ನಟ ದಿಲೀಪ್ ರಾಜ್ ಅವರು ನಮ್ಮೊಂದಿಗೆ ಇಲ್ಲವಾಗಿ ಒಂದು ದಿನ ಕಳೆದಿದೆ. ತಮ್ಮ ಪ್ರತಿಭೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವಾಗಲೇ ಕಾಲನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದರು. ದಿಲೀಪ್ ಅವರ ಅಗಲಿಕೆಯನ್ನು ಪತ್ನಿ ಶ್ರೀವಿದ್ಯಾ ಅವರಿಂದ ಅರಗಿಸಿಕೊಳ್ಳಲು ಸಾಧ್ಯವಿಲ್ಲ.
ದಿಲೀಪ್ ಪಾರ್ಥೀವ ಶರೀರದ ಎದುರು ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶ್ರೀವಿದ್ಯಾ ಅವರನ್ನು ಕಂಡು ಮರುಗದವರಿಲ್ಲ. ಇದೀಗ ಪತಿ ನಿಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಶ್ರೀವಿದ್ಯಾ.
ದಿಲೀಪ್ ಸದಾ ನಮ್ಮ ನಡುವೆಯೇ ಇರುತ್ತಾರೆ
"ನಮಗೆ ಬೆಂಬಲವಾಗಿ ನಿಂತಿರುವ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ಇಂದಿನಿಂದ ನಾವು ಅನುಭವಿಸುವ ಕಲೆ, ಸಿನಿಮಾ ಮತ್ತು ಪ್ರತಿಯೊಂದು ಕರುಣಾಮಯಿ ಕಾರ್ಯದ ರೂಪದಲ್ಲಿ ದಿಲೀಪ್ ಸದಾ ನಮ್ಮ ನಡುವೆಯೇ ಇರುತ್ತಾರೆ. ಅವರು ಶಾಂತಿಯಿಂದ ಹೋಗಲು ಮತ್ತು ಹೊಸ ಜೀವನವನ್ನು ಕಂಡುಕೊಳ್ಳಲು ನಾನು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯ ಮಾತ್ರ ಖಚಿತ - ನಾನು ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದು" ಎಂದು ಶ್ರೀವಿದ್ಯಾ ಹೇಳಿಕೊಂಡಿದ್ದಾರೆ.
ನವೆಂಬರ್‌ನಲ್ಲಿ 25ನೇ ಮದುವೆ ವಾರ್ಷಿಕೋತ್ಸವ
ದಿಲೀಪ್‌ರಾಜ್ ಮತ್ತು ವಿದ್ಯಾ ಅವರು 2001ರ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾಲೇಜು ಸಮಯದಲ್ಲಿಯೇ ಪ್ರೀತಿ ಮಾಡಿದ್ದ ಈ ಜೋಡಿ, ನಂತರ ಕುಟುಂಬದವರನ್ನು ಒಪ್ಪಿಸಿ ಮದುವೆ ಆಗಿದ್ದರು. ಆನಂತರ ವಿದ್ಯಾ ಐಟಿ ಕಂಪನಿಯಲ್ಲಿ ಎಚ್‌ಆರ್ ಆಗಿ ಬರೋಬ್ಬರಿ 16ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆನಂತರ ಪತಿಯೊಂದಿಗೆ ಧಾರಾವಾಹಿ ನಿರ್ಮಾಣದಲ್ಲಿ ಕೈಜೋಡಿಸಿದ್ದರು.
