ನಟ ಯಶ್ ಅವರ ಬಗ್ಗೆ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಅವರು ಕೆಲ ವರ್ಷಗಳ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. "ಕೆಜಿಎಫ್ ಸಿನಿಮಾಗೂ ಮೊದಲು ಯಶ್ ಯಾರು? ಯಾವ ದೊಡ್ಡ ಸ್ಟಾರ್ ಆಗಿದ್ದರು? ಆ ಚಿತ್ರದ ಅದ್ಭುತ ಮೇಕಿಂಗ್ ಹಾಗೂ ವಿಶುವಲ್ಸ್ ಕಾರಣದಿಂದ ಯಶ್ ಅವರಿಗೆ ಅಷ್ಟು ದೊಡ್ಡ ಮಟ್ಟದ ಮನ್ನಣೆ ಸಿಕ್ಕಿತು" ಎಂದು ಅಲ್ಲು ಅರವಿಂದ್ ಹೇಳಿದ್ದರು. ಆ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಆ ಹೇಳಿಕೆಗೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಖಡಕ್ ಟಾಂಗ್ ನೀಡಿದ್ದಾರೆ.
ನನಗೆ ಅವರ ಭಾಷೆಯಲ್ಲೇ ಹೇಳಲೂ ಬರುತ್ತದೆ
"ಎಲ್ಲವನ್ನೂ ಇಟ್ಟುಕೊಂಡು ಬಂದವರ ಮಕ್ಕಳ ತರಹ ಅಲ್ಲ ಅವನು, ಏನೂ ಇಲ್ಲದೆಯೇ ಬೆಳೆದು ಬಂದವನು. ಅವತ್ತೇ ಹೆದರಿಲ್ಲ, ಇವತ್ತು ಹೆದರುತ್ತೀವಾ? ಯಾರು ಯಶ್, ಅವನು ಎಲ್ಲಿಂದ ಬಂದ? ಕೆಜಿಎಫ್‌ಗಿಂತ ಮುಂಚೆ ಅವನು ಯಾರು ಅಂತ ಯಾರೋ ಹೇಳಿದ್ದಾರೆ. ಅವರಿಗೆ ನಾನೊಂದು ಮಾತು ಹೇಳುತ್ತೇನೆ. ನನಗೆ ಅವರ ಭಾಷೆಯಲ್ಲೇ ಹೇಳಲೂ ಬರುತ್ತದೆ, ಆದರೂ ನಮ್ಮ ಕನ್ನಡದಲ್ಲೇ ಹೇಳುತ್ತೇನೆ..." ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.
Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಐದೈದು ಹಿಟ್ ಪಿಕ್ಚರ್‌ಗಳನ್ನು ಕೊಟ್ಟಿದ್ದಾನೆ
"ಅವರಿಗೆ ದಿಲ್ ಇರಬೇಕು. ಯಶ್ ಎಂಬ ಒಬ್ಬ ಬಡವರ ಹುಡುಗನ ಬಗ್ಗೆ ಅವರು ಇಷ್ಟೊಂದು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ, ಯಶ್ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಕರ್ನಾಟಕದಲ್ಲಿ ರಾಜನ ತರಹ ಬಾಳಿದವನು. ಯಶ್ ಕೆಜಿಎಫ್‌ಗೂ ಮುಂಚೆಯೂ ಸಾಕಷ್ಟು ಸಿನಿಮಾಗಳನ್ನು ಕೊಟ್ಟಿದ್ದಾನೆ. ಒಂದಕ್ಕಿಂತ ಒಂದು ಹಿಟ್ ಆದ ಐದೈದು ಪಿಕ್ಚರ್‌ಗಳನ್ನು ಕೊಟ್ಟಿದ್ದಾನೆ. ಅದಕ್ಕೆ ಸಾಕ್ಷಿ ನಮ್ಮ ಕರ್ನಾಟಕದಲ್ಲೇ ಇದೆ" ಎಂದು ಪುಷ್ಪಾ ತಿಳಿಸಿದ್ದಾರೆ.
ಇಂಥ ಮಗನನ್ನು ಹೆತ್ತಿದ್ದಕ್ಕೆ ನನಗೆ ಹೆಮ್ಮೆ ಇದೆ
"ಕೆಜಿಎಫ್‌ಗೂ ಮುಂಚೆ ಯಾರಿವನು ಅಂತ ಕೇಳಿದವರಿಗೆ ನಾನು ಉತ್ತರ ಕೊಡುತ್ತೇನೆ. ಅವರ ಹಾಗೆ ದುಡ್ಡು ಇಟ್ಟುಕೊಂಡು ಅವನು ಬಂದಿಲ್ಲ. ದುಡ್ಡು ಇಟ್ಟುಕೊಂಡು ಬಂದವರು ಯಾಕ್ರೀ ಇವನನ್ನು ನೋಡಿ ಹೆದರಬೇಕು? ಅವರಿಗೆ ನಾಚಿಕೆಯಾಗಬೇಕು, ನಮಗಲ್ಲ. ಅವರು ನಾಚಿಕೆಪಟ್ಟುಕೊಳ್ಳಬೇಕು, ನಾವಲ್ಲ. ನಾನು ಇಂಥ ಮಗನನ್ನು ಹೆತ್ತಿದ್ದೇನಲ್ಲ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ" ಎಂದು ಪುಷ್ಪಾ ಹೇಳಿದ್ದಾರೆ.