ಯಶ್ ಅಭಿನಯದ ʻಟಾಕ್ಸಿಕ್ʼ ಸಿನಿಮಾವು ಬರೀ ಟೀಸರ್‌ನಿಂದಲೇ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಅದೇ ಟೀಸರ್‌ನಿಂದ ವಿವಾದ ಕೂಡ ಹುಟ್ಟಿಕೊಂಡಿದೆ. ಟಾಕ್ಸಿಕ್ ವಿರುದ್ಧ ದೂರುಗಳು ಕೂಡ ದಾಖಲಾಗುತ್ತಿವೆ. ಇದೀಗ ದೂರುವೊಂದಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕು ಆಯೋಗವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಪತ್ರ ಬರೆದಿದ್ದು, ಕೂಡಲೇ ʻಟಾಕ್ಸಿಕ್ʼ ಚಿತ್ರದ ಟೀಸರ್ ಹಿಂಪಡೆಯುವಂತೆ ಸೂಚಿಸಿದೆ ಎಂಬ ಮಾಹಿತಿ ಕೇಳಿಬಂದಿದೆ.
ವಕೀಲರು ನೀಡಿದ ದೂರಿನ ಹಿನ್ನೆಲೆ
ಕೆಲ ದಿನಗಳ ಹಿಂದೆಯಷ್ಟೇ ಟಾಕ್ಸಿಕ್ ಚಿತ್ರದ ಟೀಸರ್ ವಿರುದ್ಧ ಹೈಕೋರ್ಟ್ ವಕೀಲ ಲೋಹಿತ್ ಹನುಮಾಪುರ್ ದೂರು ನೀಡಿದ್ದರು. ಆ ಬಗ್ಗೆ ಗಮನಹರಿಸಿರುವ ಮಕ್ಕಳ ಹಕ್ಕುಗಳ ಆಯೋಗವು ಈಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಪತ್ರ ಬರೆದಿದೆ. ದೂರಿನಲ್ಲಿ ಟಾಕ್ಸಿಕ್ ಸಿನಿಮಾ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿದ್ದು ಮಕ್ಕಳ ಹಕ್ಕುಗಳಿಗೆ ಧಕ್ಕೆ ಆಗುವಂತಹ ವಿಚಾರಗಳಿವೆ. ಹಾಗಾಗಿ ಈ ಟೀಸರ್ ಅನ್ನು ರದ್ದುಗೊಳಿಸುವಂತೆ ಮತ್ತು ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ದೂರು ನೀಡಲಾಗಿತ್ತು.
ಮಕ್ಕಳ ಹಕ್ಕುಗಳ ಆಯೋಗದ ಬರೆದ ಪತ್ರದಲ್ಲೇನಿದೆ?
ಟಾಕ್ಸಿಕ್ ಟೀಸರ್‌ನಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಧಕ್ಕೆ ಉಂಟಾಗುತ್ತಿದ್ದು, ಮಕ್ಕಳ ಹಕ್ಕುಗಳಿಗೆ ತೊಂದರೆ ಆಗುತ್ತಿದೆ ಎಂದ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟಾಕ್ಸಿಕ್ ಟೀಸರ್ ನಿರ್ಬಂಧ ಮಾಡಿ ಎಂದು ಸಲಹೆ ನೀಡುವುದರ ಜೊತೆಗೆ ಅಶ್ಲೀಲ ದೃಶ್ಯಗಳಿಗೆ ಪರ್ಯಾಯವಾಗಿ ಬೇರೆ ದೃಶ್ಯ ಬಳಸಲು ಟಾಕ್ಸಿಕ್ ಚಿತ್ರತಂಡಕ್ಕೂ ಮಕ್ಕಳ ಹಕ್ಕುಗಳ ಆಯೋಗ ಸಲಹೆ ನೀಡಿದೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಕೈಗೊಂಡ ಕ್ರಮದ ಬಗ್ಗೆ ವರದಿಯನ್ನ ಆಯೋಗಕ್ಕೆ ಕೊಡಬೇಕು ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶೀಧರ ಕೋಸುಂಬೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ರೀ ಎಂಟ್ರಿ?; ಟಾಕ್ಸಿಕ್ ಸ್ಟೈಲ್‌ನಲ್ಲಿ ಎಚ್‌ಡಿಕೆ ವಿಡಿಯೋ ರಿಲೀಸ್!
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಅಶ್ಲೀಲ ಹಾಗೂ ನೈತಿಕತೆಗೆ ವ್ಯತಿರಿಕ್ತವಾದ ದೃಶ್ಯಗಳಿವೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕೂಡ ಸೆನ್ಸಾರ್ ಮಂಡಳಿಗೆ (CBFC) ದೂರು ನೀಡಿದ್ದಾರೆ.
ಟೀಸರ್‌ನಲ್ಲಿ ಲೈಂಗಿಕವಾಗಿ ಪ್ರಚೋದಿಸುವ ಹಾಗೂ ಅಶ್ಲೀಲ ದೃಶ್ಯಗಳಿದ್ದು, ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಿನಿಮಾದ ಟೀಸರ್ ಸಾಮಾಜಿಕ ನೈತಿಕತೆಯ ಮಿತಿಯನ್ನು ಮೀರಿದೆ. ಆದ್ದರಿಂದ ಕೂಡಲೇ ಈ ದೃಶ್ಯಗಳನ್ನು ತೆಗೆದುಹಾಕಬೇಕು. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರಿಗೆ ದಿನೇಶ್ ದೂರು ನೀಡಿದ್ದರು. ಸೋಮವಾರ (ಜ.12) ಎಎಪಿ ಮಹಿಳಾ ಘಟಕ ಕೂಡ ಟಾಕ್ಸಿಕ್ ಟೀಸರ್ ವಿರುದ್ಧ ದೂರು ನೀಡಿತ್ತು.