ʻಪ್ರೀತಿಸಿ ಮದುವೆಯಾಗಿದ್ದ ದಿಲೀಪ್ ರಾಜ್ʼ; ಅಗಲಿದ ಗೆಳೆಯನನ್ನು ನೆನೆದು ನಟ ನವೀನ್ ಕೃಷ್ಣ ಭಾವುಕ
ಪತಿಯ ಪಾರ್ಥಿವ ಶರೀರದ ಎದುರು ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿದ್ಯಾ, "ಇದು ಸರಿಯಲ್ಲ ಕಣೋ, ಎದ್ದೇಳು... ನನ್ನ ಬಿಟ್ಟು ಹೋಗಲ್ಲ ಅಂದಿದ್ದೆ, ಈಗ ನನ್ನನ್ನು ಒಬ್ಬಳನ್ನೇ ಬಿಟ್ಟು ಹೊರಟುಹೋದೆಯಾ? ನನ್ನ ಬಿಟ್ಟು ನೀನು ಹೋಗಲೇಬಾರದು. ನಮ್ಮನ್ನೆಲ್ಲ ಅಳಿಸಿ ನೀನು ನಗುನಗುತ್ತಾ ಹೋಗುತ್ತಿದ್ದೀಯಾ... ನಾನು ನಿನ್ನ ಜೊತೆಗೇ ಬರ್ತೀನಿ. ಈ ನವೆಂಬರ್‌ಗೆ ನಾವು ಮದುವೆಯಾಗಿ 25 ವರ್ಷ ತುಂಬುತ್ತಿತ್ತು, ಅದಕ್ಕೆ ಮುಂಚೆಯೇ ನನಗೆ ಎಂತಾ ಗಿಫ್ಟ್ ಕೊಟ್ಟೆ ಕಣೋ... ಪ್ಲೀಸ್ ಎದ್ದೇಳು" ಎಂದು ಕಣ್ಣೀರಿಡುತ್ತಿದ್ದರೆ, ಅಲ್ಲಿದ್ದವರ ಕಣ್ಣಾಲಿಗಳು ತುಂಬಿದ್ದವು.
ವಿದ್ಯಾ ಅವರು ಹಂಚಿಕೊಂಡ ಪೋಸ್ಟ್
ಯಶಸ್ವಿ ಧಾರಾವಾಹಿಗಳ ನಿರ್ಮಾಪಕರು
ದಿಲೀಪ್ - ವಿದ್ಯಾ ದಂಪತಿ ಕೇವಲ ಜೀವನದಲ್ಲಿ ಮಾತ್ರವಲ್ಲದೆ, ವೃತ್ತಿಜೀವನದಲ್ಲೂ ಸಮಾನವಾಗಿ ಯಶಸ್ಸು ಕಂಡವರು. ‘ವಿದ್ಯಾ ವಿನಾಯಕ’, ‘ಪಾರು’, ‘ಬ್ರಹ್ಮಗಂಟು’, ‘ಹಿಟ್ಲರ್ ಕಲ್ಯಾಣ’, ‘ಕೃಷ್ಣ ರುಕ್ಕು’ ರೀತಿಯ ಜನಪ್ರಿಯ ಧಾರಾವಾಹಿಗಳು ಹಾಗೂ ‘ಮಜಾಭಾರತ’ದಂತಹ ರಿಯಾಲಿಟಿ ಶೋಗಳನ್ನು ಜೊತೆಯಾಗಿ ನಿರ್ಮಾಣ ಮಾಡಿದ್ದರು.
ಪ್ರತಿ ಕ್ಷಣವನ್ನೂ ಜೊತೆಯಾಗಿ ಕಳೆಯುತ್ತಿದ್ದ ಈ ದಂಪತಿ, ಚಿತ್ರರಂಗದಲ್ಲಿ ಅತ್ಯಂತ ಅನ್ಯೋನ್ಯ ಜೋಡಿ ಎಂದೇ ಗುರುತಿಸಿಕೊಂಡಿದ್ದರು. ದಿಲೀಪ್ ರಾಜ್ ಅವರ ಪ್ರತಿ ಯಶಸ್ಸಿನಲ್ಲೂ ಶ್ರೀವಿದ್ಯಾ ಅವರ ಶ್ರಮವಿದ್ದರೆ, ಶ್ರೀವಿದ್ಯಾ ಅವರ ಪ್ರತಿ ನಿರ್ಧಾರಕ್ಕೂ ದಿಲೀಪ್ ಅವರ ಬೆಂಬಲವಿತ್ತು.