ಬಾಲಿವುಡ್ ನಟ ತುಷಾರ್ ಕಪೂರ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಕರೆ ಬಂದಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಹೆಸರಿನಲ್ಲಿ ಬಂದ ಈ ಬೆದರಿಕೆಯಿಂದ ಬಾಲಿವುಡ್ ಅಂಗಳದಲ್ಲಿ ಮತ್ತೊಮ್ಮೆ ಆತಂಕದ ಛಾಯೆ ಮೂಡಿದೆ. ಆದರೆ, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿರುವ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು, ಇದು ಗ್ಯಾಂಗ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಲು ಕಿಡಿಗೇಡಿಗಳು ಎಸಗಿರುವ ಕೃತ್ಯವಿರಬಹುದು ಎಂದು ಬಲವಾಗಿ ಶಂಕಿಸಿದ್ದಾರೆ.
ತಕ್ಷಣ ಅಲರ್ಟ್ ಆದ ಪೊಲೀಸರು
ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕುಖ್ಯಾತ ಸದಸ್ಯ ‘ಹ್ಯಾರಿ ಬಾಕ್ಸರ್’ ಎಂದು ಪರಿಚಯಿಸಿಕೊಂಡು 5 ಕೋಟಿ ನೀಡುವಂತೆ ತುಷಾರ್ ಕಪೂರ್‌ಗೆ ಬೆದರಿಕೆಯೊಡ್ಡಿದ್ದಾನೆ. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ತುಷಾರ್ ಕಪೂರ್ ತಕ್ಷಣ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೂರಿನ ಗಂಭೀರತೆಯನ್ನು ಪರಿಗಣಿಸಿ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಆ್ಯಂಟಿ-ಎಕ್ಸ್‌ಟಾರ್ಶನ್ ಸೆಲ್ ಹಾಗೂ ಕ್ರೈಮ್ ಬ್ರಾಂಚ್‌ಗೆ ವಹಿಸಿದ್ದಾರೆ. ಇತ್ತೀಚೆಗಷ್ಟೇ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯ ಹೊಣೆಯನ್ನು ಇದೇ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಈ ಕರೆ ಬಂದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಬಿಷ್ನೋಯಿ ಗ್ಯಾಂಗ್ ಅಲ್ಲ?
ಘಟನೆಯ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಅಪರಾಧ ವಿಭಾಗದ ತಾಂತ್ರಿಕ ತಂಡ, ಬೆದರಿಕೆ ಕರೆಯ ಆಡಿಯೋ ಕ್ಲಿಪ್ ಅನ್ನು ವಶಕ್ಕೆ ಪಡೆದು ತೀವ್ರ ತಪಾಸಣೆಗೆ ಒಳಪಡಿಸಿದೆ. ಪೊಲೀಸರ ಬಳಿಯಿರುವ ಡೇಟಾಬೇಸ್‌ನಲ್ಲಿನ ಹ್ಯಾರಿ ಬಾಕ್ಸರ್‌ನ ಧ್ವನಿ ಮಾದರಿಗಳೊಂದಿಗೆ ಈ ಬೆದರಿಕೆ ಕರೆಯ ಧ್ವನಿಯನ್ನು ತಾಳೆ ಮಾಡಿ ನೋಡಲಾಗಿದೆ. ಆದರೆ ವಿಧಿವಿಜ್ಞಾನ ಮತ್ತು ತಾಂತ್ರಿಕ ವಿಶ್ಲೇಷಣೆಯಲ್ಲಿ ಎರಡೂ ಧ್ವನಿಗಳಿಗೂ ಯಾವುದೇ ಹೋಲಿಕೆ ಕಂಡುಬಂದಿಲ್ಲ. ಹೀಗಾಗಿ ತುಷಾರ್ ಕಪೂರ್‌ಗೆ ಬ್ಲಾಕ್‌ಮೇಲ್ ಮಾಡಿ, ಭಯ ಹುಟ್ಟಿಸಲು ಮತ್ತು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲು ಬಿಷ್ಣೋಯ್ ಗ್ಯಾಂಗ್ ಹೆಸರನ್ನು ಕರೆ ಮಾಡಿದ ವ್ಯಕ್ತಿ ಬಳಸಿದ್ದಾನೆ ಎಂಬುದು ಪ್ರಾಥಮಿಕವಾಗಿ ದೃಢಪಟ್ಟಿದೆ.
Anmol Bishnoi: ಲಾರೆನ್ಸ್ ಬಿಷ್ಣೋಯ್ ಸಹೋದರನಿಗೆ ಬಿಗ್ ಶಾಕ್; ಅಮೆರಿಕದಿಂದ ಗ್ಯಾಂಗ್‌ಸ್ಟರ್ ಅನ್ಮೋಲ್ ಗಡಿಪಾರು
ಇನ್ನೂ ಎಫ್‌ಐಆರ್ ದಾಖಲಾಗಿಲ್ಲ!
ಸದ್ಯ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಕರೆ ಬಂದ ಮೂಲ ಹಾಗೂ ಅದರ ಹಿಂದಿರುವ ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದಾರೆ. ತುಷಾರ್ ಕಪೂರ್ ಅವರು 1 ವಾರದ ಹಿಂದೆಯೇ ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದರೂ, ಇನ್ನೂ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿಲ್ಲ ಅನ್ನೋದು ಅಚ್ಚರಿ! ಕರೆಯ ಮೂಲ, ತಾಂತ್ರಿಕ ಸಾಕ್ಷ್ಯಗಳು ಹಾಗೂ ಕರೆ ಮಾಡಿದ ವ್ಯಕ್ತಿಯ ಗುರುತು ಪತ್ತೆಯಾದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದು, ಸದ್ಯ ತನಿಖೆ ಮುಂದುವರಿದಿದೆ.