲಬುರಗಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ವಿಶೇಷ ಅನುದಾನ ಘೋಷಿಸಿ, ಕಾಮಗಾರಿಗೆ ತಕ್ಷಣ ಚಾಲನೆ ನೀಡಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ಕ್ರೀಡಾ ಕ್ರಾಂತಿ ಉಂಟುಮಾಡಲು ಕಲಬುರಗಿಯೇ ಸೂಕ್ತ ಕೇಂದ್ರವಾಗಿದ್ದು, ಇಲ್ಲಿ ರಣಜಿ ಮತ್ತು ಅಂತಾರಾಷ್ಟ್ರೀಯ ಪಂದ್ಯ ಗಳು ನಡೆಯುವಂತಾಗಬೇಕು. ಸರಕಾರ ಕೇವಲ ಭರವಸೆ ನೀಡದೆ, ನೆರೆ ರಾಜ್ಯಗಳ ಮಾದರಿ ಯಲ್ಲಿ ರಾಜ್ಯದ 2ನೇ ಅಂತಾರಾಷ್ಟ್ರೀಯ ಮೈದಾನವನ್ನು ಕಲಬುರಗಿಯಲ್ಲಿ ನಿರ್ಮಿಸುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಲಿ.
ಜಾಗ, ಹಣವಿದೆ: ಚಾಲನೆ ಯಾವಾಗ?
ಕಲಬುರಗಿ ವಿವಿಯಲ್ಲಿ 50 ಎಕರೆ ಜಮೀನು ಲಭ್ಯವಿದ್ದು, ಕೆಕೆಆರ್‌ಡಿಬಿ ಹಣಕಾಸಿನ ನೆರವು ನೀಡಲು ಸಿದ್ಧವಿದೆ. ಈಗಾಗಲೇ ಡಿಪಿಆರ್ ಸಿದ್ಧವಾಗಿದ್ದು, ಸರಕಾರ ವಿಳಂಬ ಮಾಡದೆ ಕಾಮಗಾರಿಗೆ ಚಾಲನೆ ನೀಡಬೇಕಿದೆ.ಈಕ್ರೀಡಾಂಗಣದ ಸಂಪೂರ್ಣ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನುಕೆಎಸ್ ಸಿಎ ಸಂಸ್ಥೆಗೆ ವಹಿಸಬೇಕು. ಆಗ ಮಾತ್ರ ಇಲ್ಲಿ ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯಗಳು ದೊರೆಯಲು ಸಾಧ್ಯ.
ಸಾಧನೆ ಅಪಾರ-ಸೌಲಭ್ಯ ಶೂನ್ಯ
ಮಹಾರಾಜ ಟ್ರೋಫಿ: 2023ರಲ್ಲಿ ಕಲಬುರಗಿ ಮಿಸ್ಟಿಕ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಶ್ರೇಯಾಂಕಾ ಪಾಟೀಲ್: ಕಲಬುರಗಿಯ ಈ ಯುವತಿ ಆರ್‌ಸಿಬಿ ತಂಡದ ಗೆಲುವಿನ ರೂವಾರಿಯಾಗಿದ್ದಾರೆ.
ಕ್ರೀಡಾಪಟುಗಳ ಬಲ: ಜಿಲ್ಲೆಯಲ್ಲಿ ಹಾಕಿ(45), ಹ್ಯಾಂಡ್ ಬಾಲ್(36), ಕರಾಟೆ(26) ಸೇರಿದಂತೆ ನೂರಾರು ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ.
![]()
ಕಲಬುರಗಿಯಲ್ಲಿ ಕ್ರೀಡಾಪಟುಗಳ ಕೊರತೆಯಿಲ್ಲ. ಬದಲಾಗಿ ಸರಕಾರದ ದೂರದೃಷ್ಟಿಯ ಕೊರತೆಯಿದೆ. ಈ ಭಾಗದ ಜನಪ್ರತಿನಿಧಿಗಳು ತಕ್ಷಣ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಜಮೀನು ಹಸ್ತಾಂತರ ಪ್ರಕ್ರಿಯೆ ಮುಗಿಸಬೇಕು. ಕಲಬುರಗಿಯಲ್ಲಿ ರಣಜಿ ಪಂದ್ಯ ಗಳು ನಡೆಯುವಂತಾಗುವುದು ನಮ್ಮೆಲ್ಲರ ಹಕ್ಕು.
-ಮುತ್ತಣ್ಣ ನಡಗೇರಿ, ಹೋರಾಟಗಾರ
![]()
ನೆರೆಯ ರಾಜ್ಯಗಳಲ್ಲಿ ತಲಾ 5-6 ಅಂತಾರಾಷ್ಟ್ರೀಯ ಮೈದಾನಗಳಿವೆ. ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕದಲ್ಲಿ ಕೇವಲ ಒಂದು ಮೈದಾನವಿರುವುದು ಕ್ರೀಡಾ ಆಸಕ್ತರಿಗೆ ಮಾಡುತ್ತಿರುವ ಅಪಮಾನವಾಗಿದೆ. ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಮಾಡುವುದು ಕೇವಲ ಬೇಡಿಕೆಯಲ್ಲ. ಅದು ಈ ಭಾಗದ ಹಕ್ಕು.
-ಆನಂದ ಜೋಗುರು, ಯುವ ವಕೀಲ