ಪಲ್ಮನರಿ ಫೈಬ್ರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಕಿರುತೆರೆ ನಟಿ ರಶ್ಮೀ ಲೀಲಾ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ರಶ್ಮಿ ಲೀಲಾ ಅವರು ಹಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.
ಆದರೆ, ಇದೀಗ ವಿಧಿಯಾಟದ ಮುಂದೆ ಅವರ ಪ್ರಯತ್ನ ಫಲಿಸಲಿಲ್ಲ. ಕಿರುತೆರೆಯಲ್ಲಿ ಸಕ್ರಿಯವಾಗಿರುವ ಸಂಭಾಷಣೆಕಾರ ಸಾರಕ್ಕಿ ಮಂಜು ಅವರು ತಮ್ಮ ಪತ್ನಿ ರಶ್ಮಿ ಲೀಲಾ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ, ಅದ್ಯಾವುದೂ ಕೈಗೂಡಲಿಲ್ಲ.
Actress Ayesha Khan: ಖ್ಯಾತ ಹಿರಿಯ ನಟಿ ನಿಗೂಢ ಸಾವು; ಒಂದು ವಾರದ ನಂತರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!
ಸಾರಕ್ಕಿ ಮಂಜು ಅವರ ಪ್ರಾರ್ಥನೆ ಫಲಿಸಲಿಲ್ಲ. 2019ರಿಂದಲೂ ರಶ್ಮಿ ಲೀಲಾಗೆ ಈ ಪಲ್ಮನರಿ ಫೈಬ್ರೋಸಿಸ್ ಕಾಯಿಲೆ ಇತ್ತು. ಶ್ವಾಸಕೋಶಗಳಲ್ಲಿ ಸಮಸ್ಯೆ ಉಂಟು ಮಾಡುವ ಈ ಕಾಯಿಲೆ, ಉಸಿರಾಟಕ್ಕೆ ತೊಂದರೆ ನೀಡುತ್ತದೆ. ಕೊನೆಗೆ ರಶ್ಮಿ ಲೀಲಾ ಅವರಿಗೆ ಲಂಗ್ಸ್ ಟ್ರಾನ್ಸ್‌ಪ್ಲಾಂಟ್ ಮಾಡಲಾಯಿತು. ಆದರೂ, ಅದು ಫಲಕಾರಿಯಾಗಲಿಲ್ಲ.
ಪೋಸ್ಟ್ ಹಂಚಿಕೊಂಡಿದ್ದ ರಶ್ಮಿ ಲೀಲಾ
"ಸೂಕ್ತ ದಾನಿದಾರರು ಲಭ್ಯರಾಗಿದ್ದು, ನಾನು ಲಂಗ್ ಟ್ರಾನ್ಸ್‌ಪ್ಲಾಂಟ್ (ಫೆಫಸು ಪ್ರತಿರೋಪಣ) ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. ಯಶಸ್ವಿಯಾದ ಶಸ್ತ್ರಚಿಕಿತ್ಸೆ ಮತ್ತು ಸುಗಮವಾದ, ಆರೋಗ್ಯಕರ ಚೇತರಿಕೆಗೆ ನಿಮ್ಮ ಪ್ರಾರ್ಥನೆಗಳು, ಆಶೀರ್ವಾದಗಳು ಮತ್ತು ಸದ್ಭಾವನೆಗಳನ್ನು ಹೃದಯಪೂರ್ವಕವಾಗಿ ಕೋರುತ್ತೇನೆ. ಈ ಚಿಕಿತ್ಸೆಗೆ ಬಹಳಷ್ಟು ವೈದ್ಯಕೀಯ ವೆಚ್ಚಗಳು ಅಗತ್ಯವಿದ್ದು, ಈ ಪ್ರಯಾಣವನ್ನು ನಾವು ಒಬ್ಬರೇ ಎದುರಿಸಲು ಸಾಧ್ಯವಿಲ್ಲ. ಕೈಮುಗಿದು, ನೀವು ನೀಡಬಹುದಾದ ಯಾವುದೇ ಆರ್ಥಿಕ ಸಹಾಯವನ್ನು ವಿನಮ್ರವಾಗಿ ವಿನಂತಿಸುತ್ತೇನೆ. ನಿಮ್ಮ ಪ್ರಾರ್ಥನೆಗಳು, ಹಂಚಿಕೆಗಳು ಮತ್ತು ಸಹಾಯ ಈ ಕಠಿಣ ಸಮಯದಲ್ಲಿ ನನಗೆ ಧೈರ್ಯ ನೀಡುತ್ತಿವೆ. ಸಣ್ಣ ಸಹಾಯವೂ ನನ್ನ ಹಾಗೂ ನನ್ನ ಕುಟುಂಬದ ಪಾಲಿಗೆ ಅಪಾರ ಮೌಲ್ಯ ಹೊಂದಿದೆ. ಹೃದಯಪೂರ್ವಕ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು ರಶ್ಮಿ ಲೀಲಾ.
ಪ್ರಾರ್ಥಿಸಿಬಿಡಿ ಎಂದಿದ್ದ ಸಾರಕ್ಕಿ ಮಂಜು
ಇಂದು ಬೆಳಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಸಾರಕ್ಕಿ ಮಂಜು, "ಹೃದಯದ ಬಡಿತ ತೀವ್ರ ಇಳಿಮುಖ ಆಗ್ತಿದೆ. ಕೊನೆಯ ಬಾರಿಗೆ ಒಂದು ಸಲ, ಒಂದೇ ಒಂದು ಸಲ ಈ ನನ್ನ ಜೀವ ರಶ್ಮಿ ಲೀಲಾ ಉಳಿದು ಬಿಡಲಿ, ಉಳಿಸಿಕೊಡಲೆಂದು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಬಿಡಿ" ಎಂದು ಪೋಸ್ಟ್ ಹಾಕಿದ್ದರು. ಆದರೆ ಈಗ್ಗೆ ಕೆಲ ಗಂಟೆಗಳ ಹಿಂದೆ, "ನಮ್ಮ ಪ್ರಾಣ ಹೊರಟು ಹೋಯ್ತು" ಎಂದು ಬರೆದುಕೊಂಡಿದ್ದಾರೆ.
ಸಾರಕ್ಕಿ ಮಂಜು ಹಂಚಿಕೊಂಡ ಪೋಸ್ಟ್
ರಶ್ಮಿ ಲೀಲಾ ಅವರು ‘ಬಾಂಧವ್ಯ’, ‘ಕಾವ್ಯಾಂಜಲಿ’, ‘ಗಗನ ಕುಸುಮ’, ‘ಪಾಪಾ ಪಾಂಡು’, ‘ಗೋಧೂಳಿ’, ‘ಕವಲುದಾರಿ’, ‘ಮಗಳು ಜಾನಕಿ’, ‘ಕನ್ನಡಿ’, ‘ಹೊಗ್ಲಿ ಬಿಡಿ ಸರ್’, ‘ಆನಂದ ಸಾಗರ’ ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.