ವರಮಹಾಲಕ್ಷ್ಮಿ ಹಬ್ಬದ ಈ ಶುಭ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರತಂಡಕ್ಕೆ ನಿಜಕ್ಕೂ ಲಕ್ಷ್ಮಿ ಒಲಿದಿದ್ದಾಳೆ. ಯಾಕೆಂದರೆ, ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರಕ್ಕೆ ಕರ್ನಾಟಕದಿಂದಲೇ ದಾಖಲೆ ಪ್ರಮಾಣದ ಗಳಿಕೆಯಾಗಿದೆ. ಈ ಮಧ್ಯೆ ‘ಟಾಕ್ಸಿಕ್’ ಚಿತ್ರದ ರಿಲೀಸ್ ಬ್ಯುಸಿಯಲ್ಲಿರುವ ನಟ ಯಶ್ ಅವರು ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ಕುಟುಂಬದ ಜೊತೆಗೆ ಆಚರಿಸಲು ಸಾಧ್ಯವಾಗಿಲ್ಲ. ಆದರೆ ವಿಡಿಯೋ ಕಾಲ್ ಮೂಲಕ ಶುಭಕೋರಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ 10 ಕೋಟಿ ರೂ. ಗಳಿಕೆ
ಶುಕ್ರವಾರ (ಆ.21) ಬೆಳಗ್ಗೆಯೇ ‘ಟಾಕ್ಸಿಕ್’ ಚಿತ್ರದ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಬೆಳಗ್ಗೆಯಿಂದಲೇ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಟಿಕೆಟ್‌ಗಳು ಮಾರಾಟವಾಗುತ್ತಿರುವುದು ವಿಶೇಷ. ಈಗಾಗಲೇ ರಾಜ್ಯದಿಂದ ಅಡ್ವಾನ್ಸ್ ಬುಕಿಂಗ್ ಮೂಲಕವೇ ಸುಮಾರು 10 ಕೋಟಿ ರೂ. ಸಂಗ್ರಹವಾಗಿದೆ. ಪ್ರತಿ ಗಂಟೆಗೆ 20-25 ಸಾವಿರ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಇನ್ನು, ಬುಧವಾರ (ಆ.26) ಬೆಳಗ್ಗಿನ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 800 ರಿಂದ 1900 ರೂ. ವರೆಗೂ ಇದೆ.
Ramayana: 'ರಾಮಾಯಣ'ದಲ್ಲಿ ನಟಿಸಲು ನೂರಾರು ಕೋಟಿ ರೂ. ಸಂಭಾವನೆ ಪಡೆದ ಯಶ್-ರಣಬೀರ್ ಕಪೂರ್
ಸದ್ಯ ಕರ್ನಾಟಕ, ಕೇರಳ, ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆಗಳಲ್ಲಿ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಆದರೆ ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ಇನ್ನೂ 'ಟಾಕ್ಸಿಕ್' ಟಿಕೆಟ್ ಬುಕಿಂಗ್ ಆರಂಭವಾಗಿಲ್ಲ. ಅಲ್ಲಿಯೂ ಆರಂಭವಾದಲ್ಲಿ, ಗಳಿಕೆಯ ಮೊತ್ತವು ಹೆಚ್ಚಾಗುವ ನಿರೀಕ್ಷೆ ಇದೆ.
ಹಬ್ಬಕ್ಕೆ ವಿಡಿಯೋ ಕಾಲ್ ಮಾಡಿದ ಯಶ್
ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಯಶ್ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಎಲ್ಲಾ ಹಬ್ಬಗಳನ್ನೂ ಶಾಸ್ತ್ರೋಕ್ತವಾಗಿ ಆಚರಿಸುತ್ತಾರೆ. ಯಶ್ ಮನೆಯಲ್ಲಿ ಹಬ್ಬದ ಆಚರಣೆ ಹೇಗಿತ್ತು ಎಂದು ತಿಳಿಯಲು ಹಾಗೂ ರಾಧಿಕಾ ಪಂಡಿತ್ ಹಂಚಿಕೊಳ್ಳುವ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ‘ಟಾಕ್ಸಿಕ್’ ಬಿಡುಗಡೆಯ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಯಶ್, ವರಮಹಾಲಕ್ಷ್ಮಿ ಹಬ್ಬದ ದಿನ ಮನೆಯಲ್ಲಿ ಇರಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ವಿಡಿಯೋ ಕಾಲ್ ಮಾಡಿ ಪತ್ನಿ ಮತ್ತು ಮಕ್ಕಳ ಜೊತೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
""ಭಕ್ತಿಗೆ ಅಂತರ ಮುಖ್ಯವಲ್ಲ ಎಂಬುದನ್ನು ವರಮಹಾಲಕ್ಷ್ಮಿ ಹಬ್ಬ ನಮಗೆ ನೆನಪಿಸುತ್ತದೆ. ಈ ಬಾರಿ ನಾವೆಲ್ಲರೂ ಒಟ್ಟಿಗೆ ಪೂಜೆ ಮಾಡಿರಲಿ ಅಥವಾ ಆನ್‌ಲೈನ್ ಮೂಲಕ ಪಾಲ್ಗೊಂಡಿರಲಿ, ತಾಯಿ ವರಮಹಾಲಕ್ಷ್ಮಿಯ ಆಶೀರ್ವಾದ ಎಲ್ಲರಿಗೂ ಸಮಾನವಾಗಿ ಸಿಕ್ಕಿದೆ" ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.